ಬಳ್ಳಾರಿ: ರಮೇಶ್ ಜಾರಕಿಹೊಳಿ ಅವರ ಸಂಪರ್ಕದಲ್ಲಿ 20 ಜನ ಕಾಂಗ್ರೆಸ್ ಶಾಸಕರಿದ್ದಾರೆ ಎಂಬ ಹೇಳಿಕೆ ವಿಚಾರಕ್ಕೆ ಬಳ್ಳಾರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ರಮೇಶ್ ಜಾರಕಿಹೊಳಿ ಅವರಿಗೆ ಗಾಳಿಯಲ್ಲಿ ಗುಂಡು ಹಾರಿಸೋ ಚಾಳಿ ಇದೆ ಎಂದು ವ್ಯಂಗ್ಯವಾಡಿದ್ದಾರೆ.
ಶನಿವಾರ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಬಗ್ಗೆ ನಾನು ಹೆಚ್ಚು ಮಾತಾಡೊಲ್ಲ. ಬಿಜೆಪಿಯವರ ಆಂತರಿಕ ಕಲಹದ ಬಗ್ಗೆ ಕೂಡ ನಾವು ಮಾತಾಡಲ್ಲ. ನಾವು ಅವರ ಸರ್ಕಾರ ಬೀಳಿಸಬೇಕಂತ ಏನು ಪ್ರಯತ್ನ ಮಾಡ್ತಿಲ್ಲ. ನಮಗೆ ಅದರ ಅವಶ್ಯಕತೆ ಇಲ್ಲ ಎಂದರು. ಕೊರೊನಾ ಇದೆ. ನಮಗೆ ಜನ ಮುಖ್ಯ. ಅಧಿಕಾರಕ್ಕೆ ಆಸೆ ಪಡೋಲ್ಲ ಎಂದರು.
ಕೇಂದ್ರದ 20 ಲಕ್ಷ ಕೋಟಿ ಪ್ಯಾಕೇಜ್ ಅಂಗೈಯಲ್ಲಿ ಅರಮನೆಯಾಗಿದೆ. ಅದೊಂದು ಬೋಗಸ್ ಪ್ಯಾಕೇಜ್. ಸಂಕಷ್ಟದಲ್ಲಿರೋರಿಗೆ ಸಹಾಯ ಬದಲು ಸಾಲ ಕೊಡೀ¤ವಿ ಅಂತಾರೆ. ರೈತರ ಖಾತೆಗೆ ನೇರವಾಗಿ ಹಣ ಹಾಕಬೇಕು ಎಂದು ಒತ್ತಾಯಿಸಿದರು. ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಖರೀದಿಯಲ್ಲಿ ಅವ್ಯವಹಾರ ಆಗಿದೆ ಎಂದು ಅವರು ತಿಳಿಸಿದರು.
ಕೆಪಿಸಿಸಿ ಹೊಸ ಅಧ್ಯಕ್ಷರ ನೇಮಕ ಆಗಿದೆ. ಜೂನ್ 7ಕ್ಕೆ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಮಾಡುತ್ತಾರೆ. 200 ಜನ ಸೇರ್ತಾರೆ ಅಷ್ಟೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ಆಯೋಜಿಸುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಮೊಹಮ್ಮದ್ ರಫೀಕ್ ಇತರರಿದ್ದರು.