Advertisement

ಡಿ. 6-9: ರಾಜ್ಯ ಶಾರ್ಟ್‌ ಕೋರ್ಸ್‌ ಅಕ್ವೆಟಿಕ್‌ ಚಾಂಪಿಯನ್‌ಶಿಪ್‌

02:12 PM Dec 05, 2018 | |

ಪುತ್ತೂರು: ಕರ್ನಾಟಕ ಈಜು ಅಸೋಸಿಯೇಶನ್‌, ಪುತ್ತೂರು ಅಕ್ವೆಟಿಕ್‌ ಕ್ಲಬ್‌ ಆಶ್ರಯದಲ್ಲಿ ಡಿ. 6ರಿಂದ 9ರ ವರೆಗೆ ಪರ್ಲಡ್ಕ ಡಾ| ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ಕರ್ನಾಟಕ ರಾಜ್ಯ ಶಾರ್ಟ್‌ ಕೋರ್ಸ್‌ ಅಕ್ವೆಟಿಕ್‌ ಚಾಂಪಿಯನ್‌ಶಿಪ್‌ ನಡೆಯಲಿದೆ ಎಂದು ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ ಹೇಳಿದರು.

Advertisement

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಕರ್ನಾಟಕ ಈಜು ಅಸೋಸಿಯೇಶನ್‌ ಎರಡು ಸ್ಪರ್ಧೆಗಳನ್ನು ಏರ್ಪಡಿಸುತ್ತದೆ. ಇದರಲ್ಲಿ ಶಾರ್ಟ್‌ ಕೋರ್ಸ್‌ ಸ್ಪರ್ಧೆಯ ಅವಕಾಶ ಈ ಬಾರಿ ದ.ಕ. ಜಿಲ್ಲೆಯ ಪುತ್ತೂರಿಗೆ ಲಭಿಸಿದೆ. ಇಷ್ಟು ದೊಡ್ಡ ಸ್ಪರ್ಧೆ ಇದೇ ಮೊದಲ ಬಾರಿಗೆ ತಾ| ಕೇಂದ್ರದಲ್ಲಿ ನಡೆಯುತ್ತಿರುವುದು ಎಂದರು.

ಡಿ. 6ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಎಸ್‌. ಶಶಿಕಾಂತ್‌ ಸೆಂಥಿಲ್‌ ಅವರು ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಸಂಸದ ನಳಿನ್‌ ಕುಮಾರ್‌ ಕಟೀಲು ಮುಖ್ಯ ಅತಿಥಿಯಾಗಿರುವರು. ಎಸಿ ಎಚ್‌.ಕೆ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು. ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೆಎಸ್‌ಎ ಅಧ್ಯಕ್ಷ ಗೋಪಾಲ್‌ ಬಿ. ಹೊಸೂರು, ಕೆಎಸ್‌ಎ ಚೇರ್‌ಮನ್‌ ನೀಲ್‌ ಕಾಂತ್‌ ರಾವ್‌ ಜಗದಾಳೆ, ಕಾರ್ಯದರ್ಶಿ ಸತೀಶ್‌ ಕುಮಾರ್‌ ಎಂ., ಬಾಲವನ ಈಜು ಕೊಳ ಸಮಿತಿ ಅಧ್ಯಕ್ಷ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಅತಿಥಿಯಾಗಿರುವರು ಎಂದು ವಿವರಿಸಿದರು.

ನಾಲ್ಕು ದಿನಗಳು ಬೆಳಗ್ಗೆ 8.30ರಿಂದ ಮಧ್ಯಾಹ್ನ 2 ಗಂಟೆವರೆಗೆ ಪ್ರಥಮ ಸುತ್ತಿನ ಸ್ಪರ್ಧೆಗಳು ನಡೆಯಲಿವೆ. ಐದು ವಿಭಾಗಗಳಿಂದ ಅತ್ಯುತ್ತಮ ಪ್ರದರ್ಶನ ನೀಡಿದ 8 ಮಂದಿ ಜೆ 5.30ರಿಂದ 7.30ರ ವರೆಗೆ ಹೊನಲು ಬೆಳಕಿನಲ್ಲಿ ನಡೆಯುವ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಐದು ವಿಭಾಗಗಳಲ್ಲಿ 140 ಸ್ಪರ್ಧೆಗಳಿವೆ. ಪ್ರತಿ ವಿಭಾಗದ ಅಂತಿಮ ಆಯ್ಕೆಯ ಸ್ಪರ್ಧಿಗಳು ದಕ್ಷಿಣ ವಲಯ ಅಕ್ವೆಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ ಎಂದರು.

ಜೀವನದಲ್ಲಿ ಈಜು ಕೌಶಲದ ಪ್ರಾಮುಖ್ಯ ಸಾರುವ ಸಂದೇಶವನ್ನು ಜನರಲ್ಲಿ ಮೂಡಿಸುವ ಜವಾಬ್ದಾರಿಯಿಂದ ಈ ಚಾಂಪಿಯನ್‌ಶಿಪನ್ನು ಆಯೋಜಿಸಲಾಗುತ್ತಿದೆ. ಸ್ವರಕ್ಷಣೆಯ ನಿಟ್ಟಿನಲ್ಲಿ ಈಜು ಕಲಿಕೆಯ ಪ್ರೇರೇಪಣೆ ಅಗತ್ಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಜು ಕಲಿಕೆಯ ಆಸಕ್ತಿ, ಅನಿವಾರ್ಯತೆಯನ್ನು ಅರಿತುಕೊಳ್ಳಲು ಈ ಚಾಂಪಿಯನ್‌ಶಿಪ್‌ ಸ್ಫೂರ್ತಿ ತುಂಬಲಿದೆ ಎಂದರು. ಬಾಲವನ ಈಜುಕೊಳ ಸಮಿತಿ ಅಧ್ಯಕ್ಷ ಸೀತಾರಾಮ ರೈ ಸವಣೂರು, ಅಕ್ವೆಟಿಕ್‌ ಕ್ಲಬ್‌ ಅಧ್ಯಕ್ಷೆ ಪ್ರತಿಮಾ ಹೆಗ್ಡೆ, ತರಬೇತುದಾರರಾದ ಪಾರ್ಥ ವಾರಣಾಶಿ, ನಿರೂಪ್‌ ಜಿ.ಆರ್‌., ವೆಂಕಟ್‌ ಉಪಸ್ಥಿತರಿದ್ದರು.

Advertisement

800ಕ್ಕೂ ಅಧಿಕ ಸ್ಪರ್ಧಿಗಳು
ಸಬ್‌ಜೂನಿಯರ್‌, ಜೂನಿಯರ್‌, ಸೀನಿಯರ್‌ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. 25 ಮೀ. ಈಜುಕೊಳದಲ್ಲಿ ಇದೇ ಮೊದಲ ಬಾರಿಗೆ ಸೀನಿಯರ್‌ ಶಾರ್ಟ್‌ ಕೋರ್ಸ್‌ ನಡೆಯುತ್ತಿದೆ. ಒಟ್ಟು ಐದು ವಿಭಾಗಗಳಲ್ಲಿ 140 ಸ್ಪರ್ಧೆಗಳು ನಡೆಯಲಿವೆ. 800ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಸಬ್‌ ಜೂನಿಯರ್‌ 2 ವಿಭಾಗದಲ್ಲಿ (9ರಿಂದ 10 ವರ್ಷ ಹಾಗೂ 11ರಿಂದ 12 ವರ್ಷ), ಜೂನಿಯರ್‌ 2 ವಿಭಾಗ (13ರಿಂದ 14 ವರ್ಷ ಹಾಗೂ 15ರಿಂದ 17 ವರ್ಷ), ಸೀನಿಯರ್‌ (18 ವರ್ಷ ಮೇಲ್ಪಟ್ಟ) ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಸಹಾಯಕ ಆಯುಕ್ತರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next