ಹುಬ್ಬಳ್ಳಿ: ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಹಾಗೂ ಪರ್ಯಾಯ ಕೃಷಿ ಧೋರಣೆಗಾಗಿ ಬೆಳಗಾವಿ ಚಲಗಾಲದ ಅಧಿವೇಶನಕ್ಕೆ ಪೂರ್ವಭಾವಿಯಾಗಿ ರಾಜ್ಯಮಟ್ಟದ ರೈತರ ಅಧಿವೇಶನವನ್ನು ಡಿ.12ರಂದು ಬೆಳಗ್ಗೆ11:00 ಗಂಟೆಗೆ ಬೆಳಗಾವಿ ಕಣಬರಗಿ ರಸ್ತೆಯ ಸಂಕಲ್ಪ ಗಾರ್ಡನ್‌ದಲ್ಲಿ ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನಾಂದೋಲನಗಳಮಹಾಮೈತ್ರಿ ಮುಖ್ಯಸ್ಥ ಎಸ್.ಆರ್. ಹಿರೇಮಠ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬಸವಂತಪ್ಪ ಸೊಪ್ಪಿನ, ರೈತ ಮತ್ತು ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಯಾದ ಸಂಯುಕ್ತ ಹೋರಾಟ-ಕರ್ನಾಟಕ ಸಂಘಟಿಸಿರುವರೈತರ ಅಧಿವೇಶನವನ್ನು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ)ದ ರಾಷ್ಟ್ರೀಯ ನಾಯಕ ಡಾ| ಅಶೋಕ ಧವಳೆ ಉದ್ಘಾಟಿಸಲಿದ್ದಾರೆ ಎಂದರು.
ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಸಂಘಟನೆಗಳರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ, ಬಡಗಲಪುರ ನಾಗೇಂದ್ರ, ಎಚ್.ವಿ.ದಿವಾಕರ, ನೂರ್ ಶ್ರೀಧರ, ಮಾವಳ್ಳಿ ಶಂಕರ, ಡಿ.ಎಚ್. ಪೂಜಾರ, ಕುರುಬೂರುಶಾಂತಕುಮಾರ, ಸಿದ್ದನಗೌಡ ಮೋದಗಿ, ದೇವಿ, ಕಾರ್ಮಿಕ ನಾಯಕರಾದ ಪಿಆರ್‌ಎಸ್ ಮಣಿ, ಕೆ.ವಿ. ಭಟ್, ಕೃಷಿ ಅರ್ಥಶಾಸ್ತ್ರಜ್ಞಡಾ| ಪ್ರಕಾಶ ಕಮ್ಮರಡಿ, ಬಿ.ಆರ್. ಪಾಟೀಲ, ಚುಕ್ಕಿ ನಂಜುಂಡಸ್ವಾಮಿ, ಕೆ.ಟಿ. ಗಂಗಾಧರ ಆಗಮಿಸಲಿದ್ದಾರೆ ಎಂದರು.
ರೈತರ ಅಧಿವೇಶನದಲ್ಲಿ ಪ್ರಮುಖವಾಗಿ ರಾಜ್ಯದಲ್ಲಿ ಜಾರಿಗೊಳಿಸಿರುವ ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯೆ ಕಾಯ್ದೆಗಳ ತಿದ್ದುಪಡಿಗಳನ್ನು ಕೂಡಲೇ ರದ್ದುಪಡಿಸಿ ಹಿಂಪಡೆಯಬೇಕು. ವಿಪರೀತ ಮಳೆಯಿಂದ ಲಕ್ಷಾಂತರ ಹೆಕ್ಟೇರ್‌ಗಳಲ್ಲಿ ಸಾವಿವಾರುಕೋಟಿ ರೂ. ಬೆಳೆ ನಷ್ಟವಾಗಿದ್ದು, ಆಹಾರಧಾನ್ಯ ಬೆಳೆಗಳಿಗೆ ಎಕರೆಗೆ ಕನಿಷ್ಠ 25ಸಾವಿರರೂ., ತರಕಾರಿ, ತೋಟಗಾರಿಕೆ ಬೆಳೆಗಳಿಗೆ ಎಕರೆಗೆ ಕನಿಷ್ಠ 1ಲಕ್ಷ ರೂ. ಬೆಳೆ ನಷ್ಟ ಪರಿಹಾರ ನೀಡಬೇಕು. ರಾಜ್ಯ ಸರಕಾರ ಸಂಕಷ್ಟದಲ್ಲಿರುವ ಹೈನುಗಾರಿಕೆ ರೈತರಿಗೆನೀಡುತ್ತಿರುವ ಪ್ರೋತ್ಸಾಹಧನವನ್ನು 5ರಿಂದ 15ರೂ.ಗೆ ಹೆಚ್ಚಿಸಬೇಕು. ಭೂಸ್ವಾಧೀನ ಕಾಯ್ದೆ ತಿದ್ದುಪಡಿಗಳನ್ನು ರದ್ದು ಮಾಡಬೇಕು. ವ್ಯಾಪಕ ಕೃಷಿ ಸಾಲ ನೀಡಿಕೆ, ವಿಶೇಷ ಸಂದರ್ಭಗಳಲ್ಲಿ ಸಾಲಮನ್ನಾದಂತಹ ಅಂಶಗಳಿಗೆ ಸಂಬಂಧಿಸಿದ ಋಣಮುಕ್ತ ಕಾಯ್ದೆ ಜಾರಿಗೊಳಿಸಬೇಕು. ಕನಿಷ್ಠ ಬೆಂಬಲ ಬೆಲೆ ಕಾನೂನು ರಚಿಸಬೇಕು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಹಿಂಪಡೆಯಬೇಕು ಸೇರಿದಂತೆವಿವಿಧ ಬೇಡಿಕೆಗಳ ಕುರಿತು ಸರಕಾರಕ್ಕೆ ಆಗ್ರಹಿಸಲಾಗುವುದು. ಇವುಗಳನ್ನುಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಕಿಸಾನ್ ಮಹಾ ಪಂಚಾಯತ್‌ಗಳನ್ನು ಸಂಘಟಿಸಿ ದೆಹಲಿ ಮಾದರಿಯಲ್ಲಿಹೋರಾಟ ನಡೆಸಲು ಸಂಯುಕ್ತ ಸಂಘಟನೆ ನಿರ್ಧರಿಸಿದೆ ಎಂದರು.
ವೆಂಕನಗೌಡ ಪಾಟೀಲ, ನಾಗಪ್ಪ ಉಂಡಿ, ಕಲ್ಮೇಶ ಲಿಗಾಡಿ, ಶರಣು ಗೋನವಾರ,ಲೀಲಾವತಿ ವಾಘಮಾಡಿ, ರವಿರಾಜ ಕಾಂಬಳೆ ಮೊದಲಾದವರಿದ್ದರು.