Advertisement

ಏ.3-8ರವರೆಗೆ ರಾಜ್ಯಮಟ್ಟದ ಭಜನಾ ಸ್ಪರ್ಧೆ

05:50 PM Mar 05, 2022 | Team Udayavani |

ಹುಬ್ಬಳ್ಳಿ: ಇಲ್ಲಿನ ಸದ್ಗುರು ಸಿದ್ಧಾರೂಢಸ್ವಾಮಿ ಮಠದಲ್ಲಿ ಏಪ್ರಿಲ್‌ 3ರಿಂದ 8ರವರೆಗೆ ಏಳನೇ ವರ್ಷದ ರಾಜ್ಯಮಟ್ಟದ ಭಜನಾ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಭಜನಾ ಸ್ಪರ್ಧೆಯ ಅಧ್ಯಕ್ಷ ಶಾಮಾನಂದ ಪೂಜೇರಿ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಭಜನಾ ಸಂಸ್ಕೃತಿ ಉಳಿಸುವುದರ ಜತೆಗೆ ಸದ್ಗುರು ಸಿದ್ಧಾರೂಢಸ್ವಾಮಿಯವರು ಪ್ರಚಾರ ಮಾಡಿದ್ದ ನಿಜಗುಣರ ಶಾಸ್ತ್ರ ಹಾಗೂ ಕೈವಲ್ಯ ಪದ್ಧತಿ ಮುಂದುವರಿಕೆ ನಿಟ್ಟಿನಲ್ಲಿ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ಭಜನಾ ತಂಡ ಮೂರು ಪದಗಳನ್ನು ಹಾಡಲು ಅವಕಾಶವಿದೆ. ಒಟ್ಟು 18 ನಿಮಿಷಗಳಲ್ಲಿ ಮೂರು ಪದ ಮುಗಿಸಬೇಕಾಗಿದೆ.

ಮೂರು ಪದಗಳಲ್ಲಿ ಎರಡು ಪದಗಳನ್ನು ಕೈವಲ್ಯ ಸಾಹಿತ್ಯದ ಮೇಲೆ ಕಡ್ಡಾಯವಾಗಿ ಹಾಡಬೇಕು. ಇನ್ನೊಂದು ಪದ ಸದ್ಗುರು ಸಿದ್ಧಾರೂಢಸ್ವಾಮಿ ಮೇಲಿನ ಪದ, ದಾಸರ ಪದ, ಶಿಶುನಾಳ ಶರೀಫರ ಪದ, ವಚನ ಸಾಹಿತ್ಯದಲ್ಲಿ ಯಾವುದಾದರೂ ಒಂದನ್ನು ಹಾಡಬಹುದಾಗಿದು. ಇಲ್ಲವೆ ಮೂರು ಪದಗಳನ್ನು ಕೈವಲ್ಯ ಸಾಹಿತ್ಯದ ಮೇಲೆಯೇ ಹಾಡಬಹುದಾಗಿದೆ. ಒಂದು ಭಜನಾ ತಂಡದಲ್ಲಿ ಕನಿಷ್ಠ 6 ಜನ, ಗರಿಷ್ಠ 10 ಜನ ಎಂದು ನಿಗದಿ ಪಡಿಸಲಾಗಿದೆ. ಪ್ರತಿ ದಿನ 50 ತಂಡಗಳಿಗೆ ಭಜನೆಗೆ ಅವಕಾಶ ನೀಡಲಾಗುತ್ತದೆ ಎಂದರು.

ಏ.3ರಂದು ಬೆಳಿಗ್ಗೆ 10:30ಗಂಟೆಗೆ ಶ್ರೀಮಠದ ಮುಖ್ಯ ಆಡಳಿತಾಧಿಕಾರಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಮೇಶ ಮ.ಅಡಿಗ ಅವರು ಭಜನಾ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಸಿದ್ಧಾರೂಢ ಪರಂಪರೆಯ ವಿವಿಧ ಮಠಾಧೀಶರು, ಟ್ರಸ್ಟ್‌ ಕಮಿಟಿಯವರು ಪಾಲ್ಗೊಳ್ಳಲಿದ್ದಾರೆ. ಏ.7ರಂದು ಸ್ಪರ್ಧೆಯ ಅಂತಿಮ ಸುತ್ತು ನಡೆಯಲಿದ್ದು, ಏ.8ರಂದು ವಿಜೇತ ತಂಡಗಳಿಗೆ ಬಹುಮಾನ ನೀಡಲಾಗುತ್ತದೆ.ಕಳೆದ ವರ್ಷ ರಾಜ್ಯಮಟ್ಟದ ಭಜನಾ ಸ್ಪರ್ಧೆಗೆ ಕೋವಿಡ್‌ ನಡುವೆಯೂ ಸುಮಾರು 136 ತಂಡಗಳು ಭಾಗವಹಿಸಿದ್ದವು.

ಈ ಬಾರಿ ಸುಮಾರು 300 ತಂಡಗಳು ಭಾಗಿಯಾಗುವ ನಿರೀಕ್ಷೆ ಇದೆ. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 95,000 ರೂ., ದ್ವಿತೀಯ 75,000, ತೃತೀಯ 6,5000 ರೂ. ನಗದು ನೀಡಲಾಗುತ್ತಿದ್ದು, ಸಮಾಧಾನಕರ ಬಹುಮಾನವಾಗಿ ಸುಮಾರು 10 ತಂಡಗಳಿಗೆ ತಲಾ 8,500ರೂ.ಗಳನ್ನು, 16 ವರ್ಷದೊಳಗಿನ ಬಾಲಕ-ಬಾಲಕಿಯರ ತಲಾ ಒಂದು ತಂಡಕ್ಕೆ ಪ್ರತಿಭಾ ಪುರಸ್ಕಾರವಾಗಿ 9,500 ರೂ., ಮಹಿಳಾ ಭಜನಾ ತಂಡಕ್ಕೆ 9,500 ರೂ. ನಗದು ಹಾಗೂ ನೆನಪಿನ ಕಾಣಿಕೆಗಳನ್ನು ನೀಡಲಾಗುತ್ತದೆ.

Advertisement

ಉತ್ತಮ ಇಬ್ಬರು ಉತ್ತಮ ಹಾಡುಗಾರರಿಗೆ ತಲಾ 2,500ರೂ., ಇಬ್ಬರು ಉತ್ತಮ ಹಾರ್ಮೋನಿಯಂ ವಾದರು ಹಾಗೂ ಇಬ್ಬರು ತಬಲಾ, ಇಬ್ಬರು ಉತ್ತಮ ತಾಳ ವಾದಕರು, ಉತ್ತಮ ಧಮಡಿ ವಾದರಿಗೆ ತಲಾ 2,500ರೂ. ಗಳನ್ನು ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತಿ ಹೊಂದಿದ ಭಜನಾ ತಂಡದವರು ಏ.2ರೊಳಗೆ ಸದ್ಗುರು ಸಿದ್ಧಾರೂಢಸ್ವಾಮಿ ಮಠದ ಟ್ರಸ್ಟ್‌ ಕಮಿಟಿ ಕಚೇರಿಯಲ್ಲಿ ಹೆಸರು ನೋಂದಾಯಿಸಬೇಕು ಎಂದರು.

ಧ್ವನಿವರ್ಧಕ ಬಳಕೆ ಅವಧಿ ಕಡಿಮೆಗೆ ಕ್ರಮ: ರಾಜ್ಯಮಟ್ಟದ ಭಜನಾ ಸ್ಪರ್ಧೆ ಸಂದರ್ಭದಲ್ಲಿ ತಡರಾತ್ರಿವರೆಗೂ ಧ್ವನಿವರ್ಧಕ ಬಳಕೆ ಬಗ್ಗೆ ಸುತ್ತಮುತ್ತಲ ನಿವಾಸಿಗಳ ಆಕ್ಷೇಪ ಇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸ್ಪರ್ಧೆ ತಡರಾತ್ರಿವರೆಗೂ ನಡೆದರೂ ರಾತ್ರಿ 10:30ಗಂಟೆ ವೇಳೆಗೆ ಧ್ವನಿವರ್ಧಕ ಬಳಕೆ ನಿಲ್ಲಿಸಲಾಗುವುದು. ಧ್ವನಿ ವರ್ಧಕ ಇಲ್ಲದೆಯೇ ಭಜನಾ ಸ್ಪರ್ಧೆ ಮುಂದುವರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಶ್ರೀಮಠದ ಟ್ರಸ್ಟ್‌ ಕಮಿಟಿ ಚೇರ್ಮನ್ ಡಿ.ಡಿ.ಮಾಳಗಿ ಮಾತನಾಡಿ, ಸದ್ಗುರು ಸಿದ್ಧಾರೂಢರ ಕುರಿತಾಗಿ ಮಕ್ಕಳಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಎರಡು ವರ್ಷಗಳ ಹಿಂದೆ ಮಕ್ಕಳ ಜಾತ್ರೆ ಕಾರ್ಯಕ್ರಮ ಕೈಗೊಂಡಿದ್ದೆವು. ಮಕ್ಕಳಿಗೆ ಸಿದ್ಧಾರೂಢರ ಕುರಿತಾಗಿ ಗಾಯನ, ಭಾಷಣ, ಪ್ರಬಂಧ, ಚಿತ್ರಕಲೆ ಸ್ಪರ್ಧೆ ಏರ್ಪಡಿಸಿದ್ದೆವು. 1ರಿಂದ 7ನೇ ತರಗತಿ ವಿದ್ಯಾರ್ಥಿಗಳನ್ನು ಶ್ರೀಮಠಕ್ಕೆ ಕರೆತಂದು ಜಾತ್ರೆ ರೂಪ ನೀಡಲಾಗಿತ್ತು.ಕೋವಿಡ್‌ ಹಿನ್ನೆಲೆಯಲ್ಲಿ ತಾತ್ಕಾಲಿಕ ಸ್ಥಗಿತಗೊಂಡಿದ್ದು, ಮಕ್ಕಳ ಜಾತ್ರೆ ಮುಂದುವರಿಸುವ ಜತೆಗೆ ಪ್ರೌಢಶಾಲೆ, ಕಾಲೇಜು ಹಂತದವರೆಗೂ ಇದನ್ನು ಮುಂದುವರಿಸುವ ಚಿಂತನೆ ಇದೆ ಎಂದರು.

ಶ್ರೀಮಠದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ, ಸೌಲಭ್ಯಗಳ ಅಗತ್ಯವಿದೆ. ಕಳೆದ 15 ವರ್ಷಗಳಲ್ಲಿ ಸಾಕಷ್ಟು ಸೌಲಭ್ಯ ಸೌಲಭ್ಯ ನೀಡಲು ಒತ್ತು ನೀಡಲಾಗಿದೆ. ಅಡುಗೆ ಕೋಣೆ ಆಧುನೀಕರಣಗೊಂಡಿದೆ, ಭಕ್ತರು ತಂಗಲು ಕೊಠಡಿಗಳ ಸಂಖ್ಯೆ ಸಾಕಷ್ಟು ಹೆಚ್ಚಳವಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ಭಕ್ತರ ಭವನ ನಿರ್ಮಾಣಕ್ಕೆ ಯೋಜಿಸಲಾಗಿದೆ ಎಂದರು. ಟ್ರಸ್ಟ್‌ ಕಮಿಟಿಯ ಎಸ್‌.ಐ.ಕೋಳಕೂರ, ಗಣಪತಿ ನಾಯಕ, ವ್ಯವಸ್ಥಾಪಕ ಈರಣ್ಣ ತುಪ್ಪದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next