ಬೆಂಗಳೂರು: ಪೊಲೀಸರು ಅನಗತ್ಯ ಮಧ್ಯಪ್ರವೇಶಿಸಿ ವ್ಯಕ್ತಿಯೊಬ್ಬರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ ಎಂಬ ಆರೋಪ ವಿಚಾರಕ್ಕೆ ಹೈಕೋರ್ಟ್ ತೀವ್ರ ಆಕ್ರೋಶವ್ಯಕ್ತಪಡಿಸಿದ್ದು, ಕರ್ನಾಟಕ ” ಜಂಗಲ್ ರಾಜ್’ ಆಗಿ ಪರಿವರ್ತನೆಯಾಗಿದೆ ಎಂದು ಕಿಡಿಕಾರಿದೆ.
ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಸೂಚನೆ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಆಕ್ಷೇಪಿಸಿ ಡಿ. ವೆಂಕಟೇಶ್ ಗುಪ್ತಾ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್ ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರ ವಾದ ಆಲಿಸಿ ಪೊಲೀಸರ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಪೊಲೀಸರು ತಾವು ಮಾಡಿದ್ದೇ ಕಾನೂನು ಎಂದು ತಿಳಿದುಕೊಂಡಿದ್ದಾರೆಯೇ? ಪೊಲೀಸ್ ಠಾಣೆಗಳು ಮಧ್ಯವರ್ತಿ ಕೇಂದ್ರಗಳಾಗಿವೆಯೇ? ದೂರು ಬಂದರೆ ಸತ್ಯಾಸತ್ಯತೆ ಪರಿಶೀಲಿಸಿ ಪ್ರಕರಣ ದಾಖಲಿಸಬೇಕು. ಅದನ್ನು ಬಿಟ್ಟು ಅನಗತ್ಯವಾಗಿ ನಾಗರಿಕರಿಗೆ ಕಿರುಕುಳ ಕೊಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿತು.
ಜತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ವಿಭಾಗದ ಡಿಸಿಪಿ ಡಾ. ಶರಣಪ್ಪ ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿತು. ಅರ್ಜಿದಾರ ವೆಂಕಟೇಶ್ ಗುಪ್ತಾ ಹಾಗೂ ಶ್ರೀಹರಿ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣಾ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿದ ನ್ಯಾಯಪೀಠ, ಬಸವನಗುಡಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಹಾಗೂ ಇನ್ನಿತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ಸೆ. 24ಕ್ಕೆ ವಿಚಾರಣೆ ಮುಂದೂಡಿತು.
ಉದ್ಯಮಿ ಶ್ರೀಕಾಂತ್ ಎಂಬುವವರು ನೀಡಿದ ದೂರಿನ ಸತ್ಯಾಸತ್ಯತೆ ಪರಿಶೀಲಿಸದೆ ಡಿಸಿಪಿ, ಎಫ್ಐಆರ್ ದಾಖಲಿಸುವಂತೆ ಬಸವನಗುಡಿ ಪೊಲೀಸ್ ಠಾಣಾಧಿಕಾರಿಗೆ ಆದೇಶಿಸಿದ್ದಾರೆ. ಹೀಗಾಗಿ, ಪೊಲೀಸರು ಅನಗತ್ಯವಾಗಿ ಪ್ರಕರಣ ದಾಖಲಿಸಿಕೊಂಡಿದ್ದು ಪ್ರಕರಣ ರದ್ದುಪಡಿಸುವಂತೆ ಅರ್ಜಿದಾರರು ಕೋರಿದ್ದಾರೆ.