ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು (ಎಫ್ಕೆಸಿಸಿಐ) ಸೆ.19ರಿಂದ 21ರವರೆಗೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯಲಿರುವ ಜಾಗತಿಕ ವಾಣಿಜ್ಯೋದ್ಯಮ ಸಂಘಟನೆಗಳ ಸಮಾವೇಶದಲ್ಲಿ ಇದೇ ಮೊದಲ ಬಾರಿಗೆ ಪಾಲ್ಗೊಳ್ಳಲಿದೆ ಎಂದು ಸಂಸ್ಥೆ ಅಧ್ಯಕ್ಷ ಕೆ.ರವಿ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಭಾರತವು ವಿಶ್ವದಲ್ಲಿ ಅತ್ಯಂತ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಆರ್ಥಿಕವಾಗಿ ಬಲಿಷ್ಠಗೊಳ್ಳುತ್ತಿರುವ ಕುರಿತು ಸಮಾವೇಶದಲ್ಲಿ ಎಫ್ಕೆಸಿಸಿಐ ಪ್ರಬಂಧ ಮಂಡಿಸಲಿದೆ. ಕೈಗಾರಿಕೋದ್ಯಮದ ಹಲವು ವಿಷಯಗಳ ಕುರಿತು ಈ ಸಮ್ಮೇಳನದಲ್ಲಿ ವಿಷಯ ಪ್ರಸ್ತಾವನೆಗೊಳ್ಳಲಿದ್ದು, ಕಾರ್ಯಾಗಾರಗಳು ನಡೆಯಲಿವೆ ಎಂದು ಹೇಳಿದರು.
ಉದ್ದಿಮೆ ಮತ್ತು ವಹಿವಾಟು ಕ್ಷೇತ್ರಕ್ಕೆ ನೀಡಿದ ಕೊಡುಗೆ ಗುರುತಿಸಿ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿಗೆ ಈ ಬಾರಿ ಟ್ಯಾಲಿ ಸೊಲ್ಯೂಷನ್ಸ್ ಸಹ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಭರತ್ ಗೋಯೆಂಕಾ ಅವರನ್ನು ಆಯ್ಕೆ ಮಾಡಲಾಗಿದೆ. ಭರತ್ ಗೋಯೆಂಕಾ ಅವರ ನೇತೃತ್ವದಲ್ಲಿ ಸಂಸ್ಥೆಯು ವಹಿವಾಟು ನಿರ್ವಹಣಾ ಸಾಫ್ಟ್ವೇರ್ ಗೆ ಸಂಬಂಧಿಸಿದ್ದಾಗಿದ್ದು, ಸುಮಾರು 100ಕ್ಕೂ ಹೆಚ್ಚು ದೇಶಗಳಲ್ಲಿ 10 ಲಕ್ಷಕ್ಕೂ ಹೆಚ್ಚು ವಹಿವಾಟುದಾರರಿಗೆ ಸಂಸ್ಥೆ ಸರಳ ಸ್ವರೂಪದ ಸಾಫ್ಟ್ವೇರ್ ಒದಗಿಸಿದೆ ಎಂದು ತಿಳಿಸಿದರು.
ಎಫ್ಕೆಸಿಸಿಐ ಕೌಶಲ್ಯಾಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದೆ. ಇದೀಗ ಬೆಂಗಳೂರಿನಲ್ಲಿ ಕೌಶಲ್ಯಾಭಿವೃದ್ಧಿ ಸಂಸ್ಥೆ ಸ್ಥಾಪಿಸಲು ಉದ್ದೇಶಿಸಿದ್ದು, ದಾಬಸ್‌ಪೇಟೆ 2ನೇ ಹಂತದ ಬಡಾವಣೆಯಲ್ಲಿ ಕೈಗಾರಿಕಾ ವಲಯದಲ್ಲಿ ಶೇ.50ರ ರಿಯಾಯಿತಿ ದರದಲ್ಲಿ 1.5 ಎಕರೆ ಭೂಮಿ ಮಂಜೂರಾತಿಯನ್ನು ಕೆಐಎಡಿಬಿ ನೀಡಿದೆ ಎಂದರು. ರಾಜ್ಯ ಸರ್ಕಾರ ಪ್ರಕಟಿಸಿರುವ ಕೈಗಾರಿಕಾ ನೀತಿಗಳನ್ನೆಲ್ಲ ಕ್ರೋಢೀಕರಿಸಿ ಎಲ್ಲವೂ ಒಂದೇ ಸ್ಥಳದಲ್ಲಿ ದೊರೆಯುವಂತೆ ಮಾಡಲು ಎಫ್ಕೆಸಿಸಿಐ ಕಾರ್ಯೋನ್ಮುಖವಾಗಿದೆ.
ಇದರಿಂದ ಉದ್ದಿಮೆ ಆರಂಭಿಸುವವರಿಗೆ ಸ್ಟಾರ್ಟಅಪ್, ಆಹಾರ ಸಂಸ್ಕರಣೆ, ಐಟಿ ಮತ್ತು ಬಿಟಿ ನೀತಿ ಮತ್ತು ಕಾಲಕಾಲಕ್ಕೆ ಬದಲಾದ ಕೈಗಾರಿಕಾ ನೀತಿಗಳೆಲ್ಲ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ದೊರೆಯುವಂತೆ ದಾಬಸ್‌ಪೇಟೆಯಲ್ಲಿ ಸ್ಥಾಪನೆಯಾಗಲಿರುವ ಸಂಸ್ಥೆಯಲ್ಲಿ ವ್ಯವಸ್ಥೆ ಮಾಡಲು ಸರ್ಕಾರದ ಸಹಯೋಗದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.