ಬೆಂಗಳೂರು: ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡಿರುವ 21 ಜಿಲ್ಲೆಗಳ ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸುವ ಬಗ್ಗೆ ಹೈಕೋರ್ಟ್, ರಾಜ್ಯ ಚುನಾವಣ ಆಯೋಗದ ನಿಲುವನ್ನು ಕೇಳಿದೆ.
ಈ ಕುರಿತು ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಕೆ. ಸಿ. ಕೊಂಡಯ್ಯ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾ| ಎ. ಎಸ್. ಓಕ್ ಹಾಗೂ ನ್ಯಾ| ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ಚುನಾವಣ ಆಯೋಗದ ಪರ ವಾದ ಮಂಡಿಸಿದ ಕೆ.ಎನ್. ಫಣೀಂದ್ರ ಅವರು, ಈಗಾಗಲೇ ರಾಜ್ಯದ 21 ಜಿಲ್ಲೆಗಳ ಗ್ರಾಮ ಪಂಚಾಯತ್‌ಗಳ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಉಳಿದ 9 ಜಿಲ್ಲೆಗಳ ಪೈಕಿ 8ರಲ್ಲಿ ಆ.11ಕ್ಕೆ ಮೀಸಲಾತಿ ಪ್ರಕಟಿಸಲಾಗುವುದು. ಬೆಂಗಳೂರು ನಗರ ಜಿಲ್ಲಾಡಳಿತ ಆ. 24ರವರೆಗೆ ಸಮಯ ಕೇಳಿದೆ. ಸೆಪ್ಟಂಬರ್ ಮೊದಲ ವಾರದಲ್ಲಿ ಮತದಾರರ ಪಟ್ಟಿ ಅಂತಿಮಗೊಳಿಸಲಾಗುವುದು ಎಂದರು.
ಅರ್ಜಿದಾರರ ಪರ ಪ್ರೊ| ರವಿವರ್ಮ ಕುಮಾರ್ ವಾದ ಮಂಡಿಸಿ, ಈಗಾಗಲೇ ಪಂಚಾಯತ್‌ಗಳ ಅವಧಿ ಮೀರಿದೆ. ಹೇಗಿದ್ದರೂ, ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಹಾಗಾಗಿ, ಮೀಸಲಾತಿ ಪ್ರಕಟಗೊಂಡಿರುವ 21 ಜಿಲ್ಲೆಗಳ ಗ್ರಾ.ಪಂ.ಗಳ ಚುನಾವಣೆಗೆ ವೇಳಾಪಟ್ಟಿ ಹೊರಡಿಸಬಹುದು. ಅಲ್ಲದೆ, ರಾಜ್ಯದಲ್ಲಿ ಅನ್‌ಲಾಕ್ ಆರಂಭವಾಗಿದ್ದು, ಚಟುವಟಿಕೆಗಳು ಆರಂಭಗೊಂಡಿವೆ. ಹೀಗಿರುವಾಗ ಚುನಾವಣೆ ನಡೆಸುವಂತೆ ರಾಜ್ಯ ಸರಕಾರ ಮತ್ತು ಚುನಾವಣ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, 21 ಜಿಲ್ಲೆಗಳ ಮೀಸಲಾತಿ ಪ್ರಕಟಿಸಲಾಗಿದ್ದು, ಆಗಸ್ಟ್ ಅಂತ್ಯಕ್ಕೆ ಉಳಿದ ಜಿಲ್ಲೆಗಳ ಮೀಸಲಾತಿ ಅಂತಿಮಗೊಳ್ಳಲಿದೆ. ಸೆಪ್ಟಂಬರ್ ಮೊದಲ ವಾರದಲ್ಲಿ ಮತದಾರರ ಪಟ್ಟಿ ಅಂತಿಮಗೊಳ್ಳಲಿದೆ. ಹಾಗಿರುವಾಗ ಈ 21 ಜಿಲ್ಲೆಗಳಲ್ಲಿ ಚುನಾವಣ ವೇಳಾಪಟ್ಟಿ ಪ್ರಕಟಿಸುವ ಬಗ್ಗೆ ಹೆಜ್ಜೆ ಇಡಬಹು ದಲ್ಲವೇ ಎಂದು ಪ್ರಶ್ನಿಸಿ, ನಿಲುವು ತಿಳಿಸುವಂತೆ ಚುನಾವಣ ಆಯೋಗಕ್ಕೆ ಸೂಚಿಸಿ ವಿಚಾರಣೆಯನ್ನು ಆ.27ಕ್ಕೆ ಮುಂದೂಡಿತು.