Advertisement

ಶಿಕ್ಷಕರ ಸಮಸ್ಯೆ-ಬೇಡಿಕೆಗಳ ಬಗ್ಗೆ ಸರಕಾರ ಉದಾಸೀನ ಮಾಡಬಾರದು: ಕುಮಾರಸ್ವಾಮಿ

11:11 AM May 17, 2022 | Team Udayavani |

ಬೆಂಗಳೂರು: ಮಕ್ಕಳ ಜತೆ ಮಕ್ಕಳಾಗಿ ಶಿಕ್ಷಕರು ವಹಿಸುವ ಜವಾವ್ದಾರಿ ಮಹತ್ವದ್ದು. ಕೋವಿಡ್‌ ನಿಂದ ಬಳಲಿದ ಕಲಿಕಾ ವ್ಯವಸ್ಥೆಗೆ ನವಚೈತನ್ಯ ತುಂಬಿದವರೂ ಇವರೇ. ಅವರ ಸಮಸ್ಯೆ-ಬೇಡಿಕೆಗಳ ಬಗ್ಗೆ ರಾಜ್ಯ ಸರಕಾರ ಉದಾಸೀನ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮಕ್ಕಳು ನಲಿಯುತ್ತಾ ಶಾಲೆಗೆ ಬಂದ ದೃಶ್ಯಗಳನ್ನು ಕಂಡು ನನ್ನ ಮನಸ್ಸು ಪುಳಕಿತವಾಗಿದೆ. ನನ್ನ ಬಾಲ್ಯದ ದಿನಗಳು ನೆನಪಾದವು. ಅಪ್ಪ-ಅಮ್ಮನ ಬೆರಳಿಡಿದು ತರಗತಿಗಳತ್ತ ಬಂದ ಚಿಣ್ಣರ ಸಂಭ್ರಮ ಇಡೀ ನಾಡಿಗೆ ಹೊಸಕಳೆ ತಂದಿದೆ. ಶಾಲೆಗೆ ಬಂದ ಮಕ್ಕಳನ್ನು ಪ್ರೀತಿಯಿಂದ ಬರಮಾಡಿಕೊಂಡು ಸ್ವಾಗತಿಸಿದ ಸಮಸ್ತ ಶಿಕ್ಷಕ ಬಂಧುಗಳಿಗೆ ಅಭಿನಂದನೆಗಳು ಎಂದಿದ್ದಾರೆ.

ಇದನ್ನೂ ಓದಿ:ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗವಲ್ಲ; ಅದು ಫೌಂಟನ್: ಮಸೀದಿಯ ಆಡಳಿತ ಮಂಡಳಿ ವಾದ

ಶಿಕ್ಷಣ ಇಲಾಖೆ ಅಧಿಕಾರಿಗಳು ಕಚೇರಿಗಳಲ್ಲಿ ಕೂತರೆ ಉಪಯೋಗವಿಲ್ಲ. ಶಾಲೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕುಂದುಕೊರತೆಗಳನ್ನು ನೀಗಿಸಬೇಕು. ಸ್ವಚ್ಛತೆ-ನೈರ್ಮಲ್ಯ, ಮೂಲ ಸೌಕರ್ಯಗಳನ್ನು ಉತ್ತಮಪಡಿಸಲು ಶ್ರಮಿಸಬೇಕು. ಗ್ರಾಮೀಣ ಭಾಗದ ಅನೇಕ ಕಡೆ ಶಾಲಾ ಕಟ್ಟಡಗಳು ಶಿಥಿಲವಾಗಿವೆ. ಮಳೆ ಬಂದರೆ ಹಳ್ಳಿಶಾಲೆಗಳು ಸೋರುತ್ತಿವೆ. ಕಿಟಕಿ ಬಾಗಿಲುಗಳೇ ಇಲ್ಲದ ದೃಶ್ಯಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಉತ್ತಮ ವಾತಾವರಣದಲ್ಲಿ ಮಕ್ಕಳು ಕಲಿಯುವ ವ್ಯವಸ್ಥೆ ಕಲ್ಪಿಸಬೇಕು. ಇದು ರಾಜ್ಯ ಸರಕಾರದ ಹೊಣೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next