ಮುಂಬೈ: ಮಹಾರಾಷ್ಟ್ರ ಶೀಘ್ರದಲ್ಲೇ ಹೈ-ಸ್ಪೀಡ್ ಲೋಕಲ್ ಮೆಟ್ರೋ ರೈಲು ಓಡಾಟಕ್ಕೆ ಸಾಕ್ಷಿಯಾಗಲಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಇಂಥ ಪ್ರಯತ್ನ ನಡೆಯುತ್ತಿದ್ದು, ಮಹಾಮೆಟ್ರೋಗೆ ಇದರಿಂದ ಇನ್ನಷ್ಟು ಮೆರುಗು ಸಿಗಲಿದೆ. ನಾಗ್ಪುರ ನಗರಕ್ಕೆ ಸಂಪರ್ಕ ಸಾಧಿಸುವ ಹತ್ತಿರದ ನಾಲ್ಕು ಪಟ್ಟಣಗಳಾದ ಭಾಂಡಾರಾ, ವರ್ಧಾ, ಕತೊಲ್ ಮತ್ತು ರಾಮ್ಟೆಕ್‌ಗಳಿಗೆ ಹೈ ಸ್ಪೀಡ್ ರೈಲು ಓಡಿಸುವಂಥ ಸಚಿವ ಗಡ್ಕರಿ ಅವರ ಮಹತ್ವಾಕಾಂಕ್ಷೆಯ ಯೋಜನೆಗೆ ಇದೀಗ ಚಾಲನೆ ಸಿಕ್ಕಿದೆ. ಈ ಸಂಬಂಧ ಸೋಮವಾರ ಪಿಯೂಷ್ ಗೋಯಲ್ ನೇತೃತ್ವದ ಭಾರತೀಯ ರೈಲ್ವೆ, ಮಹಾರಾಷ್ಟ್ರ ಸರ್ಕಾರ ಹಾಗೂ “ಮಹಾಮೆಟ್ರೋ’ ನಡುವೆ ಒಪ್ಪಂದ ಏರ್ಪಟ್ಟಿದೆ. ಯೋಜನೆ ಪ್ರಕಾರ ಮೂರು ಬೋಗಿಗಳ ರೈಲು 4 ಪಟ್ಟಣಗಳ ನಡುವೆ ಸಂಪರ್ಕ ಸೇತುವಾಗಲಿದೆ. ಈಗಿರುವ ರೈಲ್ವೆ ಮಾರ್ಗ, ಸಿಗ್ನಲ್ ಹಾಗೂ ಪ್ಲಾಟ್‌ಫಾರ್ಮ್ಗಳನ್ನೇ ಬಳಸಿಕೊಳ್ಳುವ ಚಿಂತನೆ ನಡೆಸಿದೆ. ಈಗಿರುವ ಕೆಲವು ರೈಲುಗಳ ವೇಗ ಹೆಚ್ಚಿಸುವುದು, ಹವಾನಿಯಂತ್ರಿತ ಬೋಗಿ ಅಳವಡಿಸುವುದು, ಈ ಪಟ್ಟಣಗಳ ನಡುವಿನ ಪ್ರಯಾಣ ಸಮಯ ಕಡಿತಗೊಳಿಸುವಂತೆ ಮಾಡುವುದೂ ಯೋಜನೆಯ ಪ್ರಮುಖ ಅಂಶಗಳಾಗಿವೆ.