ಧಾರವಾಡ: ರಾಜ್ಯದಲ್ಲಿ ಇರುವ ಬರಗಾಲವನ್ನು ಹೇಗೆ ನಿಭಾಯಿಸಬೇಕು ಎನ್ನುವ ಸಾಮಾನ್ಯ ಜ್ಞಾನವೂ ಸರಕಾರಕ್ಕೆ ಇಲ್ಲದಾಗಿದೆ ಎಂದು ರಾಜ್ಯ ರೈತ ಸೇನೆ ಮುಖ್ಯಸ್ಥ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ಧರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಕಿಂಚಿತ್ತೂ ನಡೆಯುತ್ತಿಲ್ಲ. ತುಮಕೂರಿನ ತೆಂಗು ಪ್ರದೇಶದ ರೈತರು ನ್ಯಾಯಯುತ ಬೆಲೆ ಬೇಕೆಂದು ಪ್ರತಿಭಟನೆ ಮಾಡಿದರೆ ಅವರನ್ನು ಬಂಧಿಸಲಾಗಿದೆ. ರೈತರನ್ನು ಬಂಧಿಸಿ ಮುಖ್ಯಮಂತ್ರಿಗಳು ಅಲ್ಲಿ ಸಮಾವೇಶ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಎಂದರು.
ಕೇಂದ್ರಕ್ಕೆ 35 ರಿಂದ 36ಸಾವಿರ ಕೋಟಿ ಬೆಳೆ ನಷ್ಟವಾಗಿದೆ ಎಂಬುದಾಗಿ ಬರಗಾಲದ ಕುರಿತು ರಾಜ್ಯ ಸರಕಾರವು ವರದಿ ಸಲ್ಲಿಸಿದೆ. ಆದರೆ, ರಾಜ್ಯ ಸರಕಾರ ಏನು ಮಾಡುತ್ತಿದೆ? ಅಂದರೆ 2 ಸಾವಿರ ಖಾತೆಗೆ ಜಮೆ ಮಾಡಿದರೆ ಕರ್ತವ್ಯ ಮುಗಿಯಿತೆ?ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಅವರ ಅವಧಿಯಲ್ಲಿ ಜಾರಿಗೆ ತಂದ ಕೃಷಿ ಕಾಯ್ದೆ ರದ್ಧು ಮಾಡುವ ಭರವಸೆ ನೀಡಿದ್ದಿರಿ. ಆದರೆ, ಈವರೆಗೆ ಅದು ಆಗುತ್ತಿಲ್ಲ. ಒಂದೆಡೆ ಸರಕಾರ ಆರ್ಥಿಕವಾಗಿ ಸಧೃಢವಾಗಿದೆ ಎಂಬುದಾಗಿ ಪ್ರಚಾರ ಮಾಡಿಕೊಳ್ಳುತ್ತಿದೆ. ಇನ್ನೊಂದೆಡೆ ರೈತರಿಗೆ ಬಿಡಿಗಾಸು ನೀಡುವ ಮೂಲಕ ಅನ್ಯಾಯ ಮಾಡುತ್ತಿದೆ. ಗ್ಯಾರಂಟಿ ನೀಡುವ ಭರದಲ್ಲಿ ರೈತರಿಗೆ ಸ್ಪಂದಿಸುವ ಮನೋಭಾವನೆ ಸರಕಾರಕ್ಕೆ ಹೋಗಿದೆ. ಈ ನಿಟ್ಟಿನಲ್ಲಿ ವಿವಿಧ ಕಡೆ
ಸಭೆ ಕೈಗೊಂಡು, ಹೋರಾಟ ರೂಪಿಸಲಾಗುತ್ತಿದೆ ಎಂದರು.