ಬೆಂಗಳೂರು: ನಿಗಮ- ಮಂಡಳಿ ಅಧ್ಯಕ್ಷ- ಉಪಾಧ್ಯಕ್ಷರುಗಳಿಗೆ ರಾಜೀನಾಮೆ ನೀಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಒಂದೂವರೆ ವರ್ಷದಿಂದ ಅಧಿಕಾರದಲ್ಲಿರುವ ನಿಗಮ ಮಂಡಳಿಗಳ ಅಧ್ಯಕ್ಷರುಗಳಿಗೆ ಶಾಕ್ ನೀಡಿದೆ. ನೂತನ ಪಟ್ಟಿಯನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.
ಯಡಿಯೂರಪ್ಪ ಸಿಎಂ ಆಗಿದ್ದಾಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪಡೆದಿದ್ದವರು ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿರುಂತೆ ಅಧಿಕಾರ ಕಳೆದುಕೊಳ್ಳಬೇಕಿದೆ.
ನಿರ್ಗಮನಗೊಳ್ಳುವವರ ಪಟ್ಟಿಯಲ್ಲಿ ಯಡಿಯೂರಪ್ಪ ಬಣದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಪರಾಜಿತ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತ ಮುಖಂಡರಿಗೆ ಯಡಿಯೂರಪ್ಪ ಕಾಲದಲ್ಲಿ ನಿಗಮ- ಮಂಡಳಿ ಸ್ಥಾನ ನೀಡಲಾಗಿತ್ತು. ಇದೀಗ ಬಸವರಾಜ ಬೊಮ್ಮಾಯಿ ಅವರು ಇದನ್ನು ಬದಲಾಯಿಸಹೊರಟಿದ್ದು ಬಿಎಸ್ ವೈ ಬಣದ ಕಣ್ಣು ಕೆಂಪಾಗಿಸಿದೆ.
ಯಡಿಯೂರಪ್ಪ ವಿದೇಶ ಪ್ರವಾಸ ತೆರಳಿದ್ದ ವೇಳೆ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಆಪ್ತ ಸಚಿವರ ಜತೆ ಸೇರಿ ನಿಗಮ – ಮಂಡಳಿ ಗೆ ಹೊಸ ಅಧ್ಯಕ್ಷ ಉಪಾಧ್ಯಕ್ಷರ ಹೊಸ ಪಟ್ಟಿ ತಯಾರಿಸಿದ್ದರು.
ಈ ಬಗ್ಗೆ ಇಂದು ಮೈಸೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಆರು ತಿಂಗಳ ಹಿಂದೆಯೇ ಅಧ್ಯಕ್ಷರ ಬದಲಾವಣೆಗೆ ಕೋರ್ ಕಮಿಟಿಯಲ್ಲಿ ತೀರ್ಮಾನ ಮಾಡಿದ್ದೇವೆ. ಒಂದೂವರೆ ವರ್ಷ ಪೂರೈಸಿರುವ ಅಧ್ಯಕ್ಷರುಗಳ ರಾಜೀನಾಮೆ ಸೂಚನೆ ನೀಡಿದ್ದೇವೆ ಎಂದಿದ್ದರು.