ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯ ದರಗಳನ್ನು ತರ್ಕಬದ್ಧಗೊಳಿಸುವ ಸಲುವಾಗಿ ಸೋಮವಾರ ಹೊಸದಿಲ್ಲಿಯಲ್ಲಿ ಜಿಎಸ್‌ಟಿ ಮಂಡಳಿಯ 54ನೇ ಸಭೆ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಪರವಾಗಿ ಜಿಎಸ್‌ಟಿ ಮಂಡಳಿ ಸದಸ್ಯರೂ ಆಗಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರತಿನಿಧಿಸಲಿದ್ದಾರೆ.
ಸೋಮವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಪಾಲ್ಗೊಳ್ಳಲಿದ್ದಾರೆ.
ಪ್ರಮುಖವಾಗಿ ಆರೋಗ್ಯ ಮತ್ತು ಜೀವವಿಮೆ ಮೇಲಿನ ಜಿಎಸ್‌ಟಿ ಕಡಿಮೆ ಮಾಡುವಂತೆ ಒತ್ತಡ ಹೇರಲು ರಾಜ್ಯ ಸರಕಾರ ನಿರ್ಧರಿಸಿದ್ದು, ಇದೇ ವಿಚಾರವನ್ನು ಸಚಿವರು ಸಭೆಯಲ್ಲಿ ಪ್ರಸ್ತಾಪಿಸಲಿದ್ದಾರೆ.
ಇತ್ತೀಚೆಗೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಪಶ್ಚಿಮ ಬಂಗಾಲ ಸೇರಿದಂತೆ ಬಿಜೆಪಿಯೇತರ ಸರಕಾರಗಳಿರುವ 7 ರಾಜ್ಯಗಳ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಆರೋಗ್ಯ ವಿಮೆ ಮೇಲೆ ಶೇ.18ರಷ್ಟು ಜಿಎಸ್‌ಟಿ ವಿಧಿಸಿರುವುದರಿಂದ ವಿಮಾ ರಕ್ಷಣೆಯಿಂದ ಜನರು ದೂರ ಉಳಿಯುವಂತಾಗಿದೆ.
ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದು, ದೇಶದಲ್ಲಿರುವ ಬಿಜೆಪಿಯೇತರ ಸರಕಾರಗಳು ಕೇಂದ್ರ ಸರಕಾರಕ್ಕೆ ಇದನ್ನು ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದರು.
ವಿಮೆ ಮೇಲಿನ ಜಿಎಸ್‌ಟಿಗೆ ವಿರೋಧ?
ಇದೀಗ ಸೋಮವಾರದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಹೆಚ್ಚು ಚರ್ಚೆ ನಡೆಯುವ ಸಾಧ್ಯತೆಗಳಿದ್ದು, ಆರೋಗ್ಯ ಮತ್ತು ಜೀವವಿಮೆ ಮೇಲಿನ ಜಿಎಸ್‌ಟಿ ಹೆಚ್ಚಳದಿಂದ ಮಧ್ಯಮ ಹಾಗೂ ದುಡಿಯುವ ವರ್ಗದ ಮೇಲೆ ದುಷ್ಪರಿಣಾಮ ಬೀರಲಿದೆ.
ಆರೋಗ್ಯ ಸೇವೆ ದುಬಾರಿ ಎನಿಸುವ ಅಪಾಯ ಇದೆ ಎಂಬುದನ್ನು ಕೇಂದ್ರ ಸರಕಾರಕ್ಕೆ ಮನದಟ್ಟು ಮಾಡಿಸಲು ಸಚಿವ ಕೃಷ್ಣ ಬೈರೇಗೌಡ ತಯಾರಿ ಮಾಡಿಕೊಂಡಿದ್ದಾರೆ. ರಾಜ್ಯದ ಹಣಕಾಸು ಇಲಾಖೆ ಅಧಿಕಾರಿಗಳ ಜತೆಗೂ ಮಾತುಕತೆ ನಡೆಸಿರುವ ಸಚಿವರು, ಕೇಂದ್ರದ ಜಿಎಸ್‌ಟಿಯಿಂದಾಗುವ ಪರಿಣಾಮಗಳ ಬಗ್ಗೆ ಚರ್ಚಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಎಲ್ಲವನ್ನೂ ಸೋಮವಾರದ ಸಭೆಯ ಮುಂದಿಡಲಿದ್ದಾರೆ.