Advertisement

Karnataka ರಾಜ್ಯ ಸರಕಾರದ ಸಿಎಸ್‌ ಶಾಲಿನಿ ರಜನೀಶ್‌ ಮನೆಗೆ ಸುಳ್ಯದ ಗೋವುಗಳು

05:24 PM Aug 31, 2024 | Team Udayavani |

ಸುಳ್ಯ: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಗೋವಿನ ಮೇಲಿನ ವಿಶೇಷ ಕಾಳಜಿಯಿಂದ ಮಲೆನಾಡು ಗಿಡ್ಡ ತಳಿಯ ಗೋವುಗಳನ್ನು ಸುಳ್ಯದಿಂದ ಬೆಂಗಳೂರಿಗೆ ಕೊಂಡೊಯ್ದಿದ್ದಾರೆ.

Advertisement

ಅವರು ಮಲೆನಾಡು ಗಿಡ್ಡ ತಳಿಯ ನಾಲ್ಕು (ಎರಡು ತಾಯಿ, ಎರಡು ಕರು) ಗೋವುಗಳನ್ನು ಬೆಂಗಳೂರಿನ ಮನೆಗೆ ಪೂಜೆ ಸಲ್ಲಿಸಿ ಬರ ಮಾಡಿಕೊಂಡರು.

ಮನೆ ಮನೆಯಲ್ಲೂ ಮಲೆನಾಡು ಗಿಡ್ಡ ಗೋವು ಸಾಕಬೇಕೆಂದು ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನ ನಡೆಸಲಾಗುತ್ತಿದೆ. ಅದಕ್ಕಾಗಿ ತಂಡ ರಚಿಸಿಕೊಂಡು ಆಸಕ್ತರಿಗೆ ಗಿಡ್ಡ ತಳಿಗಳನ್ನು ಒದಗಿಸಲಾಗುತ್ತದೆ.

ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಅಲೆಕ್ಕಾಡಿ ಸಮೀಪದ ಕೃಷಿಕ ಅಕ್ಷಯ್‌ ಆಳ್ವ ಅವರು ಕೂಡ ಮಲೆನಾಡು ಗಿಡ್ಡ ತಳಿ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಆಸಕ್ತರಿಗೆ ಮಲೆನಾಡು ಗಿಡ್ಡ ತಳಿಯನ್ನು ನೀಡುತ್ತಿದ್ದಾರೆ.

ಐಎಎಸ್‌ ಅಧಿಕಾರಿಗೆ ಗೋದಾನ
ಶಾಲಿನಿ ರಜನೀಶ್‌ ಅವರು ಮಲೆನಾಡು ಗಿಡ್ಡ ತಳಿಯ ಗೋವು ಸಾಕಲು ಆಸಕ್ತಿ ವಹಿಸಿ, ಕಡಬದ ಕೊಯಿಲ ಪಶುಸಂಗೋಪನಾ ಇಲಾಖೆ ನಿರ್ದೇಶಕ ಪ್ರಸನ್ನ ಹೆಬ್ಬಾರ್‌ ಮೂಲಕ ಮಾಹಿತಿ ಪಡೆದು ಅಕ್ಷಯ್‌ ಆಳ್ವರನ್ನು ಸಂಪರ್ಕಿಸಿದ್ದಾರೆ. ಅಕ್ಷಯ್‌ ತಮ್ಮ ಬೇಡಿಕೆಗಳನ್ನು ತಿಳಿಸಿದ್ದು, ಅದಕ್ಕೆ ಒಪ್ಪಿಗೆ ಸೂಚಿಸಿದ ಶಾಲಿನಿ ರಜನೀಶ್‌ ಅವರಿಗೆ ಮಲೆನಾಡು ಗಿಡ್ಡ ತಳಿಯ ನಾಲ್ಕು ಗೋವುಗಳನ್ನು ಹಸ್ತಾಂತರಿಸಲಾಗಿದೆ.

Advertisement

ತಾವು ಪಡೆದ ಗೋವುಗಳನ್ನು ಸ್ವತಃ ಶಾಲಿನಿ ರಜನೀಶ್‌ ಅವರೇ ಮನೆಯವರೊಂದಿಗೆ ಸಾಕಿ-ಸಲಹಲಿದ್ದಾರೆ. ಅದಕ್ಕಾಗಿ ಹಟ್ಟಿಯನ್ನೂ ನಿರ್ಮಿಸಿದ್ದಾರೆ.

ಅಕ್ಷಯ್‌ ಅವರಲ್ಲಿದ್ದ ಐದು ವರ್ಷ ಪ್ರಾಯದ ಹಂಸಿ ಹೆಸರಿನ ಮಲೆನಾಡು ಗಿಡ್ಡ ತಳಿಯ ತಾಯಿ ಹಾಗೂ ಒಂದೂವರೆ ತಿಂಗಳಿನ ಕರು ಹಾಗೂ ಈ ಹಿಂದೆ ಅಕ್ಷಯ್‌ ಅವರು ಬಾಳುಗೋಡಿಗೆ ನೀಡಲಾಗಿದ್ದ ಸ್ವರ್ಣ ಕಪಿಲ ಹೆಸರಿನ ಎರಡೂವರೆ ವರ್ಷದ ತಾಯಿ ಹಾಗೂ ಎರಡೂವರೆ ತಿಂಗಳಿನ ಕರುವನ್ನು ಗುರುವಾರ ಮುರುಳ್ಯದಿಂದ ವಾಹನದ ಮೂಲಕ ಬೆಂಗಳೂರಿಗೆ ಕಳುಹಿಸಲಾಗಿದೆ. ಈ ಸಂದರ್ಭ ಹಂಸಿ ದನ ಕಣ್ಣೀರಿಟ್ಟ ಘಟನೆಯೂ ನಡೆದಿದೆ. ಇಲಾಖೆಯ ನಿಯಮಾವಳಿಯಂತೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಗೋವನ್ನು ಬೆಂಗಳೂರಿಗೆ ಸಾಗಿಸಲಾಗಿದೆ.

ನಾನು ಮಲೆನಾಡು ಗಿಡ್ಡ ತಳಿಯ ಗೋವನ್ನು ಸಾಕುತ್ತಿದ್ದೇನೆ. ಮಲೆನಾಡು ಗಿಡ್ಡ ದನವನ್ನು ಪ್ರೀತಿಯಿಂದ ಸ್ವತಃ ಶಾಲಿನಿ ರಜನೀಶ್‌ ಅವರೇ ಸಾಕುತ್ತಾರೆ ಎಂದು ತಿಳಿಸಿದ ಬಳಿಕವೇ ಅವರಿಗೆ ನೀಡಿದ್ದೇವೆ. ಭಾವನಾತ್ಮಕ ಸಂಬಂಧ ಹೊಂದಿದ್ದ ಹಂಸಿ ಇಲ್ಲಿಂದ ಬೀಳ್ಕೊಡುವಾಗ ಕಣ್ಣೀರಿಟ್ಟಿದೆ. ಮಲೆನಾಡು ಗಿಡ್ಡ ತಳಿ ಸಂರಕ್ಷಣ ಅಭಿಯಾನಕ್ಕೆ ಈ ಪ್ರಕ್ರಿಯೆ ಇನ್ನಷ್ಟು ಹುರುಪು ತುಂಬುವ ನಿರೀಕ್ಷೆ ನಮ್ಮಲ್ಲಿದೆ.
-ಅಕ್ಷಯ್‌ ಆಳ್ವ ಮುರುಳ್ಯ

Advertisement

Udayavani is now on Telegram. Click here to join our channel and stay updated with the latest news.

Next