Advertisement

ಗ್ರಾಮೀಣ ಬಡಜನರ ಬೇಡಿಕೆಗೆ ಸ್ಪಂದಿಸಿದ ಕೇಂದ್ರ ಸರಕಾರ

11:21 PM Sep 12, 2024 | Team Udayavani |

ವಸತಿರಹಿತರೆಲ್ಲರಿಗೂ ವಸತಿ ಕಲ್ಪಿಸುವ ಕೇಂದ್ರ ಸರಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಡಿ ಅನುಷ್ಠಾನಗೊಳಿಸಲಾದ ಪ್ರಧಾನಮಂತ್ರಿ ಆವಾಸ್‌ ಯೋಜನೆ-ಗ್ರಾಮೀಣ (ಪಿಎಂಎವೈ-ಜಿ)ದ ಫ‌ಲಾನುಭವಿಗಳಾಗಲು ಈ ಹಿಂದೆ ಕೇಂದ್ರ ಸರಕಾರ ಅನುಸರಿಸುತ್ತಿದ್ದ “ಸ್ವಯಂಚಾಲಿತ ಹೊರಗುಳಿಯುವಿಕೆ’ ಮಾನದಂಡದಲ್ಲಿ ಕೆಲವು ಪ್ರಮುಖ ಸಡಿಲಿಕೆಗಳನ್ನು ಮಾಡಿದೆ. ಇದರಿಂದ ಗ್ರಾಮೀಣ ಪ್ರದೇಶದ ಮತ್ತಷ್ಟು ಬಡ ಕುಟುಂಬಗಳು ಈ ಯೋಜನೆಯ ವ್ಯಾಪ್ತಿಗೆ ಸೇರ್ಪಡೆಯಾಗಲಿದ್ದು, ಸ್ವಂತ ಸೂರು ಹೊಂದುವ ಇವರ ಕನಸು ಶೀಘ್ರದಲ್ಲಿಯೇ ನನಸಾಗಲಿದೆ.

Advertisement

ರಾಜ್ಯಗಳ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಕೇಂದ್ರ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ನಡೆಸಿದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಪಿಎಂಎವೈ-ಜಿ ಮಾನದಂಡಗಳಲ್ಲಿ ಸಡಿಲಿಕೆ ಮಾಡಿರುವುದಾಗಿ ತಿಳಿಸಿದ್ದಾರೆ. 2024-25ರಿಂದ 2028-29ರ ಅವಧಿಗೆ ಅನ್ವಯವಾಗುವಂತೆ ಪಿಎಂಎವೈ-ಜಿ ಯೋಜನೆಯನ್ನು ಜಾರಿಗೊಳಿಸುವ ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆಯ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಕಳೆದ ತಿಂಗಳು ತನ್ನ ಒಪ್ಪಿಗೆಯನ್ನು ನೀಡಿತ್ತು. ಕೇಂದ್ರ ಹಣಕಾಸು ಸಚಿವರು ಪ್ರಸಕ್ತ ಸಾಲಿನ ಬಜೆಟ್‌ ಭಾಷಣದ ವೇಳೆ ಮುಂದಿನ 5 ವರ್ಷಗಳ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುವರಿಯಾಗಿ 2 ಕೋಟಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ಘೋಷಿಸಿದ್ದರು.

ಈ ಮಹತ್ವಾಕಾಂಕ್ಷೆಯ ಗುರಿಯನ್ನು ತಲುಪಲು ಪೂರಕವಾಗಿ ಕೇಂದ್ರ ಸರಕಾರ ಪಿಎಂಎವೈ-ಜಿ ಯನ್ನು ಅನುಷ್ಠಾನ­ಗೊಳಿಸಿತ್ತು. ಇದಕ್ಕಾಗಿ ಪ್ರತ್ಯೇಕ ಮಾನದಂಡವನ್ನು ರೂಪಿಸಿತ್ತು. ಈಗ ಮಾನದಂಡದಲ್ಲಿ ಕೆಲವು ಸಡಿಲಿಕೆಗಳನ್ನು ಮಾಡುವ ಮೂಲಕ ಇನ್ನಷ್ಟು ಹೆಚ್ಚಿನ ಸಂಖ್ಯೆಯ ವಸತಿರಹಿತರನ್ನು ಈ ಯೋಜನೆಯ ವ್ಯಾಪ್ತಿಗೆ ತರಲು ಸರಕಾರ ಮುಂದಾಗಿದೆ.

ಇನ್ನು ಮುಂದೆ ಪಿಎಂಎವೈ-ಗ್ರಾಮೀಣದಡಿ ದ್ವಿಚಕ್ರ ವಾಹನ, ಮೋಟಾರುಚಾಲಿತ ಮೀನುಗಾರಿಕ ದೋಣಿ, ರೆಫ್ರಿಜರೇಟರ್‌, ಲ್ಯಾಂಡ್‌ಲೈನ್‌ ಫೋನ್‌ ಹೊಂದಿರುವ ಕುಟುಂಬಗಳು ಮತ್ತು ಮಾಸಿಕ 15 ಸಾವಿರ ರೂ. ಆದಾಯ ಗಳಿಸುವ ಕುಟುಂಬಗಳು ಕೂಡ ಪ್ರಯೋಜನ ಪಡೆಯಲು ಸಾಧ್ಯವಾಗಲಿದೆ. ಈ ಹಿಂದಿನ ಮಾನದಂಡದ ಪ್ರಕಾರ ಈ ಎಲ್ಲ ಕುಟುಂಬಗಳು ಯೋಜನೆಯ ವ್ಯಾಪ್ತಿಯಿಂದ ಹೊರಗುಳಿದಿದ್ದವು. ಈ ಎಲ್ಲ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿದ್ದರೂ ಕಠಿನ ಮಾನದಂಡದ ಪರಿಣಾಮ ಪಿಎಂಎವೈ-ಜಿಯ ಪ್ರಯೋಜನ ಪಡೆಯಲು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ದೇಶದ ಒಟ್ಟಾರೆ ಜನಜೀವನದ ಸ್ಥಿತಿಗತಿಯನ್ನು ಅವಲೋಕಿಸಿ, ಯೋಜನೆಯ ಮಾನದಂಡದಲ್ಲಿ ಸಡಿಲಿಕೆ ಮಾಡಬೇಕೆಂಬ ಬೇಡಿಕೆ ಕೇಳಿಬಂದಿತ್ತು.

ಕೊನೆಗೂ ಈ ಬೇಡಿಕೆಗೆ ಸ್ಪಂದಿಸಿರುವ ಕೇಂದ್ರ ಸರಕಾರ ಮಾನದಂಡದಲ್ಲಿ ಒಂದಿಷ್ಟು ಸಡಿಲಿಕೆ ಮಾಡಿ ಅರ್ಹ ಫ‌ಲಾನುಭವಿಗಳನ್ನು ಯೋಜನೆಯ ವ್ಯಾಪ್ತಿಗೆ ತಂದು ಈ ಬಡ ಕುಟುಂಬಗಳು ಕೂಡ ಸ್ವಂತ ಸೂರು ಹೊಂದಲು ಅವಕಾಶ ಕಲ್ಪಿಸಿಕೊಟ್ಟಿದೆ. ಸರ್ವರಿಗೂ ಸೂರು ಒದಗಿಸುವ ತನ್ನ ಉದ್ದೇಶಿತ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಸರಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

Advertisement

ದ್ವಿಚಕ್ರ ವಾಹನ, ರೆಫ್ರಿಜರೇಟರ್‌, ಮೋಟಾರು ಚಾಲಿತ ಮೀನುಗಾರಿಕ ದೋಣಿ ಇವೆಲ್ಲವೂ ಸರ್ವೇಸಾಮಾನ್ಯವಾಗಿದ್ದು, ಇವನ್ನು ಹೊಂದಿದ್ದ ಮಾತ್ರಕ್ಕೆ ಈ ಕುಟುಂಬಗಳು ಮಧ್ಯಮ ಅಥವಾ ಶ್ರೀಮಂತ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇವೆಲ್ಲವನ್ನು ಹೊಂದಿದಾಕ್ಷಣ ಆ ಕುಟುಂಬ ಬಡತನ ರೇಖೆಗಿಂತ ಮೇಲಿದೆ ಎಂಬ ನಿರ್ಧಾರಕ್ಕೆ ಬರುವುದು ಒಂದಿಷ್ಟು ಆತುರದ ನಿರ್ಧಾರವಾದೀತು. ಈ ಹಿನ್ನೆಲೆಯಲ್ಲಿ ಪಿಎಂಎವೈ-ಜಿ ಮಾನದಂಡದಲ್ಲಿ ಸಡಿಲಿಕೆ ಮಾಡುವಂತೆ ಬಡವರು ಮತ್ತು ಜನಸಾಮಾನ್ಯರು ಮುಂದಿರಿಸಿದ್ದ ಬೇಡಿಕೆಗೆ ಈಗ ಸರಕಾರ ಸ್ಪಂದಿಸಿರುವುದರಿಂದ ದೇಶದ ಗ್ರಾಮೀಣ ಪ್ರದೇಶದ ಲಕ್ಷಾಂತರ ಮಂದಿ ಈ ಯೋಜನೆಯ ಫ‌ಲಾನುಭವಿಗಳಾಗಿ, ತಮ್ಮದೇ ಆದ ಮನೆಯನ್ನು ಹೊಂದಲು ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹ.

Advertisement

Udayavani is now on Telegram. Click here to join our channel and stay updated with the latest news.