Advertisement

Parameshwar ಸಮಿತಿಯಿಂದ ಬಿಜೆಪಿ ಹಗರಣಗಳ ತನಿಖೆ? ಸಮಿತಿ ರಚನೆ

12:59 AM Sep 11, 2024 | Team Udayavani |

ಬೆಂಗಳೂರು: ಸರಕಾರ ಮತ್ತು ತನಿಖಾ ಸಂಸ್ಥೆಗಳ ಹಂತದಲ್ಲಿ ಇರುವ ವಿವಿಧ ಹಗರಣಗಳ ತನಿಖಾ ಪ್ರಗತಿ, ಸಮನ್ವಯ ಇತ್ಯಾದಿಗಳಿಗೆ ಸಂಬಂಧಿಸಿ ಗೃಹಸಚಿವ ಡಾ| ಪರಮೇಶ್ವರ್‌ ಅಧ್ಯಕ್ಷತೆಯಲ್ಲಿ ರಾಜ್ಯ ಸರಕಾರವು ಸಮಿತಿಯೊಂದನ್ನು ರಚಿಸಿದೆ.

Advertisement

ಬಿಜೆಪಿಯಲ್ಲಿ ಅವಧಿಯಲ್ಲಿ ನಡೆದಿರುವ ಹಲವು ಅಕ್ರಮಗಳ ಸಹಿತ ಒಟ್ಟು 26 ಹಗರಣಗಳ ತನಿಖೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸಮಿತಿಗೆ ಸಚಿವರಾದ ಎಚ್‌.ಕೆ. ಪಾಟೀಲ್‌, ಕೃಷ್ಣ ಬೈರೇಗೌಡ, ಪ್ರಿಯಾಂಕ ಖರ್ಗೆ ಹಾಗೂ ಸಂತೋಷ್‌ ಲಾಡ್‌ ಸದಸ್ಯರಾಗಿದ್ದಾರೆ.

ಮುಡಾ ಹಗರಣ, ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ತನಿಖೆಯ ವಿವಿಧ ಹಂತಗಳಲ್ಲಿವೆ. ಇನ್ನೊಂದೆಡೆ ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಇ.ಡಿ. ನ್ಯಾಯಾಲಯಕ್ಕೆ ದೋಷಾ ರೋಪ ಪಟ್ಟಿ ಸಲ್ಲಿಸಿದೆ. ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್‌ ಅಕ್ರಮಗಳ ಕುರಿತು ನಿವೃತ್ತ ನ್ಯಾ| ಮೈಕಲ್‌ ಕುನ್ಹಾ ಸಮಿತಿಯ ವರದಿ ಪಡೆದುಕೊಂಡಿರುವ ಸರಕಾರವು ಸದ್ಯದಲ್ಲೇ ಸಚಿವ ಸಂಪುಟ ಸಭೆ ಮುಂದೆ ಮಂಡಿಸಲು ತಯಾರಿ ಮಾಡಿದೆ.

ಅಲ್ಲದೆ ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಸಹಿತ ವಿವಿಧ ನಿಗಮ-ಮಂಡಳಿಗಳಲ್ಲಿ ಬಿಜೆಪಿ ಅವಧಿಯಲ್ಲಿ ಅವ್ಯವಹಾರಗಳು ನಡೆದಿದ್ದು, ಶೇ. 40ರ ಭ್ರಷ್ಟಾಚಾರದ ಆರೋಪವನ್ನೂ ಹೊರಿಸಿದ್ದ ಕಾಂಗ್ರೆಸ್‌ ಎಲ್ಲವನ್ನೂ ತನಿಖೆಗೆ ಒಪ್ಪಿಸಿದೆ. ಈ ಎಲ್ಲ ತನಿಖೆಗಳ ಪ್ರಗತಿ, ಸಮನ್ವಯ ಇತ್ಯಾದಿಗೆ ಸಂಬಂಧಿಸಿ ಕ್ರಮ ಕೈಗೊಳ್ಳಲು ಸಮಿತಿ ರಚಿಸಿದ್ದು, ಮುಂದಿನ ಎರಡು ತಿಂಗಳಲ್ಲಿ ತನಗೆ ವಹಿಸಿರುವ ಜವಾಬ್ದಾರಿಯನ್ನು ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶದಲ್ಲಿ ತಿಳಿಸಿದ್ದಾರೆ.

ಅಧಿಕಾರಿಗಳ ಜತೆ ಸಮಾಲೋಚನೆ
ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವಿಸಲಾಗಿತ್ತು. ಒಟ್ಟು 26 ಪ್ರಕರಣಗಳನ್ನು ಮತ್ತೆ ತನಿಖೆಗೆ ಒಪ್ಪಿಸಲು ನಿರ್ಧರಿಸಲಾಗಿದ್ದು, ಈ ಹಗರಣಗಳ ಸ್ವರೂಪ ಅರಿಯುವುದಕ್ಕೆ ಸಂಪುಟ ಉಪಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಗಳ ಮುಖ್ಯಸ್ಥರ ಜತೆಗೆ ಪರಮೇಶ್ವರ್‌ ಸಮಾಲೋಚನೆ ಪ್ರಾರಂಭಿಸಿದ್ದಾರೆ.

Advertisement

ಈ ಸಂಬಂಧ ಸುದ್ದಿಗಾರರ ಜತೆಗೆ ಮಾತನಾಡಿ, ಕಳೆದ ಸಚಿವ ಸಂಪುಟ ಸಭೆಯಲ್ಲಿಯೇ ನನ್ನನ್ನು ಉಪಸಮಿತಿಗೆ ಅಧ್ಯಕ್ಷನನ್ನಾಗಿ ಮಾಡಿದ್ದಾರೆ. 26 ಹಗರಣಗಳ ಪಟ್ಟಿ ಮಾಡಲಾಗಿದ್ದು, ಎರಡು ತಿಂಗಳೊಳಗೆ ವರದಿ ಕೊಡಲು ಹೇಳಿದ್ದಾರೆ. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡಿದರೆ ನಾವು ಕೂಡ ಮಾಡಬೇಕಲ್ಲವೇ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next