Advertisement

ರಾಜ್ಯ ಸರ್ಕಾರ ದಿವಾಳಿ: ಶೆಟ್ಟರ್‌

06:15 AM Nov 24, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ರಾಜ್ಯದಲ್ಲಿ ಸರ್ಕಾರ ಇದೆಯೋ  ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಆರು ತಿಂಗಳಿನಿಂದ ವದ್ಧಾಪ್ಯ, ವಿಧವಾ, ಹಿರಿಯ ನಾಯಕರ ಮಾಸಾಶನ ನೀಡಿಲ್ಲ. ಸರ್ಕಾರ ದಿವಾಳಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಆರೋಪಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರ ನಿಧಿ ಪ್ರತಿವರ್ಷ ಎರಡು ಕೋಟಿ ರೂ.  ಒಟ್ಟಿಗೆ ನೀಡುವ ತೀರ್ಮಾನವಾಗಿದ್ದರೂ ಕೇವಲ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ 6 ಸಾವಿರ ಕೋಟಿ ರೂ. ಬಿಡುಗಡೆಯಾಗಿಲ್ಲ. ಖಜಾನೆ ಖಾಲಿ ಆಗಿರುವುದಕ್ಕೆ ಇದೇ ಸಾಕ್ಷಿ ಎಂದು ಹೇಳಿದರು.

ರೈತರ ಸಾಲ ಮನ್ನಾ ಹೆಸರಿಗೆ ಮಾತ್ರ ಆಗಿದ್ದು ಹಣವೇ ಬಿಡುಗಡೆಯಾಗಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯವರು 43 ಸಾವಿರ ಕೋಟಿ ರೂ. ಸಾಲ ಮನ್ನಾ ಎಂದು ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಸರ್ಕಾರವೇ ಜೀವಂತ ಇಲ್ಲ. ಯಾವಾಗ ಏನಾಗುವುದೋ ಗೊತ್ತಿಲ್ಲ. ಹೀಗಾಗಿ, ಕುಮಾರಸ್ವಾಮಿ ಅಸಹನೆ, ಅಭದ್ರತೆಯಿಂದ ಮಾತನಾಡುತ್ತಿದ್ದಾರೆ. ಪ್ರತಿಪಕ್ಷವಾಗಿ ನಾವು ಇವರನ್ನು ಇಂದ್ರ-ಚಂದ್ರ ಎಂದು ಹೊಗಳಬೇಕಾ? ಇವರ ತಪ್ಪು ತಿಳಿಸುವುದು ಬೇಡವಾ? ಏನಾದರೂ ಮಾತನಾಡಿದ್ದರೆ ಯಡಿಯೂರಪ್ಪ ಏನು ಅಂತ ಗೊತ್ತಿದೆ ಎಂಬ ಮಾತುಗಳು ಆಡುತ್ತಿದ್ದಾರೆ. ಇದು ಇವರ ಮನಸ್ಥಿತಿ ಹೇಳುತ್ತದೆ ಎಂದರು.

ರಾಜ್ಯದ ಇತಿಹಾಸದಲ್ಲಿ ಯಾವೊಬ್ಬ ಮುಖ್ಯಮಂತ್ರಿಯೂ ಮಾಧ್ಯಮದವರ ಬಗ್ಗೆ ಕುಮಾರಸ್ವಾಮಿಯವರ ರೀತಿಯಲ್ಲಿ ಮಾತನಾಡಿಲ್ಲ. ಇವರನ್ನು ಸದಾ ಹೊಗಳಬೇಕು, ಇವರು ಮಾಡಿದ್ದೆಲ್ಲಾ ಉತ್ತಮ ಎಂದು ಬಿಂಬಿಸಬೇಕು ಎಂದು ಬಯಸುವುದು ಎಷ್ಟು ಸರಿ. ಮುಖ್ಯಮಂತ್ರಿಯಾದವರು ಟೀಕೆಯನ್ನೂ ಸಮಾನವಾಗಿ ಸ್ವೀಕರಿಸಬೇಕು. ಹೊಗಳಿಕೆಯನ್ನೂ ಸ್ವೀಕರಿಸಬೇಕು. ಅದು ಬಿಟ್ಟು ಮಾಧ್ಯಮದವರ ಜತೆ ಮಾತನಾಡಲ್ಲ, ಸುದ್ದಿಗೋಷ್ಠಿ ನಡೆಸಲ್ಲ, ಬೇಕಾದ್ದು ಬರೆದುಕೊಳ್ಳಿ ಎಂದು ಹೇಳಿದರೆ ಹೇಗೆ ಎಂದು ಪ್ರಶ್ನಿಸಿದರು.

Advertisement

ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಪಾರಂಭದಲ್ಲೇ ಸಕ್ಕರೆ ಕಾರ್ಖಾನೆ ಮಾಲೀಕರು, ರೈತರ ಸಭೆ ನಡೆಸಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು. ಅದು ಬಿಟ್ಟು ಎಲ್ಲವೂ ಆದ ಮೇಲೆ ಸಭೆ ನಡೆಸಲಾಯಿತು. ಸಂಕಷ್ಟ  ಇದ್ದಾಗ ರೈತರು ಬೀದಿಗೆ ಬರುವುದು ಸಹಜ. ಸುವರ್ಣಸೌಧ ಮುತ್ತಿಗೆ ಹಾಕಿದ್ದು ಅವರಲ್ಲಿ ನೋವು ಎಷ್ಟಿದೆ ಎಂಬುದಕ್ಕೆ ಸಾಕ್ಷಿ. ಆದರೆ, ಅದಕ್ಕೆ ಹೆಣ್ಣು ಮಗಳಿಗೆ ಅವಮಾನಕಾರಿಯಾಗಿ ಮಾತನಾಡುವುದು. ರೈತರನ್ನು ಗೂಂಡಾಗಳು ಎಂದು ಹೇಳುವುದು ಎಷ್ಟು ಸರಿ ಎಂದರು.

ವ್ಯವಹಾರಕ್ಕಾಗಿ ಸರ್ಕಾರ
ಮಾಜಿ ಸಚಿವ ಸಿ.ಟಿ.ರವಿ ಮಾತನಾಡಿ, ರಾಜ್ಯದಲ್ಲಿ ಜನರು ಬಯಸಿದ ಸರ್ಕಾರ ಇಲ್ಲ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಬಯಸಿದ ಸರ್ಕಾರವಿದೆಯಷ್ಟೇ. ಆಗಾಗ ವಿವಾದ ಆಗುತ್ತಿರುವುದರಿಂದ ಸರ್ಕಾರ ಜೀವಂತ ಇದೆ ಎಂಬುದು ಗೊತ್ತಾಗುತ್ತಿದೆ. ರಾಜಕೀಯ ವ್ಯವಹಾರಗಳಿಗೆ ಮಾತ್ರ ಸರ್ಕಾರ ಸೀಮಿತವಾಗಿದೆ. ಇದೇ ಕಾರಣಕ್ಕೆ ಬೆಳಗಾವಿಯಲ್ಲಿ ರೈತ ಮಹಿಳೆ ನಾಲಾಯಕ್‌ ಮುಖ್ಯಮಂತ್ರಿ ಎಂದು ಕರೆದಿದ್ದಾರೆ. ಅದರಂತೆಯೇ ಇವರೂ ನಡೆದುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸಬೇಕು. ಆಗ ಇವರ ಬಂಡವಾಳ ಬಯಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸರ್ಕಾರ ಒಂದೆರಡು ಜಿಲ್ಲೆಗಳಿಗೆ ಸೀಮಿತ ಎಂಬುದಕ್ಕೆ ಹಾಸನದ ಮೊಸಲೆಹೊಸಹಳ್ಳಿಗೆ 58 ಕೋಟಿ ರೂ. ವೆಚ್ಚದಲ್ಲಿ ಎಂಜಿನಿಯರಿಂಗ್‌ ಕಾಲೇಜು ಮಂಜೂರಾತಿ ಆಗಿರುವುದು ಸಾಕ್ಷಿ. ಈಗಾಗಲೇ ಹಾಸನದಲ್ಲಿ ನಾಲ್ಕು ಎಂಜಿನಿಯರಿಂಗ್‌ ಕಾಲೇಜುಗಳಿದ್ದು, ಅಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯೂ ಕಡಿಮೆ ಇದೆ. ಆದರೂ ಯಾವ ಪುರುಷಾರ್ಥಕ್ಕೆ ಮತ್ತೂಂದು ಕಾಲೇಜು ಎಂಬುದೇ ಅರ್ಥವಾಗುತ್ತಿಲ್ಲ. ಚಿಕ್ಕಮಗಳೂರಿನಲ್ಲಿ ಒಂದೇ ಒಂದು ಎಂಜಿನಿಯರಿಂಗ್‌ ಕಾಲೇಜು ಇದ್ದು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಮಂಜೂರಾಗಿ ವರ್ಷಗಳು ಕಳೆದರೂ ಒಂದೇ ಒಂದು ರೂಪಾಯಿ ಹಣ ಬಿಡುಗಡೆಯಾಗಿಲ್ಲ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next