Advertisement

ಲಾಕ್‌ಡೌನ್‌ನಲ್ಲಿ ರಾಜ್ಯದ ರೈತರ ಸ್ಥಿತಿಗತಿ ಸಮೀಕ್ಷೆ

12:57 PM Jun 17, 2020 | mahesh |

ಹಾವೇರಿ: ಕೋವಿಡ್ ಮಹಾಮಾರಿ ನಿಯಂತ್ರಣಕ್ಕೆ ಸರ್ಕಾರ ವಿಧಿಸಿದ ಲಾಕ್‌ಡೌನ್‌ನಿಂದ ರಾಜ್ಯದ ರೈತರು ಏನೆಲ್ಲ ಸಮಸ್ಯೆ ಅನುಭವಿಸಿದ್ದಾರೆ. ಅವರ ಪ್ರಸ್ತುತ ಕೃಷಿ ಸ್ಥಿತಿಗತಿ ಏನಾಗಿದೆ ಎಂಬುದರ ಬಗ್ಗೆ ಕೃಷಿ ತಜ್ಞರು, ವಿಜ್ಞಾನಿಗಳು ಹಾಗೂ ಪರಿಣತರು ಸೇರಿ ಫೋನ್‌ ಮೂಲಕ ರೈತರ ಸಮೀಕ್ಷೆ ನಡೆಸಿದ್ದು, ಜೂನ್‌ ಕೊನೆಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸಿದ್ಧತೆ ನಡೆದಿದೆ.

Advertisement

ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಪ್ರಕಾಶ ಕಮ್ಮರಡಿ ಉಸ್ತುವಾರಿಯಲ್ಲಿ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ ಮೈಸೂರು, ಐಡಿಮೈನ್‌ ಟೆಕ್ನಾಲಜಿ, ತೆಂಗು ಉತ್ಪಾದಕರ ಸಂಘ, ವಿವಿಧ ಸ್ವಯಂ ಸೇವಾ ಸಂಘಟನೆಗಳ ಕೃಷಿ ತಜ್ಞರು ಸೇರಿ 60 ಕೃಷಿ ಪದವೀಧರರು ಸ್ವಯಂ ಪ್ರೇರಿತರಾಗಿ ಈ ಸಮೀಕ್ಷೆ
ನಡೆಸಿದ್ದಾರೆ. ಲಾಕ್‌ಡೌನ್‌ ವೇಳೆ ರೈತರ ಹಾಗೂ ಕೃಷಿ ಸ್ಥಿತಿಗತಿ ಬಗ್ಗೆ ನಿಖರ ಅಂಕಿ-ಅಂಶಗಳುಳ್ಳ ವಸ್ತುನಿಷ್ಠ ವರದಿ ತಯಾರಿಸಿ ರೈತ ಧ್ವನಿ ಏನಿದೆ ಎಂಬುದನ್ನು ಸರ್ಕಾರಕ್ಕೆ ತಿಳಿಸಬೇಕು. ತನ್ಮೂಲಕ ಕೃಷಿಕರ ಸಮಸ್ಯೆ, ಅವುಗಳಿಗೆ ಪರಿಹಾರ, ಅವರ ಪ್ರಸ್ತುತ ವಾಸ್ತವಿಕ ಕೃಷಿ ಸ್ಥಿತಿಗತಿ ಏನಾಗಿದೆ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿ ಕೊಡುವುದು ಈ ಸಮೀಕ್ಷೆಯ ಮೂಲ ಉದ್ದೇಶ.

ಕೃಷಿ ಬೆಲೆ ಆಯೋಗ, ರೈತ ಸಂಘಟನೆಗಳು, ಕೃಷಿ ವಿವಿಗಳ ಸಂರ್ಪಕದಲ್ಲಿದ್ದ 1500 ರೈತರನ್ನು ವಿವಿಧ ಪ್ರಶ್ನಾವಳಿ ಮೂಲಕ ಫೋನ್‌ನಲ್ಲಿ ಈಗಾಗಲೇ ಸಮೀಕ್ಷೆ ಮಾಡಲಾಗಿದ್ದು, ಮಾಹಿತಿಯನ್ನು ಗಣಕ ಯಂತ್ರದಲ್ಲಿ ದಾಖಲಿಸಿ, ವಿಶ್ಲೇಷಿಸಿ ಅಂತಿಮ ವರದಿ ಸಿದ್ಧಪಡಿಸುವ ಕಾರ್ಯ ನಡೆದಿದೆ. ಈ ವರದಿ ಆಧರಿಸಿ ಸರ್ಕಾರ ರೈತರ ಸಮಸ್ಯೆ, ಬೇಡಿಕೆಗೆ ಸ್ಪಂದಿಸುವುದಾದರೆ ಅದು ಮುಂಗಾರು ಹಂಗಾಮಿನಲ್ಲಿಯೇ ಅನ್ನದಾ ತ ರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಜೂನ್‌ ಕೊನೆಯಲ್ಲಿಯೇ ಈ ವರದಿಯನ್ನು ಸರ್ಕಾ ರಕ್ಕೆ ಸಲ್ಲಿಸಲು ತಯಾರಿ ನಡೆದಿದೆ.

ಹೈದ್ರಾಬಾದ್‌-ಕರ್ನಾಟಕ, ಹಳೆ ಮೈಸೂರು, ಕರಾವಳಿ, ಮಲೆನಾಡು, ಮಧ್ಯಕರ್ನಾಟಕ ವಲಯಗಳನ್ನಾಗಿ ವಿಭಾಗಿಸಿ ಆಯಾ ವಲಯಗಳಿಗೆ ಸಂಬಂಧಿಸಿ ಪ್ರತ್ಯೇಕ ಪ್ರಶ್ನಾವಳಿ ತಯಾರಿಸಿ ಸಮೀಕ್ಷೆ ಮಾಡಲಾಗಿದೆ. ಇದರಲ್ಲಿ ಮಳೆಯಾಶ್ರಿತ, ನೀರಾವರಿ, ದೊಡ್ಡ ಹಿಡುವಳಿ ರೈತರು, ಸಣ್ಣ ಹಿಡುವಳಿ ರೈತರು ಅಷ್ಟೇ ಅಲ್ಲ ಜಾತಿವಾರು ಮಾಹಿತಿ, ಅಂಕಿ-ಅಂಶ ಕಲೆ ಹಾಕಿದ್ದು, ಲಾಕ್‌ಡೌನ್‌ ರೈತರು, ಕೃಷಿ ಮೇಲೆ ಬೀರಿದ ಪರಿಣಾಮ ತಿಳಿಸುವ ಸಮಗ್ರ ವಸ್ತುನಿಷ್ಠ ವರದಿ ಇದಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಕೃಷಿ ಸಮೀಕ್ಷೆಯಲ್ಲಿ ಏನೇನಿದೆ?
ಕೋವಿಡ್‌-19 ಲಾಕ್‌ಡೌನ್‌ನಿಂದ ಕೃಷಿ ಸ್ಥಿತಿ ಏನಾಗಿದೆ? ಇಂದಿನ ಪರಿಸ್ಥಿತಿಯಲ್ಲಿ ಕೃಷಿ ಮುಂದುವರಿಸಲು ಆಗುತ್ತದೆಯೋ ಇಲ್ಲವೋ? ಕೃಷಿಗೆ ಸರ್ಕಾರದ ಸಹಕಾರ ಸಿಕ್ಕಿದೆಯೋ ಇಲ್ಲವೋ? ಕೃಷಿ ವಿಶ್ವವಿದ್ಯಾಲಯಗಳಿಂದ ಸ್ಪಂದನೆ, ಸಹಾಯ ಸಿಕ್ಕಿದೆಯೇ? ಸರ್ಕಾರ ಈ ಸಂದರ್ಭದಲ್ಲಿ ನೀಡಿದ ಪರಿಹಾರ ಸರಿಯಾಗಿ ತಲುಪಿದೆಯೇ? ಸರ್ಕಾರದ ಪರಿಹಾರದಿಂದ ಸಮಸ್ಯೆ ತೀವ್ರತೆ ಕಡಿಮೆಯಾಗಿದೆಯೇ? ತಕ್ಷಣಕ್ಕೆ ಕೃಷಿ ಮಾಡಲು ಬೀಜ, ರಸಗೊಬ್ಬರ, ಹಣಕಾಸಿನ
ಸಮಸ್ಯೆ, ಕಾರ್ಮಿಕರ ಸಮಸ್ಯೆ ಇದೆಯೇ? ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿನ ಸರ್ಕಾರದ ನಿಲುವು ರೈತ ಪರವಾಗಿತ್ತೇ? ಲಾಕ್‌ಡೌನ್‌ ಸಂದರ್ಭದಲ್ಲಿ ಉತ್ಪನ್ನ ಹಾಳಾಗಿ ಹಾನಿ ಎಷ್ಟಾಗಿದೆ. ಹೀಗೆ ಇತ್ಯಾದಿ ಅಂಶಗಳು ಸೇರಿದಂತೆ 39 ಪ್ರಶ್ನೆಗಳನ್ನು ಸಮೀಕ್ಷೆ ವೇಳೆ ಕೇಳಿ ಮಾಹಿತಿ ಸಂಗ್ರಹಿಸಲಾಗಿದೆ.

Advertisement

ಲಾಕ್‌ಡೌನ್‌ ವೇಳೆ ರೈತರ ಹಾಗೂ ಕೃಷಿ ಸ್ಥಿತಿಗತಿಯನ್ನು ನಿಖರ ಅಂಕಿ-ಅಂಶಗಳ ಸಹಿತ ಸರ್ಕಾರಕ್ಕೆ ಮಾಹಿತಿ ನೀಡುವ ಉದ್ದೇಶದಿಂದ ಸಮೀಕ್ಷೆ ಮಾಡಲಾಗಿದೆ. ಜೂನ್‌ ಅಂತ್ಯದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಇದು ತಜ್ಞರಿಂದ ವಿಶ್ಲೇಷಿಸಲ್ಪಡುವ ವಸ್ತುನಿಷ್ಠ ವರದಿ. ರೈತರ ಪರ ಸರ್ಕಾರ ಯಾವ ಕೆಲಸ ಮಾಡಬೇಕು ಎಂಬುದಕ್ಕೆ ದಿಕ್ಸೂಚಿ ಆಗುವ ರೀತಿಯಲ್ಲಿ ವರದಿ ಸಿದ್ಧಪಡಿಸಲಾಗುತ್ತಿದೆ.
●ಪ್ರಕಾಶ ಕಮ್ಮರಡಿ, ಮೇಲುಸ್ತುವಾರಿ, ಸಮೀಕ್ಷಾ ತಂಡ ಹಾಗೂ ಮಾಜಿ ಅಧ್ಯಕ್ಷರು, ರಾಜ್ಯ ಕೃಷಿ ಬೆಲೆ ಆಯೋಗ

  • ಎಚ್‌.ಕೆ.ನಟರಾಜ
Advertisement

Udayavani is now on Telegram. Click here to join our channel and stay updated with the latest news.

Next