ಹಾಸನ: ರಾಜ್ಯದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷರು – ಉಪಾಧ್ಯಕ್ಷರ ಚುನಾವಣೆ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆ ನಡೆಸದೇ ರಾಜ್ಯ ಚುನಾವಣಾ ಆಯೋಗ ರಾಜ್ಯ ಸರ್ಕಾರದ ಕೈಗೊಂಬೆಯಂತೆ ನಡೆದುಕೊಳ್ಳುತ್ತಿದೆ ಎಂದು ಜೆಡಿಎಸ್ ಮುಖಂಡ ಮಾಜಿ ಸಚಿವ ಎಚ್.ಡಿ. ರೇವಣ್ಣ ಆಪಾದಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆದು 2 ವರ್ಷಗಳಾಗಿವೆ. ಇನ್ನೂ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ ನಡೆಸಿಲ್ಲ. ಬಹುಮತವಿಲ್ಲದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಸದಸ್ಯರನ್ನು ಖರೀದಿಸಿ ಬಿಜೆಪಿ ಅಧಿಕಾರ ಹಿಡಿಯಲು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡದೇ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.
ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳ ಮೀಸಲಾತಿ ವಿವಾದ ನ್ಯಾಯಾಲಯದಲ್ಲಿದೆ ಎಂಬ ಸಬೂಬು ಹೇಳಿಕೊಂಡು ಸರ್ಕಾರ ಚುನಾವಣೆ ನಡೆಸದಿರುವುದು ಖಂಡನೀಯ. ಕಾನೂನು ಸಚಿವರು, ಅಡ್ವೊಕೇಟ್ ಜನರಲ್ ಮತ್ತು ಸರ್ಕಾರ ಶೀಘ್ರದಲ್ಲೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲಿ ಎಂದರು. ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಸರ್ಕಾರದ ನಿರ್ಧಾರವನ್ನು ಖಂಡಿಸಿದ ರೇವಣ್ಣ ಅವರು, ಕೋವಿಡ್ 19 ನೆಪದಲ್ಲಿ ಚುನಾವಣೆ ಮುಂದೂಡುವುದಾದರೆ ಮಾಲ್‌ಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್, ಮದ್ಯದಂಗಡಿ ತೆರೆದು ವ್ಯವಹಾರ ನಡೆಸಲು ಕೋವಿಡ್ 19 ಅಡ್ಡಿ ಯಾಗು ವುದಿಲ್ಲವೇ ಎಂದು ಪ್ರಶ್ನಿಸಿದರು.
ಆಲೂಗಡ್ಡೆ ಬೆಳೆಗಾರರಿಗೆ ಪರಿಹಾರ ನೀಡಿ: ಜಿಲ್ಲೆಯಲ್ಲಿ ಸುಮಾರು 3 ಸಾವಿರ ಎಕರೆಯಲ್ಲಿ ಬಿತ್ತಿದ್ದ ಆಲೂಗಡ್ಡೆ ನಾಶವಾಗಿದ್ದು, ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರ ಗೋಪಾಲಯ್ಯ ಅವರನ್ನು ಭೇಟಿಯಾಗಿ ಒತ್ತಾಯ ಮಾಡಿದ್ದೇನೆ ಎಂದರು. ಹಾಸನ ತಾಲೂಕು ಸೋಮನಹಳ್ಳಿ ಕಾವಲಿನಲ್ಲಿ ತೋಟಗಾರಿಕೆ ಕಾಲೇಜು ಆರಂಭಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್, ಮಾಜಿ ಉಪಾಧ್ಯಕ್ಷ ಎಸ್.ದ್ಯಾವೇಗೌಡ ಸುದ್ದಿಗೋಷ್ಠಿಯಲ್ಲಿದ್ದರು.