Advertisement
ಸೋಮವಾರ ವಿಧಾನಸೌಧದಲ್ಲಿ ನಡೆದ ವಿವಿಧ ಸರಕಾರಿ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಮತ್ತು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ)ಯ ರಚನೆಗೆ ತಜ್ಞರ ಸಮಿತಿ ರಚಿಸಲು ಒಪ್ಪಿಗೆ ನೀಡಿ ದ್ದು, ವಾರದೊಳಗೆ ಸಮಿತಿ ರಚಿಸುವಂತೆ ಸೂಚಿಸಿದ್ದಾರೆ. ಎಸ್‌ಇಪಿ ಅಳವಡಿಕೆ ಆಗುವ ತನಕ ಹಿಂದಿನ ಶಿಕ್ಷಣ ಪದ್ಧತಿಯಂತೆ ಮುಂದುವರಿಯುವ ತೀರ್ಮಾನಕ್ಕೆ ಸರಕಾರ ಬಂದಿದೆ.
Related Articles
ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣವು ಸಂವಿಧಾನದ ರಾಜ್ಯ ಪಟ್ಟಿಯಲ್ಲಿರುವ ವಿಷಯವಾಗಿದ್ದು, ಕೇಂದ್ರ ಸರಕಾರ ನೀತಿ ರೂಪಿಸಲು ಸಾಧ್ಯವಿಲ್ಲ. ರಾಜ್ಯ ಸರಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಶಿಕ್ಷಣ ನೀತಿಯನ್ನು ಕೇಂದ್ರ ಸರಕಾರ ಹೇರುವುದು ಹುನ್ನಾರ. ಬಹು ಸಂಸ್ಕೃತಿ, ಬಹುತ್ವ ಇರುವ ದೇಶದಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆ ಮಾಡಲಾಗದು ಎಂದರು. ಎನ್‌ಇಪಿಯಿಂದ ಬಡವರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರು, ಗ್ರಾಮೀಣ ಪ್ರದೇಶದವರಿಗೆ ತೊಂದರೆಯಾಗುತ್ತದೆ. ಉನ್ನತ ಶಿಕ್ಷಣದಲ್ಲಿ ಪ್ರತೀ ವರ್ಷ ಪ್ರಮಾಣ ಪತ್ರ ನೀಡಿದರೆ ಎಷ್ಟು ಉದ್ಯೋಗಾವಕಾಶ ದೊರೆಯಲು ಸಾಧ್ಯ? ಎನ್‌ಇಪಿ ಶಿಕ್ಷಣ ನೀತಿ ಜಾರಿಗೊಳಿಸಲು ಅಗತ್ಯ ಮೂಲಸೌಲಭ್ಯಗಳು ಶಿಕ್ಷಣ ಸಂಸ್ಥೆಗಳಲ್ಲಿ ಇಲ್ಲ. ಇದರಿಂದ ಅನಗತ್ಯ ಗೊಂದಲಗಳು ಸೃಷ್ಟಿಯಾಗಿದೆ ಎಂದರು.
Advertisement
ತರಾತುರಿಯಲ್ಲಿ ಜಾರಿಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದಿನ ಬಿಜೆಪಿ ಸರಕಾರ ರಾಜ್ಯದಲ್ಲಿ ತರಾತುರಿಯಲ್ಲಿ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ ) ರದ್ದು ಮಾಡಿ, ಹೊಸ ಕರ್ನಾಟಕ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ. ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ವಾಗ್ಧಾನದಂತೆ ನಾಗಪುರ ಶಿಕ್ಷಣ ನೀತಿ ರದ್ದು ಮಾಡುತ್ತೇವೆ. ಶಿಕ್ಷಣ ತಜ್ಞರ ಸಮಿತಿ ರಚನೆ ಸಂಬಂಧ ನಮ್ಮ ಇಬ್ಬರು ಸಚಿವರು ಪ್ರಸ್ತಾವನೆ ನೀಡುತ್ತಾರೆ ಎಂದರು. ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರಲು ನಮ್ಮಲ್ಲಿ ಸರಿಯಾದ ಮೂಲಸೌಕರ್ಯಗಳಿಲ್ಲ. ಆದರೂ ಬಿಜೆಪಿ ಸರ್ಕಾರ 2021ರಲ್ಲಿ ತರಾತುರಿಯಲ್ಲಿ ಇದನ್ನು ಜಾರಿಗೆ ತಂದಿದೆ. ನಾವು ಎಲ್ಲ ರಂಗಗಳಲ್ಲಿ ಮುಂದಿದ್ದರೂ ನಮ್ಮ ಮಕ್ಕಳಿಗೆ ಹಳೆ ಯ ಕಾಲದ ಶಿಕ್ಷಣ ನೀಡಲು ಬಿಜೆಪಿ ಹೊರಟಿತ್ತು. ಹಲವಾರು ನ್ಯೂನತೆಗಳಿರುವ ನಾಗಪುರ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ. ಯಾವುದೇ ಶಿಕ್ಷಣ ನೀತಿ ಪ್ರಾಥಮಿಕ ಹಂತದಿಂದ ಜಾರಿಗೆ ಬರಬೇಕು, ಆಗ ಅದರ ಸಾಧಕ- ಭಾದಕಗಳು ತಿಳಿಯುತ್ತವೆ. ಆದರೆ ರಾಜ್ಯದಲ್ಲಿ ಏಕಾಏಕಿ ಉನ್ನತ ಶಿಕ್ಷಣದಲ್ಲಿ ಎನ್‌ಇಪಿ ಜಾರಿಗೊಳಿಸಲಾಗಿದೆ ಎಂದರು. ಕುಲಪತಿಗಳೊಂದಿಗೆ ಎನ್‌ಇಪಿ ಚರ್ಚೆ ಇಲ್ಲ
ಎನ್‌ಇಪಿ ರದ್ದತಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಲಪತಿಗಳ ಜತೆ ಹೆಚ್ಚೇನೂ ಚರ್ಚೆ ಮಾಡಿಲ್ಲ. ಎನ್‌ಇಪಿ ಬಗ್ಗೆ ಪರಾಮರ್ಶೆ ಮಾಡುತ್ತೇವೆ ಎಂದಷ್ಟೇ ಹೇಳಿದ್ದರು. ಅದೇ ರೀತಿ ಸರಕಾರ ಈಗಾಗಲೇ ಎನ್‌ಇಪಿಯನ್ನು ರದ್ದು ಮಾಡುತ್ತೇವೆ ಎಂದು ಹೇಳಿರುವುದರಿಂದ ಈ ಬಗ್ಗೆ ಚರ್ಚೆ ನಡೆಸಿದರೂ ಪ್ರಯೋಜನವಿಲ್ಲ ಎಂದು ಕುಲಪತಿಗಳು ಕೂಡ ಎನ್‌ಇಪಿ ಬಗ್ಗೆ ಸಭೆಯಲ್ಲಿ ಬಾಯಿ ಬಿಟ್ಟಿಲ್ಲ. ಇದರ ಬದಲು ಕುಲಪತಿಗಳು ತಮ್ಮ ತಮ್ಮ ವಿ.ವಿ .ಗಳಲ್ಲಿ ಇರುವಆರ್ಥಿಕ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದರು ಎಂದು ತಿಳಿದು ಬಂದಿದೆ. ಆನರ್ಸ್ ಪದವಿ 3 ವರ್ಷಕ್ಕೆ ಇಳಿಕೆ?
ಎನ್‌ಇಪಿ ಶಿಕ್ಷಣ ಪದ್ಧತಿಯಡಿ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷದ ಆನರ್ ಪದವಿಯನ್ನು ಮೂರು ವರ್ಷಕ್ಕೆ ಸೀಮಿತಗೊಳಿಸುವ ಬಗ್ಗೆ ಚರ್ಚೆ ನಡೆದಿದೆ. ಈ ಬಗ್ಗೆ ಇನ್ನೊಂದು ಸುತ್ತಿನ ಚರ್ಚೆ ನಡೆಸಿ ತೀರ್ಮಾನಕ್ಕೆ ಬರುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಎಂ. ಸಿ. ಸುಧಾಕರ್ ಹೇಳಿದ್ದಾರೆ. ಅಗತ್ಯ ಮೂಲಸೌಲಭ್ಯದ ಬಗ್ಗೆ ಅಧ್ಯಯನ ನಡೆಸದೆ ಎನ್ ಇಪಿ ಅಳವಡಿಸಲಾಗಿದೆ. ಇದರಿಂದ ಮಕ್ಕಳಿಗೆ ತೊಂದರೆ ಆಗುತ್ತಿದೆ. ಎನ್‌ಇಪಿಯಿಂದ ದೇಶದ ಜಾತ್ಯತೀತ ತತ್ವಕ್ಕೆ ವಿರುದ್ಧವಾದ ಪಠ್ಯ ಸೇರಿಸುವ ಯತ್ನ ನಡೆಸಲಾಗಿದೆ. ಬಿಜೆಪಿಯ ತತ್ವ ಸಿದ್ಧಾಂತಕ್ಕೆ ಪೂರಕವಾದ ಪಠ್ಯಗಳನ್ನು ಸೇರಿಸಲಾಗಿದೆ.
– ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ