Advertisement

Kasturi Rangan ವರದಿಗೆ ಮತ್ತೆ ರಾಜ್ಯ ತಿರಸ್ಕಾರ?

01:27 AM Sep 21, 2024 | Team Udayavani |

ಬೆಂಗಳೂರು: ರಾಜ್ಯದ 11 ಜಿಲ್ಲೆಗಳ ಜನರಲ್ಲಿ ಆತಂಕ ಮೂಡಿಸಿರುವ ಕಸ್ತೂರಿ ರಂಗನ್‌ ವರದಿಯನ್ನು ತಿರಸ್ಕರಿಸುವ ಸಾಧ್ಯತೆಯೇ ಅಧಿಕವಾಗಿದೆ.

Advertisement

ವರದಿ ಬಗ್ಗೆ ಅಧ್ಯಯ ನಡೆಸಲು ರಚಿಸಲಾಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ನೇತೃತ್ವದ ರಾಜ್ಯ ಸಂಪುಟ ಉಪ ಸಮಿತಿ ಸಭೆಯಲ್ಲಿ 3 ಸಾಧ್ಯತೆಗಳ ಬಗ್ಗೆ ಸಂಪುಟ ಸಮಿತಿಗೆ ಸಲ್ಲಿಸಲು ತೀರ್ಮಾನಿಸಿದೆ.

ಮುಂದಿನ ಗುರುವಾರ (ಸೆ.26) ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಉಪಸಮಿತಿ ವರದಿ ಸಲ್ಲಿಕೆಯಾಗಲಿದೆ. ಸಂಪುಟದ ನಿರ್ಣಯ ಆಧರಿಸಿ ಸೆ. 27ರಂದು ಕೇಂದ್ರ ಸರಕಾರಕ್ಕೆ ರಾಜ್ಯ ತನ್ನ ಅಭಿಪ್ರಾಯವನ್ನು ಸಲ್ಲಿಸಲಿದೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಗುರುವಾರ 11 ಬಾಧಿತ ಜಿಲ್ಲೆಗಳ ಜನಪ್ರತಿನಿಧಿಗಳ ಜತೆಗೆ ರಾಜ್ಯ ಸರಕಾರ ಸಭೆ ನಡೆಸಿ ವರದಿ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿತ್ತು. ಬಹುತೇಕರು ವರದಿಯ ತಿರಸ್ಕಾರಕ್ಕೆ ಸೂಚಿಸಿದ್ದರು. ಆದರೆ ಏಳನೆಯ ಬಾರಿಗೂ ಇದೇ ಕ್ರಮ ಅನುಸರಿಸಿದರೆ ಸುಪ್ರೀಂ ಕೋರ್ಟ್‌ನಲ್ಲಿ ಮುಖಭಂಗವಾಗಬಹುದೆಂಬ ಕಾರಣಕ್ಕೆ ಅರಣ್ಯ ಇಲಾಖೆ ಕೆಲ ಆಯ್ಕೆಗಳನ್ನು ಸೂಚಿಸಿತ್ತು.

ಶುಕ್ರವಾರ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಈ ಎಲ್ಲ ವಿಷಯಗಳು ಚರ್ಚೆ ಯಾಗಿವೆ. ಅಂತಿಮವಾಗಿ ಈ ಬಗ್ಗೆ ಸಂಪುಟವೇ ನಿರ್ಧಾರ ತೆಗೆದುಕೊಳ್ಳಲಿ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. 3 ಸಾಧ್ಯತೆಗಳನ್ನು ವರದಿಯಲ್ಲಿ ಸೂಚಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Advertisement

ಇವೆಲ್ಲದರ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಜತೆಗೆ ಚರ್ಚೆ ನಡೆಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ನಿರ್ಧರಿಸಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಪಶ್ಚಿಮಘಟ್ಟಗಳ ರಕ್ಷಣೆ ಅನಿವಾರ್ಯವಾಗಿದ್ದು, ಕಠಿನ ಕ್ರಮ ಅನುಸರಿಸುವುದು ಅಗತ್ಯ ಎಂದು ಅರಣ್ಯ ಇಲಾಖೆ ಹೇಳಿದೆ. ಹೀಗಾಗಿ ಮಧ್ಯಮ ಮಾರ್ಗದ ಅನ್ವೇಷಣೆಗೆ ಸರಕಾರ ಮುಂದಾಗಿದ್ದು, ಜನ ಪ್ರತಿನಿಧಿಗಳ ಸಲಹೆಯನ್ನು ಗಮನ ದಲ್ಲಿಟ್ಟುಕೊಂಡು ಹೆಜ್ಜೆ ಇಡುವುದು ಅನಿವಾರ್ಯವಾಗಿದೆ.

ಸಾಧ್ಯತೆಗಳೇನು?
1.ಶಾಸಕರ ಆಗ್ರಹದಂತೆ ಕಸ್ತೂರಿರಂಗನ್‌ ವರದಿ ಅನುಷ್ಠಾನಕ್ಕೆ ಏಕಪಕ್ಷೀಯ ತಿರಸ್ಕಾರ
2.ವಿವಿಧ ಅರಣ್ಯ ಸ್ವರೂಪದಲ್ಲಿ ಇರುವ 16,000 ಚ.ಕೀ. ವ್ಯಾಪ್ತಿಯಲ್ಲಿರುವ ಹಳ್ಳಿಗಳನ್ನು ಹೊರಗಿಟ್ಟು ವರದಿ ಜಾರಿ
3.ಜನವಸತಿ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್‌ ಸೇರಿದಂತೆ ಕೆಲ ರಿಯಾಯಿತಿ ಕೋರಿಕೆ

 

Advertisement

Udayavani is now on Telegram. Click here to join our channel and stay updated with the latest news.

Next