Advertisement

18 ತಿಂಗಳಲ್ಲಿ 10 ಸಾವಿರ ಎಕರೆ ಅರಣ್ಯ ಭೂಮಿ ವಶ: ಸಚಿವ ಖಂಡ್ರೆ

10:41 PM Sep 11, 2024 | Team Udayavani |

ಬೆಂಗಳೂರು: ಕಳೆದ 18 ತಿಂಗಳಲ್ಲಿ ಅರಣ್ಯ ಇಲಾಖೆ ಸುಮಾರು 11 ಸಾವಿರ ಎಕರೆ ಭೂಮಿಯನ್ನು ಅಧಿಸೂಚಿತ ಅರಣ್ಯ ಎಂದು ಘೋಷಿಸಿದೆ.

Advertisement

ಜತೆಗೆ ಬೆಂಗಳೂರು, ಕೋಲಾರ, ಬೀದರ್‌ ಸೇರಿ ರಾಜ್ಯದ ವಿವಿಧೆಡೆ ಸಾವಿರಾರು ಕೋಟಿ ರೂ. ಬೆಲೆ ಬಾಳುವ 10 ಸಾವಿರ ಎಕರೆಗೂ ಹೆಚ್ಚು ಅರಣ್ಯ ಭೂಮಿಯನ್ನು ಮರಳಿ ವಶಕ್ಕೆ ಪಡೆಯಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹೇಳಿದರು.

ಅವರು ಬುಧವಾರ ಬೆಂಗಳೂರಿನ ಅರಣ್ಯ ಭವನದಲ್ಲಿ ರಾಷ್ಟ್ರೀಯ ಹುತಾತ್ಮರ ದಿನದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿ ಮಾತನಾಡಿದರು.

2015ಕ್ಕೂ ಮುನ್ನ ರಾಜ್ಯ ಸರಕಾರದ ನಡವಳಿಗೆ ಮೊದಲು ಪಟ್ಟಾ ಜಮೀನು ಮತ್ತು ಅರಣ್ಯ ಭೂಮಿ ಒತ್ತುವರಿ ಸೇರಿ 3 ಎಕರೆ ಮೀರದ ಹಾಗೂ ಅರಣ್ಯ ಹಕ್ಕು ಕಾಯಿದೆ ವಿಲೇವಾರಿಯಾಗದ ಅರ್ಜಿ ಪ್ರಕರಣಗಳ ಹೊರತಾಗಿ ದೊಡ್ಡ ಮಟ್ಟದ ಅರಣ್ಯ ಒತ್ತುವರಿ ತೆರವು ಮಾಡಿಸಲು ಸ್ಪಷ್ಟ ಆದೇಶ ನೀಡಲಾಗಿದೆ. ಆದರೆ ಕೆಲವೊಬ್ಬರು ಜನರಿಗೆ ತಪ್ಪು ಮಾಹಿತಿ ನೀಡಿ, ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಅಧಿಕಾರಿಗಳು ಜನರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದರು.

ಅರಣ್ಯ ಬೆಳೆಸುವ ಪ್ರಕ್ರಿಯೆ ಹೆಚ್ಚಾಗಬೇಕು
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಪ್ರಸ್ತುತ ಶೇ. 22ರಷ್ಟು ಅರಣ್ಯ ಪ್ರದೇಶವಿದೆ. ಆದರೂ ಅನುಪಾತಕ್ಕೆ ತಕ್ಕಷ್ಟು ಇಲ್ಲ. ಕಾಡು ಮತ್ತು ವನ್ಯ ಪ್ರಾಣಿ ಸಂಪತ್ತಿನ ರಕ್ಷಣೆ ಕೇವಲ ಅರಣ್ಯಾಧಿಕಾರಿಗಳು ಮತ್ತು ಸಿಬಂದಿಯ ಕರ್ತವ್ಯ ಎಂದರೆ ನಾವು ನಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಂತಾಗುತ್ತದೆ. ರಾಜ್ಯದಲ್ಲಿ ಆನೆ, ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ಸಂಗತಿ. ಆದರೆ ಪ್ರಾಣಿ-ಮನುಷ್ಯ ಸಂಘರ್ಷ ತಪ್ಪಿಸಿ ಮಾನವ, ಪ್ರಾಣಿ ಸಂಪತ್ತನ್ನು ಕಾಪಾಡುವ ದಿಕ್ಕಿನಲ್ಲಿ ಇನ್ನಷ್ಟು ಪರಿಣಾಮಕಾರಿ ಕೆಲಸಗಳು ಆಗಬೇಕಿದೆ. ಇದಕ್ಕಾಗಿ ಲಭ್ಯ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದರು.

Advertisement

ಅರಣ್ಯ ಸಿಬಂದಿಗೂ ಪೊಲೀಸ್‌ ಕ್ಯಾಂಟೀನ್‌ಗೆ ಮನವಿ
ಸಮೃದ್ಧ ಅರಣ್ಯ ಸಂಪತ್ತಿನ ರಕ್ಷಣೆಗೆ ಹಗಲಿರುಳು, ಜೀವದ ಹಂಗು ತೊರೆದು ಶ್ರಮಿಸುವ ಅರಣ್ಯ ಅಧಿಕಾರಿಗಳು ಮತ್ತು ಸಿಬಂದಿಗೆ ಹಾಲಿ ಇರುವ ಪೊಲೀಸ್‌ ಕ್ಯಾಂಟೀನ್‌ ಸೌಲಭ್ಯ ಬಳಸಿಕೊಳ್ಳಲು ಅವಕಾಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದರು. ಅರಣ್ಯ ಸಂರಕ್ಷಣೆಗೆ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ಹೊರಗುತ್ತಿಗೆ ನೌಕರರಿಗೂ ಮಾಸಿಕ 3 ಸಾವಿರ ರೂ. ಕಷ್ಟ ಕಾರ್ಯ ಭತ್ತೆಯನ್ನು ಅನುಷ್ಠಾನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next