Advertisement
ಇದನ್ನು ಹೊರತುಪಡಿಸಿ ಸಂಪುಟದಲ್ಲಿ 2017-18 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ಪೂರ್ವ ವಿದ್ಯಾರ್ಥಿನಿಲಯಗಳ ಮತ್ತು ಆಶ್ರಮ ಶಾಲೆಗಳ ವಿದ್ಯಾರ್ಥಿಗಳಿಗೆ ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ಸ್ ವತಿಯಿಂದ ಸಿರಿಗಂಧ ಕಿಟ್ ಖರೀದಿಸುವ 50.53 ಕೋಟಿ ರೂ. ಯೋಜನೆ, ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ರಾಜ್ಯ ಸರಕಾರದ ಪ್ರೋತ್ಸಾಹ ಧನ ರೈತರಿಗೆ ಪಾವತಿಸಲು 13.92 ಕೋಟಿ ರೂ. ಬಿಡುಗಡೆ, 2017-18ನೇ ಸಾಲಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಐಇಬಿಆರ್ ಅಡಿಯಲ್ಲಿ ಅವಧಿ ಸಾಲಗಳ ಮೂಲ 1,500 ಕೋಟಿ ರೂ. ಸಂಗ್ರಹಿಸಲು ಅನುಮೋದನೆ ಮತ್ತು ಸರಕಾರಿ ಖಾತರಿ ನೀಡುವುದು, ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವುದು ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿವೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಅಧಿಕಾರಿಗಳಿಗೆ ನೀಡಿರುವ ಭಡ್ತಿ ಮೀಸಲಾತಿ ಮುಂದುವರಿಸಲು ಹೊರಡಿಸಿದ್ದ ಅಧ್ಯಾದೇಶವನ್ನು ರಾಜ್ಯಪಾಲರು ವಾಪಸ್ ಕಳುಹಿಸಿರುವ ವಿಚಾರ ಸೋಮವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ. ರಾಜ್ಯಪಾಲರು ಅಧ್ಯಾದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಾಪಸ್ ಕಳುಹಿಸಿರುವುದರಿಂದ ಮುಂದೇನು ಮಾಡಬೇಕು ಎಂಬ ಬಗ್ಗೆ ಅಡ್ವೊಕೇಟ್ ಜನರಲ್ ಅಭಿಪ್ರಾಯವನ್ನೂ ಕೇಳಿದ್ದು, ಈ ಬಗ್ಗೆ ಸಂಪುಟದಲ್ಲೂ ಚರ್ಚೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ. ರಾಜ್ಯಪಾಲರು ಅಧ್ಯಾದೇಶ ವಾಪಸ್ ಕಳುಹಿಸಿರುವುದರಿಂದ ಸುಮ್ಮನಾಗುವುದೋ ಅಥವಾ ಸ್ಪಷ್ಟನೆಯೊಂದಿಗೆ ಮತ್ತೂಮ್ಮೆ ಕಳುಹಿಸುವುದೋ ಎಂಬ ಬಗ್ಗೆ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಅನಂತರ ಅಗತ್ಯವಾದರೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.