Advertisement

ಇಂದು ಸಂಪುಟ ವಿಸ್ತರಣೆ: ರೇವಣ್ಣ , ತಿಮ್ಮಾಪುರ, ಗೀತಾ ಸೇರ್ಪಡೆ

07:41 AM Sep 01, 2017 | |

ಬೆಂಗಳೂರು: ಅನೇಕ ದಿನಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಸಚಿವಾಕಾಂಕ್ಷಿಗಳಿಗೆ ಕಡೆಗೂ ಶುಭ ಘಳಿಗೆ ಕೂಡಿ ಬಂದಿದೆ. ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದ್ದು, ಶುಕ್ರವಾರ ಸಂಜೆ ಐದು ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ಮೂವರು ಶಾಸಕರು, ಸಚಿವರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಸೇರಲಿದ್ದಾರೆ. ನಿರೀಕ್ಷೆಯಂತೆ ವಿಧಾನ ಪರಿಷತ್‌ ಸದಸ್ಯ ಎಚ್‌. ಎಂ. ರೇವಣ್ಣ  ಸಚಿವರಾಗುತ್ತಿದ್ದು, ದಲಿತ ಕೋಟಾದಡಿ ಆರ್‌.ಬಿ. ತಿಮ್ಮಾಪುರ ಮತ್ತು ಜಾತಿಯ ಲೆಕ್ಕಾಚಾರದಲ್ಲಿ ಲಿಂಗಾಯತ ಸಮುದಾಯದ ಗೀತಾ ಮಹದೇವ ಪ್ರಸಾದ್‌ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ.

Advertisement

ಈಗಾಗಲೇ ಸಂಪುಟ ಸೇರುವವರ ಪಟ್ಟಿಯನ್ನು ಮುಖ್ಯಮಂತ್ರಿ ಸಚಿವಾಲಯ ರಾಜಭವನಕ್ಕೆ ಕಳುಹಿಸಿ ಕೊಟ್ಟಿದ್ದು, ಶುಕ್ರವಾರ ಸಂಜೆ 5 ಗಂಟೆಗೆ ರಾಜ್ಯಪಾಲ ವಜುಭಾಯಿ ವಾಲಾ ಅಧಿಕಾರದ ಗೌಪ್ಯತಾ ಪ್ರಮಾಣ ವಚನ ಬೋಧಿಸಲಿದ್ದಾರೆ. 2018ರ ಚುನಾವಣೆಗೆ ಹತ್ತು ತಿಂಗಳು ಬಾಕಿ ಉಳಿದಿದ್ದು, ಪೂರ್ಣ ಸಂಪುಟದೊಂದಿಗೆ ಖಾಲಿಯಾಗಿ ರುವ ಸಮುದಾಯದವರಿಗೆ ಸ್ಥಾನ ಕಲ್ಪಿಸುವ ಮೂಲಕ ಯಾರಿಗೂ ಅಸಮಾಧಾನಕ್ಕೆ ಅವಕಾಶ ಕಲ್ಪಿಸದಂತೆ ಮುಖ್ಯಮಂತ್ರಿ ತೀರ್ಮಾನ ಕೈಗೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ಕೈ ತಪ್ಪುವ ಆತಂಕದಿಂದ ಬಹಿರಂಗ ಅಸಮಾಧಾನ ಹೊರ ಹಾಕುವುದು ವಿರಳ ಎಂಬ ಮಾತು ಕೇಳಿ ಬರುತ್ತಿದೆ.

ಸಂಪುಟದಲ್ಲಿ ಅವಕಾಶ ವಂಚಿತರಾದವರಲ್ಲಿ ಪಿ.ಎಂ. ನರೇಂದ್ರಸ್ವಾಮಿ ಪರ ಮುಖ್ಯಮಂತ್ರಿ ಒಲವಿದ್ದರೂ ಜಾತಿ ಲೆಕ್ಕಾಚಾರದ ದೃಷ್ಟಿಯಿಂದ  ಆರ್‌.ಬಿ. ತಿಮ್ಮಾಪುರ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಮೋಟಮ್ಮ ಪರವಾಗಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಪ್ರಯತ್ನಿಸಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೋಟಮ್ಮ ಅವರನ್ನು ಸಂಪುಟದಿಂದ ದೂರ ಇಡಬೇಕು ಎಂಬ ಕಾರಣಕ್ಕೆ ತಿಮ್ಮಾಪುರ ಅವರಿಗೆ ಅವಕಾಶ ನೀಡಿದ್ದಾರೆ ಎನ್ನಲಾಗುತ್ತಿದೆ.

ತಿಮ್ಮಾಪುರ ಸೇರ್ಪಡೆಗೆ ಅಡ್ಡಿಯಿಲ್ಲ: ಸಿಎಂ
ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪುರ ಅವರ ಸಚಿವ ಸಂಪುಟ ಸೇರ್ಪಡೆಗೆ ಯಾವುದೇ ಅಡ್ಡಿಯಿಲ್ಲ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ತಿಮ್ಮಾಪುರ ಪ್ರಯಾಣ ವೆಚ್ಚ ಕುರಿತು ಬಿಬಿಎಂಪಿ ಆಯುಕ್ತರ ವರದಿ ಸಂಬಂಧದ ಪ್ರಶ್ನೆಗೆ ಪ್ರತಿ ಕ್ರಿಯಿಸಿ, “ಯಾವುದೇ ಕಾನೂನು ತೊಡಕಿಲ್ಲ’ ಎಂದರು.

ಸಚಿವ ಸ್ಥಾನಕ್ಕೆ  ಈ ಮೂವರ ಆಯ್ಕೆಗೆ ಇವೆ ಹಲವು  ಲೆಕ್ಕಾಚಾರಗಳು
ಆರ್‌.ಬಿ. ತಿಮ್ಮಾಪುರ
ಹಿರಿಯ ವಿಧಾನ ಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪುರ ದಲಿತ ಸಮುದಾಯದ ಹಿರಿಯ ನಾಯಕರಾಗಿದ್ದು, ಉತ್ತರ ಕರ್ನಾಟಕ ಭಾಗದ ದಲಿತ ನಾಯಕರಾಗಿದ್ದಾರೆ. ದಲಿತರಲ್ಲಿ ಎಡಗೈ ಸಮುದಾಯದವರಿಗೆ ಕಾಂಗ್ರೆಸ್‌ನಲ್ಲಿ  ಹೆಚ್ಚಿನ ಪ್ರಾಧಾನ್ಯತೆ ಇಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆರ್‌.ಬಿ. ತಿಮ್ಮಾಪುರ್‌ ಅವರಿಗೆ ಸಂಪುಟದಲ್ಲಿ ಸ್ಥಾನ ದೊರೆಯಲು ಪ್ರಮುಖ ಕಾರಣವಾಗಿದೆ. ದಲಿತ ಸಮುದಾಯದ ಬಲಗೈ ಪಂಗಡಕ್ಕೆ ಸೇರಿದ್ದ ಪರಮೇಶ್ವರ್‌ ಹಾಗೂ ಶ್ರೀನಿವಾಸ ಪ್ರಸಾದ್‌ ಅವರಿಂದ ಸ್ಥಾನ ತೆರವಾಗಿದ್ದರೂ ಎಡಗೈ ಸಮುದಾಯದ ಆರ್‌. ಬಿ. ತಿಮ್ಮಾಪುರ್‌ಗೆ ಲಭಿಸಲು ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಬೆಂಬಲವಾಗಿ ನಿಂತಿದ್ದರು ಎಂದು ಹೇಳಲಾಗುತ್ತಿದೆ.

Advertisement

ಎಚ್‌.ಎಂ. ರೇವಣ್ಣ
ಎಚ್‌. ವೈ. ಮೇಟಿಯಿಂದ ತೆರವಾದ ಸ್ಥಾನಕ್ಕೆ ಅದೇ ಸಮುದಾಯದವರಿಗೆ ಸ್ಥಾನ ನೀಡಬೇಕೆಂಬ ಕೂಗು ಕೇಳಿ ಬರುತ್ತಿತ್ತು. ಅಲ್ಲದೇ ಕುರುಬ ಸಮುದಾಯದ ಸಿ.ಎಸ್‌. ಶಿವಳ್ಳಿ, ಗೋವಿಂದಪ್ಪ, ಎಂ.ಟಿ.ಬಿ ನಾಗರಾಜ್‌ ಹೆಸರುಗಳು ಕೇಳಿ ಬಂದಿದ್ದರೂ, ಮುಖ್ಯ ಮಂತ್ರಿಯ ಆಪ್ತರಲ್ಲಿ ಗುರುತಿಸಿಕೊಂಡಿದ್ದು, ಅಲ್ಲದೇ ಎಚ್‌. ವಿಶ್ವನಾಥ ಪಕ್ಷ ತೊರೆದ ಮೇಲೆ ಸ್ವ ಸಮುದಾಯದವರಿಗೆ ಸಚಿವ ಸ್ಥಾನ ನೀಡದಿದ್ದರೆ, ವಿರೋಧ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ರೇವಣ್ಣಗೆ ಸಚಿವ ಸ್ಥಾನ ಲಭಿಸಲು ಕಾರಣವಾಗಿದೆ ಎಂದು ಹೇಳಲಾಗುತ್ತದೆ. ರೇವಣ್ಣ ಸಚಿವರಾಗದಿದ್ದರೂ. ಕುರುಬ ಸಮುದಾಯದ ಸಂಘಟನೆ ಮಾಡುವಲ್ಲಿ ನಿರತರಾಗಿದ್ದು ಅವರಿಗೆ ಸ್ಥಾನ ಪಡೆಯುವಲ್ಲಿ ಅನುಕೂಲವಾಯಿತು ಎನ್ನಲಾಗುತ್ತಿದೆ.

ಗೀತಾ ಮಹದೇವ ಪ್ರಸಾದ್‌
ಎಚ್‌. ಎಸ್‌. ಮಹದೇವ ಪ್ರಸಾದ್‌ ಅಧಿಕಾರದಲ್ಲಿರು ವಾಗಲೇ ನಿಧನ ಹೊಂದಿದ್ದರಿಂದ ಅವರಿಂದ ತೆರವಾದ ಸ್ಥಾನಕ್ಕೆ ಲಿಂಗಾಯತ ಸಮುದಾಯದವರನ್ನೇ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂಬ ಒತ್ತಡ ಇತ್ತು. ವಿಶೇಷವಾಗಿ ಹಳೆ ಮೈಸೂರು ಭಾಗದ ಲಿಂಗಾಯತರಿಗೆ ನೀಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಅದರ ಪ್ರಯತ್ನವಾಗಿ ತಿಪಟೂರು ಶಾಸಕ ಷಡಕ್ಷರಿ ಅವರಿಗೆ ಅವಕಾಶ ನೀಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಷಡಕ್ಷರಿ ಅವರು ಸಚಿವರಾದರೆ, ಅವರ ವಿರುದ್ಧ ಗಂಭೀರ ಆರೋಪ ಹೊರ ಬೀಳುತ್ತದೆ ಎಂಬ ಆಂತರಿಕ ಮಾಹಿತಿಯ ಹಿನ್ನೆಲೆಯಲ್ಲಿ ಅವರನ್ನು ಬಿಟ್ಟು ಗೀತಾ ಮಹದೇವ ಪ್ರಸಾದ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಚುನಾವಣೆ ದೃಷ್ಟಿಯಿಂದ ಹಳೆ ಮೈಸೂರು ಭಾಗದಲ್ಲಿ ಜಾತಿ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ಗೆ ಲಿಂಗಾಯತ ಮತ ಸೆಳೆಯಲು ಇದು ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next