ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ಕ್ರಿಟಿಕಲ್ ಕೇರ್ ಬ್ಲಾಕ್ ಗಳ ಸ್ಥಾಪನೆ ಬಿಟ್ಟರೆ, ತಾಲೂಕಿಗೆ ಬಜೆಟ್‌ನಲ್ಲಿ ಯಾವುದೇ ಕೊಡುಗೆ ಇಲ್ಲ ಎಂದು ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಆಸ್ಪತ್ರೆ ಸ್ಥಾಪಿಸಲು ಯಾವುದೇ ಅನುಮೋದನೆ ಇಲ್ಲ. ವೃಷಭಾವತಿ ಕಣಿವೆಯಿಂದ ತ್ಯಾಜ್ಯ ಶುದ್ಧೀಕರಿಸಿದ ನೀರನ್ನು ತಾಲೂಕಿನ 90 ಕೆರೆಗಳಿಗೆ ತುಂಬಿಸುವ ಯೋಜನೆಗೆ ಅನುಮೋದನೆ ದೊರೆತಿಲ್ಲ. ಶಾಶ್ವತ ನೀರಾವರಿ ಯೋಜನೆಗೆ ಆದ್ಯತೆ ನೀಡಿಲ್ಲ. ನಗರಕ್ಕೆ ನರ್ಸಿಂಗ್ ಕಾಲೇಜು, ಮಹಿಳಾ ಪದವಿ ಕಾಲೇಜಿಗೆ 1 ಎಕರೆ ಜಮೀನು ಮಂಜೂರು, ತಾಲೂಕಿಗೆ ಪಶು ಆಸ್ಪತ್ರೆ ಮೇಲ್ದರ್ಜೆಗೇರಿಕೆ, ಸಂಚಾರ ಪೊಲೀಸ್ ಠಾಣೆ, ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡಬೆಳವಂಗಲ ಮತ್ತು ಮಧುರೆ ಹೋಬಳಿಗೆ ಪದವಿ ಕಾಲೇಜು ಹಾಗೂ ಸಾಸಲು ಹೋಬಳಿಗೆ ಪದವಿ ಪೂರ್ವ ಕಾಲೇಜು, ದೊಡ್ಡಬಳ್ಳಾ ಪುರದಲ್ಲಿ ವೈದ್ಯಕೀಯ ಮಹಾವಿದ್ಯಾಲಯಗಳ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ.
ನಗರದಲ್ಲಿ 5 ಸಾವಿರ ಮನೆಗಳ ನಿರ್ಮಾಣ, ರೈಲ್ವೇ ನಿಲ್ದಾಣ ವೃತ್ತದಲ್ಲಿ ಮೇಲು ಸೇತುವೆ ನಿರ್ಮಿಸುವುದು ಮೊದಲಾಗಿ ದೊಡ್ಡಬೆಳವಂಗಲ ಮತ್ತು ಮಧುರೆ ಹೋಬಳಿಗಳಲ್ಲಿ ಕ್ರೀಡಾಂಗಣ, ಭಗತ್‌ಸಿಂಗ್ ಕ್ರೀಡಾಂಗಣ, ಜಿಲ್ಲಾ ಕ್ರೀಡಾಂಗಣಕ್ಕೆ ಅನುದಾನ, ಬೆಂಗಳೂರು ದೊಡ್ಡಬಳ್ಳಾಪುರ ನಡುವೆ ಉಪನಗರ ರೈಲು ಸಂಚಾರಕ್ಕೆ ಅನುದಾನ ಸೇರಿದಂತೆ ಶಾಸಕರು ಕಳೆದ ಬಜೆಟ್‌ನಲ್ಲಿ ಹಾಗೂ ಈ ಬಾರಿಯೂ ನೀಡಿದ್ದ ಯಾವುದೇ ಮನವಿಗಳು ಈಡೇರಿಲ್ಲ.
ನೇಕಾರರಿಗೆ ಅನುದಾನ ಮೀಸಲಿಡಬೇಕಿತ್ತು: ನೇಕಾರರನ್ನು ಅಸಂಘಟಿತ ಕಾರ್ಮಿಕರ ವ್ಯಾಪ್ತಿಗೆ ತಂದು ಕನಿಷ್ಠ ಕೂಲಿ ನಿಗದಿ, ನೇಕಾರರ ಭವನ ನಿರ್ಮಾಣ, ನೇಕಾರರಿಗೆ ಬಂಡವಾಳ ದೊರಕಿಸಿ ಕೊಡಲು ನೇಕಾರರ ಅಭಿವೃದ್ಧಿ ನಿಗಮ ಸ್ಥಾಪನೆ. ಕೈಮಗ್ಗ, ವಿದ್ಯುತ್ ಮಗ್ಗಗಳ ಇಲಾಖೆಗಳಿಗೆ ಹೆಚ್ಚಿನ ಅನುದಾನ, ಕಚ್ಚಾ ಸಾಮಗ್ರಿಗಳಿಗೆ ಸಹಾಯ ಧನ, ಕೈಗಾರಿಕಾ ವಸಾಹತು ವಸತಿ ಸಮುತ್ಛಯ, ಸಮುದಾಯ ಭವನ ನಿರ್ಮಾಣ, ಜವಳಿ ಹಾಗೂ ಸಿದ್ಧ ಉಡುಪು ವಲಯದ ಅಭಿವೃದ್ಧಿಗಾಗಿ ಹೊಸ ಜವಳಿ ನೀತಿಗಾಗಿ ಬಜೆಟ್‌ನಲ್ಲಿ ಮೀಸಲಿಡುವಂತೆ ನೇಕಾರರು ಒತ್ತಾಯಿಸಿದ್ದಾರೆ. ಮುಖ್ಯವಾಗಿ ನೇಕಾರರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕಿತ್ತು ಎನ್ನುತ್ತಾರೆ ನೇಕಾರರು.
ರಿಯಾಯಿತಿ: ನೇಕಾರರಿಗೆ ಕೊಂಚ ಸಮಾಧಾನ : ನೇಕಾರರಿಗೆ ನೇಕಾರ್ ಸಮ್ಮಾನ್ ಯೋಜನೆಯಡಿಯಲ್ಲಿ ಸಹಾಯಧನ 3 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಳ, ವಿದ್ಯುತ್ ಮಗ್ಗ ನೇಕಾರರು ಮತ್ತು ಮಗ್ಗ ಪೂರ್ವ ಕಾರ್ಮಿಕರಿಗೂ ಸಹ ನೇಕಾರ್ ಸಮ್ಮಾನ್ ಯೋಜನೆ ವಿಸ್ತರಣೆ, 1.5 ಲಕ್ಷ ನೇಕಾರರಿಗೆ ನೆರವಾಗುವ ಈ ಯೋಜನೆಯಡಿ 75 ಕೋಟಿ ರೂ. ನೇರ ನಗದು ವರ್ಗಾವಣೆ ಮೂಲಕ ನೇಕಾರರ ಖಾತೆಗೆ ಜಮಾ ಮಾಡಿರುವುದು. 5 ಎಚ್‌ಪಿ ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳಿಗೆ ಉಚಿತ ವಿದ್ಯುತ್ ಹಾಗೂ ನಿಗದಿತ ದರದಲ್ಲಿ ಶೇ.50ರಷ್ಟು ರಿಯಾಯಿತಿ, ನೇಕಾರರ ಪ್ಯಾಕೇಜ್ ಯೋಜನೆಯಡಿ ಜವಳಿ ಕ್ಷೇತ್ರಕ್ಕೆ ಸಾಮಾನ್ಯ ವರ್ಗದ ಅತಿ ಸಣ್ಣ ಘಟಕಗಳಿಗೆ ಒಂದು ಕೋಟಿ ರೂ.ವರೆಗೆ ಜವಳಿ ಮತ್ತು ಸಿದ್ಧ ಉಡುಪು ಘಟಕಗಳಿಗೆ ಶೇ.50ರಷ್ಟು ಅಥವಾ ಗರಿಷ್ಠ 50 ಲಕ್ಷ ರೂ. ಬಂಡವಾಳ ಸಹಾಯಧನ. ನೂತನ ಜವಳಿ ಹಾಗೂ ಸಿದ್ಧ ಉಡುಪು ನೀತಿ 2019-24 ಪರಿಷ್ಕರಣೆ ನೇಕಾರರಿಗೆ ಕೊಂಚ ಸಮಾಧಾನ ತಂದಿದೆ.
ರಾಜ್ಯ ಬಜೆಟ್ ಸಂಪೂರ್ಣ ನೀರಸವಾಗಿದ್ದು, ಇದು ಚುನಾವಣೆ ದೃಷ್ಟಿಯಿಂದ ರೂಪಿಸಿರುವ ಬಜೆಟ್ ಆಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ನೀಡಿದ್ದ 600 ಭರವಸೆಗಳಲ್ಲಿ 60 ಸಹ ಈಡೇರಿಲ್ಲ. ಜಿಲ್ಲಾಸ್ಪತ್ರೆ ಬಗ್ಗೆ ಚಕಾರವಿಲ್ಲ. ನಮ್ಮ ಕ್ಲಿನಿಕ್‌ಗಳಿಗೆ ವೈದ್ಯರ ಕೊರತೆಯಿದೆ. ಅಲ್ಪಸಂಖ್ಯಾತರ ಬಗ್ಗೆ ಎಲ್ಲಿಲ್ಲದ ಪ್ರೀತಿ ಈಗ ಬಂದಿದೆ. ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮಿತಿ ಹೆಚ್ಚಳವಿಲ್ಲ. ಕೃಷಿಕರಿಗೆ ನೀಡಿರುವ ಯೋಜನೆಗಳು ಬರೀ ಚುನಾವಣೆ ಗಿಮಿಕ್ ಆಗಿದೆ.
– ಟಿ.ವೆಂಕಟರಮಣಯ್ಯ, ಶಾಸಕ
ಮುಖ್ಯಮಂತ್ರಿಗಳ ಬಜೆಟ್‌ನಲ್ಲಿ ಬರಪೂರ ಕೊಡುಗೆ ಗಳಿವೆ. ಆದರೆ, ಇನ್ನೆರಡು ತಿಂಗಳಲ್ಲಿ ಚುನಾವಣೆ ಬರಲಿದ್ದು, ಕೊಟ್ಟಿರುವ ಭರವಸೆಗಳು ಈಡೇರುವುದು ಸಾಧ್ಯವೆ ಎನ್ನುವ ಅನುಮಾನ ಮೂಡುತ್ತಿದೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಸಮುದಾಯಕ್ಕೆ ಮೂರು ವರ್ಷಗಳಲ್ಲಿ ನೀಡಿರುವ ಕೊಡುಗೆ ಏನು?. ಕೃಷಿ ಕ್ಷೇತ್ರಕ್ಕೆ ಸರ್ಕಾರದ ಆಡಳಿತವಿದ್ದಾಗ ಗಮನಾರ್ಹ ಯೋಜನೆ ರೂಪಿಸದ ಸರ್ಕಾರ ಈಗ ಮತ ಕಸಿಯಲು ಜನರನ್ನು ದಿಕ್ಕು ತಪ್ಪಿಸುತ್ತಿದೆ.
– ಸುನೀಲ್ ಕುಮಾರ್, ವಕೀಲ