Advertisement

ರಾಜ್ಯ ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣ ಇಂದು

11:26 PM Aug 26, 2019 | Lakshmi GovindaRaj |

ಬೆಂಗಳೂರು: ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾದ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರ ಪದಗ್ರಹಣ ಕಾರ್ಯಕ್ರಮ ಮಂಗಳವಾರ ಬೆಳಗ್ಗೆ 10.30ಕ್ಕೆ ರಾಜ್ಯ ಬಿಜೆಪಿ ಕಚೇರಿ ಎದುರು ನಡೆಯಲಿದೆ.

Advertisement

ಈ ಬಗ್ಗೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ರಾಜ್ಯ ಬಿಜೆಪಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಮಂಗಳವಾರ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿಯಲಿರುವ ನೂತನ ಅಧ್ಯಕ್ಷರನ್ನು ಭವ್ಯ ಸ್ವಾಗತದೊಂದಿಗೆ ಬರ ಮಾಡಿಕೊಳ್ಳಲಾಗುವುದು ಎಂದರು.

ಬೆಳಗ್ಗೆ 9.30ಕ್ಕೆ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಂಗಳವಾದ್ಯಗಳೊಂದಿಗೆ ಅದ್ಧೂರಿಯಾಗಿ ರಾಜ್ಯ ಕಚೇರಿಗೆ ಕರೆ ತರಲಾಗುವುದು. ಬೆಳಗ್ಗೆ 10.30ಕ್ಕೆ ಪದಗ್ರಹಣ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿ ಸಚಿವರು, ಸಂಸದರು, ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಹಿರಿಯ ನಾಯಕರಾದ ಯಡಿಯೂರಪ್ಪ ಅವರು 39 ವರ್ಷಗಳ ಕಾಲ ಬಿಜೆಪಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ತಳ ಮಟ್ಟದಿಂದ ಪಕ್ಷ ಸಂಘಟಿಸಿ ರೈತರು, ಶ್ರಮಿಕರ ಪರವಾಗಿ ಹೋರಾಟ ನಡೆಸಿ ಪಕ್ಷವನ್ನು ಸದೃಢ ಮಟ್ಟಕ್ಕೆ ಬೆಳೆಸಿದ್ದಾರೆ. ಅವರು ರಾಜ್ಯಾಧ್ಯಕ್ಷರಾದ ಅವಧಿಯಲ್ಲಿ ಅವರ ನಾಯಕತ್ವದಲ್ಲೇ ರಾಜ್ಯ ವಿಧಾನಸಭೆ ಚುನಾವಣೆ ಎದುರಿಸಿದ್ದು, ಅತಿ ಹೆಚ್ಚು ಸ್ಥಾನ ಪಡೆದ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ದು ಇದೀಗ ಸರ್ಕಾರವನ್ನೂ ರಚಿಸಿದೆ. ಲೋಕಸಭಾ
ಚುನಾವಣೆಯಲ್ಲಿ 26 ಸ್ಥಾನ ಗೆದ್ದಿದ್ದೇವೆ. ಎಲ್ಲ ಹಂತದಲ್ಲೂ ಪಕ್ಷ ಸದೃಢವಾಗಿ ಬೆಳೆದಿದ್ದು, ರಾಜ್ಯದ ಎಲ್ಲ ಭಾಗಗಳಲ್ಲೂ ಬೆಳೆದಿದೆ ಎಂದು ತಿಳಿಸಿದರು.

ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾದ ನಳಿನ್‌ ಕುಮಾರ್‌ ಕಟೀಲ್‌ ಅವರು ಸಾಧಾರಣ ಕಾರ್ಯಕರ್ತರಾಗಿ ಉತ್ತಮ ಕಾರ್ಯ ನಿರ್ವಹಣೆ, ಬದ್ಧತೆ, ನಿಸ್ವಾರ್ಥ ಸೇವೆ ಗಮನಿಸಿ ಪಕ್ಷ ಅವರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿತು. ಅದರಂತೆ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಸಂಘಟನಾ ಚತುರರು, ವಾಗ್ಮಿಗಳೂ ಆದ ಅವರು ತಮ್ಮ ಕಾರ್ಯ ವೈಖರಿ ಮೂಲಕ ಸಣ್ಣ ವಯಸ್ಸಿನಲ್ಲೇ ಎಲ್ಲರ ಗಮನ ಸೆಳೆದವರು. ಅವರ ನಿಷ್ಠೆ, ಸಂಘಟನಾ ಚಾತುರ್ಯವನ್ನು ಗುರುತಿಸಿ ಪಕ್ಷ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ ಎಂದು ಹೇಳಿದರು.

Advertisement

ಆಡಳಿತ ಕುಸಿದಿಲ್ಲ: ಸಂಪುಟದಲ್ಲಿ ಅವಕಾಶ ನೀಡುವುದು, ಖಾತೆ ಹಂಚಿಕೆ ಮಾಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಹಾಗಾಗಿ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ. ರಾಜ್ಯ ಸರ್ಕಾರದ ಆಡಳಿತ ಕುಸಿದಿಲ್ಲ. ನೆರೆ ಸಂತ್ರಸ್ತರಿಗೆ ಸ್ಪಂದಿಸುವ ಕಾರ್ಯ ನಡೆದಿದ್ದು, ಆಡಳಿತ ಯಂತ್ರ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಮಸ್ಯೆಗಳ ಪರಿಹಾರಕ್ಕೆ ತ್ವರಿತವಾಗಿ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದರು.

ರಾಜ್ಯ ಸರ್ಕಾರದ ಪ್ರಮುಖ ವಿಚಾರಗಳು ಹಾಗೂ ರಾಜ್ಯಾಧ್ಯಕ್ಷರ ನೇಮಕದಲ್ಲಿ ವರಿಷ್ಠರೇ ನಿರ್ಧಾರ ಕೈಗೊಳ್ಳುತ್ತಿರುವುದರಿಂದ ಹೈಕಮಾಂಡ್‌ ಸಂಸ್ಕೃತಿ ಬಿಜೆಪಿಗೂ ಆವರಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆಂತರಿಕ ಪ್ರಜಾಪ್ರಭುತ್ವವಿರುವ ಯಾವುದಾದರೂ ಪಕ್ಷವಿದ್ದರೆ ಅದು ಬಿಜೆಪಿ. ಈ ಬಗ್ಗೆ ಯಾವುದೇ ಅನುಮಾನ ಬೇಡ.

ಅಪೇಕ್ಷಿತರು ಹೆಚ್ಚಾಗಿದ್ದ ಕಾರಣ ಒಂದಿಷ್ಟು ಸಮಾಲೋಚನೆ, ಚರ್ಚೆ ಬಳಿಕ ಅಂತಿಮಗೊಂಡಿದೆಯಷ್ಟೇ ಎಂದು ತಿಳಿಸಿದರು. ನೂತನ ಅಧ್ಯಕ್ಷರ ನೇಮಕದ ಬಳಿಕ ಪಕ್ಷದಲ್ಲಿ ಹಲವು ಬಣಗಳಾಗಿವೆ ಎಂಬುದು ಸುಳ್ಳು. ಬಿಜೆಪಿಯಲ್ಲಿ ಯಾವುದೇ ಬಣವಿಲ್ಲ. ಇರುವುದು ಬಿಜೆಪಿ ಬಣವಷ್ಟೇ. ಪಕ್ಷದಲ್ಲಿ ಎಲ್ಲರೂ ಕಾಯಕರ್ತರಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next