ಬೆಂಗಳೂರು: ಒಳಜಗಳದಲ್ಲೇ ಬಿದ್ದಿರುವ ಕಾಂಗ್ರೆಸ್, ಗಲಭೆ, ಅರಾಜಕತೆ ಸೃಷ್ಟಿಸಿ ಅಧಿಕಾರ ಪಡೆಯುವ ಹುನ್ನಾರ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಅವರು ಆರೋಪಿಸಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಜರಗಿದ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ತನ್ನ ಮರ್ಯಾದೆ ಉಳಿಸಿಕೊಳ್ಳಲು ಬೇರೆ ಬೇರೆ ತಂತ್ರ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗ ಗಲಭೆ, ಬೆಂಕಿ ಹಚ್ಚುವ ಕಾರ್ಯ ಮಾಡುತ್ತಿದೆ ಎಂದು ದೂರಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಸಿದ್ದು ಕಾಂಗ್ರೆಸ್‌ನವರೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಆ ಪಕ್ಷದೊಳಗಿನ ಗುಂಪುಗಾರಿಕೆಯನ್ನು ಬಹಿರಂಗಪಡಿಸಿದ್ದಾರೆ. ಈ ಮೂಲಕ ಅವರು ಡಿ.ಕೆ.ಶಿವಕುಮಾರ್‌ಗೆ ಟಾಂಗ್ ನೀಡಿದ್ದಾರೆ ಎಂದರು.
ಗ್ರಾ.ಪಂ.ನಲ್ಲಿ ಬಿಜೆಪಿಗೆ ಶೇ. 80ರಷ್ಟು ಸ್ಥಾನ
ಗ್ರಾ. ಪಂ. ಚುನಾವಣೆಯಲ್ಲಿ ಬಿಜೆಪಿಯು ಯುವ ಅಭ್ಯರ್ಥಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಶೇ.80ರಷ್ಟು ಅಭ್ಯರ್ಥಿಗಳು ಜಯ ಸಾಧಿಸಲಿದ್ದಾರೆ. 1.16 ಲಕ್ಷ ಕಾರ್ಯಕರ್ತರಿಗೆ ಜವಾಬ್ದಾರಿ ಹಂಚಿದ್ದೇವೆ. ಬಿಜೆಪಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಅವಿರೋಧ ಆಯ್ಕೆಯಾಗುತ್ತಿದ್ದಾರೆ. ಮೂರು ತಿಂಗಳ ಬಳಿಕ ನಡೆಯುವ ಜಿ.ಪಂ., ತಾ.ಪಂ. ಚುನಾವಣೆಗೂ ಈಗಿಂದಲೇ ಸಿದ್ಧತೆ ಮಾಡಿಕೊಳ್ಳಬೇಕೆಂದು ಅವರು ಪದಾಧಿಕಾರಿಗಳಿಗೆ ಸೂಚಿಸಿದರು.
ಕೆಲವೊಮ್ಮೆ ಸಿದ್ದರಾಮಯ್ಯ ಸತ್ಯ ಹೇಳುತ್ತಾರೆ, ಈಗಲೂ ಹೇಳಿದ್ದಾರೆ. ಬಿಜೆಪಿಗೆ ಯಾವತ್ತೂ ಕಾಂಗ್ರೆಸ್ ಹತ್ತಿರವಾಗಿಲ್ಲ. ಶತ್ರುವಿನ ಶತ್ರು ಮಿತ್ರ ಎನ್ನುವುದನ್ನು ನಿದ್ದೆಗಣ್ಣಲ್ಲೂ ನಾವು ಹೇಳುತ್ತೇವೆ. ಮೊದಲು ಜೆಡಿಎಸ್‌ಅನ್ನು ಬಿಜೆಪಿ ಬಿ ಟೀಂ ಎನ್ನುತಿದ್ದ ಕಾಂಗ್ರೆಸ್, ಆಮೇಲೆ ಅವರ ಜತೆಗೆ ಸರಕಾರ ಮಾಡಲಿಲ್ಲವೇ? ಕಾಂಗ್ರೆಸ್‌ಗೆ ನಾಚಿಕೆ ಇದೆಯಾ? ಜೆಡಿಎಸ್ ಆಗಾಗ ನಮಗೆ ಹತ್ತಿರ ಆಗುತ್ತಾರೆ, ದೂರ ಹೋಗುತ್ತಾರೆ.
-ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ