Advertisement

ಹಿರಿಯ ನಾಗರಿಕರಿಗೆ ರಾಜ್ಯ ಪ್ರಶಸ್ತಿ ಪ್ರಕಟ

06:15 AM Sep 30, 2018 | |

ಬೆಂಗಳೂರು: ರಾಜ್ಯ ಸರ್ಕಾರವು 2018ನೇ ಸಾಲಿನ‌ಲ್ಲಿ ಹಿರಿಯ ನಾಗರಿಕರಿಗೆ ನೀಡುವ ರಾಜ್ಯ ಪ್ರಶಸ್ತಿಗೆ ಕೆಳಕಂಡ ಸಾಧಕರು ಹಾಗೂ ಸಂಸ್ಥೆಗಳು ಭಾಜನವಾಗಿವೆ.

Advertisement

ಸಾಹಿತ್ಯ ಕ್ಷೇತ್ರದಲ್ಲಿ ಕಲಬುರಗಿ ಜಿಲ್ಲೆಯ ಡಾ.ಪಿ.ಎಸ್‌.ಶಂಕರ್‌, ಸಮಾಜ ಸೇವಾ ಕ್ಷೇತ್ರದಲ್ಲಿ ಡಾ.ವಿಜಯಲಕ್ಷ್ಮೀ ದೇಶಮಾನೆ, ಮಹದೇವಿ ಹುಲ್ಲೂರ್‌, ಜಗದಾಂಭ, ಶಿಕ್ಷಣ ಕ್ಷೇತ್ರದಲ್ಲಿ ಉಡುಪಿಯ ಡಾ.ಬಿ.ವಿ. ಕೆರೆ ಮಾರ್ತಾಂಡೆ, ಕಲಾ ಕ್ಷೇತ್ರದಲ್ಲಿ ದಾವಣಗೆರೆಯ ಚಿಂದೋಡಿ ಬಂಗಾರೇಶ್‌, ಕ್ರೀಡಾ ಕ್ಷೇತ್ರದಲ್ಲಿ ಮಂಡ್ಯ ಜಿಲ್ಲೆಯ ಡಿ.ಎನ್‌.ಸಂಪತ್‌, ಕಾನೂನು ಕ್ಷೇತ್ರದಲ್ಲಿ ಬಾಗಲಕೋಟೆಯ ಸದಾಶಿವ ಸಿದ್ಧಪ್ಪ ಬೆಳಗಲಿ ಹಾಗೂ ಸಾಂಸ್ಥಿಕ ಪ್ರಶಸ್ತಿಗೆ ಮಂಗಳೂರಿನ ಯೆನೆಪೋಯ ಮೆಡಿಕಲ್‌ ಕಾಲೇಜು ಆಯ್ಕೆಯಾಗಿದೆ.

ಒಟ್ಟು ಏಳು ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸಾಧಕರು, ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ಒಂದು ಲಕ್ಷ ರೂ. ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಪತ್ರ ಒಳಗೊಂಡಿದೆ. ಅ.1ರಂದು ಬೆಳಗ್ಗೆ 10.30ಕ್ಕೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಡಾ.ಜಯಮಾಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರ ಪ್ರಶಸ್ತಿಗೆ ಭಾಜನ
ಪ್ರಸಕ್ತ 2018ನೇ ಸಾಲಿನಲ್ಲಿ ನಾನಾ ಕ್ಷೇತ್ರಗಳಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿರುವ ಹಿರಿಯ ನಾಗರಿಕರಿಗೆ ನೀಡಲಾಗುವ ಕೇಂದ್ರ ಸರ್ಕಾರದ ರಾಷ್ಟ್ರೀಯ ಪ್ರಶಸ್ತಿಗೆ ರಾಜ್ಯದ ಕೆಳಕಂಡ ಸಾಧಕರು, ಸಂಸ್ಥೆಗಳು ಪಾತ್ರವಾಗಿದ್ದು, ವಿವರ ಹೀಗಿದೆ.

ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಖಾಸಗಿ ಸಂಸ್ಥೆ ಪ್ರಶಸ್ತಿಗೆ ಬೆಂಗಳೂರಿನ ಬ್ಯಾಪ್ಟಿಸ್ಟ್‌ ಆಸ್ಪತ್ರೆ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಖಾಸಗಿ ಸಂಸ್ಥೆ ಪ್ರಶಸ್ತಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಾದರಿ ತಾಯಿ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಮುನಿಯಮ್ಮ ಹಾಗೂ ಸೃಜನಶೀಲ ಕಲೆ ಪ್ರಶಸ್ತಿಗೆ ಬಳ್ಳಾರಿಯ ಬೆಳಗಲ್ಲು ವೀರಣ್ಣ ಭಾಜನರಾಗಿದ್ದಾರೆ.

Advertisement

ರಾಷ್ಟ್ರೀಯ ಪ್ರಶಸ್ತಿಗೆ ರಾಜ್ಯದ ಸಾಧಕರು ಹಾಗೂ ಸಂಸ್ಥೆಗಳು ಪಾತ್ರವಾಗಿರುವುದು ಹೆಮ್ಮೆಯ ಸಂಗತಿ ಎಂದಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಡಾ.ಜಯಮಾಲಾ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next