Advertisement

ಕೃಷಿ-ಗ್ರಾಮೀಣ ಉದ್ಯಮಕ್ಕೆ ಸ್ಟಾರ್ಟ್‌ಅಪ್‌ ಬಲ

08:21 PM Feb 01, 2022 | Team Udayavani |

ಕೇಂದ್ರ ಬಜೆಟ್‌ ಕೃಷಿ ಅಧುನಿಕ ಕಾಲದ ಬೇಡಿಕೆಗಳು ಮತ್ತು ತಂತ್ರಜ್ಞಾನಗಳಿಗೆ ತಕ್ಕಂತೆ ಕೃಷಿ ಪಠ್ಯ ಕ್ರಮ ಇರಬೇಕು ಎಂಬ ಉದ್ದೇಶದಿಂದ ಕೃಷಿ ವಿವಿಗಳ ಪಠ್ಯಕ್ರಮ ಪರಿಷ್ಕರಣೆ ವಿಚಾರವನ್ನು ಕೇಂದ್ರದ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

Advertisement

ನೈಸರ್ಗಿಕ, ಶೂನ್ಯ ಬಂಡವಾಳ ಹಾಗೂ ಸಾವಯವ ಕೃಷಿ, ಆಧನಿಕ ಕೃಷಿ, ಮೌಲ್ಯವರ್ಧನೆ ಮತ್ತು ನಿರ್ವಹಣೆಯ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯಗಳ ಪಠ್ಯಕ್ರಮ ಪರಿಷ್ಕರಣೆ ಮಾಡಲು ರಾಜ್ಯಗಳಿಗೆ ಉತ್ತೇಜಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಲು ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರ ಈಗಾಗಲೇ ಕೃಷಿ ವಲಯದಲ್ಲಿ ಸ್ಟಾರ್ಟ್‌ಅಪ್‌ಗ್ಳನ್ನು ಉತ್ತೇಜಿಸುತ್ತಿದೆ. ಈಗ ಮುಂದುವರಿದ ಭಾಗವಾಗಿ ಕೃಷಿ ಯಂತ್ರೋಪಕರಣಗಳು, ರೈತ ಉತ್ಪಾದನಾ ಸಂಸ್ಥೆ (ಎಫ್ಪಿಒ)ಗಳಿಗೂ ಸ್ಟಾರ್ಟ್‌ಅಪ್‌ ಕಲ್ಪನೆಯನ್ನು ವಿಸ್ತರಿಸಿದೆ. ವಿಶೇಷವೆಂದರೆ ನಬಾರ್ಡ್‌ ಮೂಲಕ ಅದಕ್ಕೆ ಆರ್ಥಿಕ ಬಲ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕೃಷಿ ಹಾಗೂ ಗ್ರಾಮೀಣ ಉದ್ಯಮಕ್ಕೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ಗಳು ಹಣಕಾಸಿನ ನೆರವು ಒದಗಿಸಲು ನಬಾರ್ಡ್‌ ಮೂಲಕ ಸಹ ಹೂಡಿಕೆ ಮಾದರಿಯಲ್ಲಿ ಸಂಯೋಜಿತ ನಿಧಿ ಕಾರ್ಯಗತಗೊಳಿಸಲಾಗುವುದು. ಈ ನಿಧಿಯಯಡಿ ಸ್ಟಾರ್ಟ್‌ಅಪ್‌ಗಳು ರೈತ ಉತ್ಪಾದನಾ ಸಂಸ್ಥೆ ಗೆ ಬೆಂಬಲ ನೀಡುವುದು, ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ನೀಡುವ ಮಾಹಿತಿ ತಂತ್ರಜ್ಞಾನ ಆಧಾರಿತ ತಾಂತ್ರಿಕ ನೆರವು ನೀಡುವ ಚಟುವಟಿಕೆಗಳನ್ನು ಹೊಂದಿರುತ್ತವೆ ಎಂದು ಕೇಂದ್ರದ ಬಜೆಟ್‌ನಲ್ಲಿ ಹೇಳಲಾಗಿದೆ.

– ಇಡೀ ದೇಶದಲ್ಲಿ ರಾಸಾಯನಿಕ ಮುಕ್ತ ನೈಸರ್ಗಿಕ ಬೇಸಾಯಕ್ಕೆ ಉತ್ತೇನ ನೀಡಲಾಗುವುದು. ಪ್ರಾಯೋಗಿಕವಾಗಿ ಗಂಗಾ ನದಿಯ ಕಾರಿಡಾರ್‌ನ 5 ಕಿ.ಮೀ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಇದನ್ನು ಕಾರ್ಯಗತಗೊಳಿಸಲಾಗುವುದು.
– 2023ನೇ ವರ್ಷವನ್ನು ಅಂತಾರಾಷ್ಟ್ರೀಯ ರಾಗಿ ವರ್ಷವೆಂದು ಘೋಷಿಸಲಾಗಿದೆ. ಇದಕ್ಕೆ ಪೂರಕವಾಗಿ ಕೊಯ್ಲು ನಂತರದ ಮೌಲ್ಯ ವರ್ಧನೆಗೆ ಬೆಂಬಲ ನೀಡಲಾಗುವುದು. ದೇಶೀಯ ಬಳಕೆ ವೃದ್ಧಿಸಲಾಗುವುದು. ಮತ್ತು ರಾಗಿ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡಿಂಗ್‌ ಮಾಡಲಾಗುವುದು.
– ಎಣ್ಣೆ ಬೀಜಗಳ ಆಮದು ಅವಲಂಬನೆಯನ್ನು ಕಡಿಮೆಗೊಳಿಸಲು ದೇಶಿಯ ಉತ್ಪಾದನಗೆ ಹೆಚ್ಚು ಉತ್ತೇಜನ ನೀಡುವ ಸಮಗ್ರ ಯೋಜನೆ ಜಾರಿಗೆ ತರಲಾಗುವುದು.
– ಬೆಳೆ ಸಮೀಕ್ಷೆ, ದಾಖಲೆಗಳ ಡಿಜಿಟಲೀಕರಣ, ಪೋಷಕಾಂಶಗಳು ಮತ್ತು ಕೀಟನಾಶಕಗಳ ಸಿಂಪಡಣೆಗೆ “ಕಿಸಾನ್‌ ಡ್ರೋಣ್‌’ ಬಳಕೆಗೆ ಉತ್ತೇಜನ ನೀಡಲಾಗುವುದು.
– ರೈತರಿಗೆ ಡಿಜಿಟಲ್‌ ಹಾಗೂ ಹೈಟೆಕ್‌ ಸೇವೆಗಳನ್ನು ಒದಗಿಸಲು ಸರ್ಕಾರಿ ಸ್ವಾಮ್ಯದ ಸಂಶೋಧನಾ ಮತ್ತು ವಿಸ್ತರಣಾ ಸಂಸ್ಥೆಗಳು ಮತ್ತು ಖಾಸಗಿ ಅಗ್ರಿಟೆಕ್‌ ಸಂಸ್ಥೆಗಳು, ಪಾಲುದಾರರು (ರೈತರು) ಸಹಯೋಗದೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು.

Advertisement

ತಜ್ಞರ ಅಭಿಪ್ರಾಯ
ಕೃಷಿ ಯಂತ್ರೋಪಕರಣಗಳ ಸ್ಟಾರ್ಟ್‌ಅಪ್‌ಗಳನ್ನು ಬಜೆಟ್‌ನಲ್ಲಿ ಘೋಷಿಸಿರುವುದು ಅತ್ಯಂತ ಕ್ರಾಂತಿಕಾರಿ ಹಾಗೂ ಕೃಷಿ ಕ್ಷೇತ್ರದ ಬೆಳವಣಿಗೆಗೆ ಪ್ರಯೋಜನಕಾರಿ ಕ್ರಮವಾಗಿದೆ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರ, ಕೃಷಿ ವಿವಿಗಳು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇದೊಂದು ಸುವರ್ಣಾವಕಾಶ ಎಂದು ತಿಳಿದು ಸ್ಟಾರ್ಟ್‌ಅಪ್‌ಗ್ಳ ಗರಿಷ್ಠ ಪ್ರಯೋಜನ ಪಡೆದುಕೊಳ್ಳಲು ಕೃಷಿ ಪದವೀಧರರು ಮುಂದೆ ಬರಬೇಕು. ಕೃಷಿ ಉಪಕರಣ, ರಸಗೊಬ್ಬರ, ರಾಸಾಯನಿಕಗಳ ಮೇಲಿನ ತೆರಿಗೆ ಕಡಿಮೆ ಮಾಡಿರುವುದು ಸ್ವಾಗತಾರ್ಹ. ಬೆಂಬಲ ಬೆಲೆ ಘೋಷಣೆ ಯೋಜನೆಯಿಂದ ಅಷ್ಟೊಂದು ಪ್ರಯೋಜನವಾಗುವುದಿಲ್ಲ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಬಜೆಟ್‌ನಲ್ಲಿ ಕೃಷಿ ಮತ್ತು ರೈತರಿಗೆ ಕೆಲವು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಕೃಷಿ ವಲಯದ ದೃಷ್ಟಿಯಿಂದ ಈ ಬಾರಿಯ ಬಜೆಟ್‌ ಸಮಧಾನಕರ ಮತ್ತು ಸ್ವಾಗತಾರ್ಹವಾಗಿದೆ.

ಕೇಂದ್ರದ ಬಜೆಟ್‌ನಲ್ಲಿ ನದಿ ಜೋಡಣೆ ಯೋಜನೆ ಘೋಷಿಸಲಾಗಿದೆ. ಆದರೆ, ಇದರಿಂದ ಕರ್ನಾಟಕ ಒಂದಿಷ್ಟೂ ಪ್ರಯೋಜನವಾಗುವುದಿಲ್ಲ. ತಮಿಳುನಾಡು ದೃಷ್ಟಿಯಲ್ಲಿಟ್ಟುಕೊಂಡು ನದಿ ಜೋಡಣೆ ಯೋಜನೆ ಘೋಷಣೆ ಮಾಡಿದಂತಿದೆ. ಈ ಯೋಜನೆಯಿಂದ ತಮಿಳುನಾಡು ಮತ್ತು ಅಂಧ್ರಪ್ರದೇಶಕ್ಕೆ ಹೆಚ್ಚಿನ ಲಾಭವಾಗಲಿದೆ. ಇದನ್ನು ಹೊರತುಪಡಿಸಿದರೆ ನೀರಾವರಿ ವಲಯದ ಯೋಜನೆಗಳು ಸರಿ ಇವೆ.

ಒಟ್ಟಾರೆಯಾಗಿ ಹೇಳುವುದಾದರೆ ಇದೊಂದು ದೂರದೃಷ್ಟಿಯ ಬಜೆಟ್‌ ಆಗಿದೆ. ಬಜೆಟ್‌ ನೋಡಿದರೆ ತಕ್ಷಣಕ್ಕೆ ಸಿಗುವಂತಹ ಯೋಜನೆ ಅಥವಾ ಲಾಭಗಳು ಕಾಣಲಿಕ್ಕಿಲ್ಲ. ಮೂಗಿಗೆ ತುಪ್ಪ ಸವರುವ ಯೋಜನೆಗಳನ್ನು ಘೋಷಿಸುವ ಬದಲು ಭವಿಷ್ಯದಲ್ಲಿ ಆರ್ಥಿಕತೆಯನ್ನು ಬಲಪಡಿಸುವ, ಮೂಲಸೌಕರ್ಯಗಳನ್ನು ವೃದ್ಧಿಗೊಳಿಸುವ ಬಜೆಟ್‌ ಆಗಿದೆ. ಮೂಲಸೌಕರ್ಯ, ರೈಲ್ವೆ, ಸೋಲಾರ್‌ ವಿದ್ಯುತ್‌, ಸ್ಮಾರ್ಟ್‌ ಸಿಟಿ ಮೇಲ್ದರ್ಜೆಗೆ ಒತ್ತು ಕೊಟ್ಟಿರುವುದು ಭವಿಷ್ಯದ ದೃಷ್ಟಿಯಿಂದ ಆಶಾದಾಯಕವಾಗಿದೆ. ಕೊರೊನಾ ಸಂಕಷ್ಟಗಳ ನಡುವೆ ಬಜೆಟ್‌ ಒಂದು ಸವಾಲಿನ ಕೆಲಸವಾಗಿದೆ. ಪ್ರಧಾನಿಗಳು ಅದನ್ನು ಸಮತೋಲಿತವಾಗಿ ಮಾಡಿದ್ದಾರೆ.
-ಪ್ರೊ. ಸಿ. ನರಸಿಂಹಪ್ಪ, ಕೃಷಿ ಹಾಗೂ ನೀರಾವರಿ ತಜ್ಞ.

Advertisement

Udayavani is now on Telegram. Click here to join our channel and stay updated with the latest news.

Next