ಕಡಬ: ನೂತನವಾಗಿ ಅನುಷ್ಠಾನಗೊಳ್ಳುತ್ತಿರುವ ಕಡಬ ತಾಲೂಕಿನ ಉದ್ಘಾಟನ ಸಮಾರಂಭವು ಆ. 15ರಂದು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಉದ್ಘಾಟನೆಯ ವೇಳೆಗೆ ಸರಕಾರದ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳನ್ನು ತೆರೆಯಲು ಕಟ್ಟಡಗಳ ಲಭ್ಯತೆಯ ಕುರಿತು ವಿವಿಧ ಸರಕಾರಿ ಕಟ್ಟಡಗಳನ್ನು ಶನಿವಾರ ಪರಿಶೀಲಿಸಲಾಯಿತು.
ಕೋಡಿಂಬಾಳದ ಉಂಡಿಲದಲ್ಲಿರುವ ಸುವರ್ಣ ಭವನದ ಕಟ್ಟಡ, ಹಳೆಸ್ಟೇಶನ್ ನಲ್ಲಿರುವ ತಾಲೂಕು ಪಂಚಾಯತ್‌ಗೆ ಸೇರಿದ ವಸತಿಗೃಹಗಳು, ಪಶು ವೈದ್ಯಕೀಯ ಚಿಕಿತ್ಸಾಲಯದ ಹಳೆಯ ಕಟ್ಟಡ, ಕಡಬ ಮಾದರಿ ಶಾಲೆಯ ವಠಾರದಲ್ಲಿರುವ ಹೊಸ ಅಂಗನವಾಡಿ ಕಟ್ಟಡ ಮತ್ತು ಕ್ಲಸ್ಟರ್ ಮುಖ್ಯಸ್ಥರ ಕಚೇರಿ ಕಟ್ಟಡಗಳನ್ನು ಪರಿಶೀಲಿಸಿ ಗುರುತಿಸಿಕೊಳ್ಳಲಾಯಿತು.
ಕಡಬ ತಹಶೀಲ್ದಾರ್ ಜಾನ್‌ಪ್ರಕಾಶ್ ರೋಡ್ರಿಗಸ್, ಪುತ್ತೂರು ತಹಶೀಲ್ದಾರ್ ಅನಂತ ಶಂಕರ, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಹಾಗೂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಕಡಬ ಪರಿಸರದ ವಿವಿಧ ಸರಕಾರಿ ಕಟ್ಟಡಗಳನ್ನು ಪರಿಶೀಲಿಸಲಾಯಿತು.
ಜಿ. ಪಂ. ಸದಸ್ಯರಾದ ಪಿ.ಪಿ. ವರ್ಗೀಸ್, ಸರ್ವೋತ್ತಮ ಗೌಡ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ತಾ.ಪಂ. ಸದಸ್ಯರಾದ ಫಝಲ್ ಕೋಡಿಂಬಾಳ, ಗಣೇಶ್ ಕೈಕುರೆ, ಪಿ.ವೈ.ಕುಸುಮಾ, ಕಡಬ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಬು ಮುಗೇರ, ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ, ಸದಸ್ಯರಾದ ನಾರಾಯಣ ಪೂಜಾರಿ, ಅಶ್ರಫ್ ಶೇಡಿಗುಂಡಿ, ಶರೀಫ್ ಎ.ಎಸ್., ಶಿಕ್ಷಣ ಇಲಾಖಾ ಕ್ಲಸ್ಟರ್ ಮುಖ್ಯಸ್ಥ ಕುಮಾರ್ ಕೆ.ಜೆ. ಹಾಜರಿದ್ದರು.
ಸರಕಾರಿ ಕಟ್ಟಡಗಳು ಸ್ವಂತ ಕಚೇರಿ ಸ್ಥಾಪಿಸಿ, ಆಯಾಯ ಕಚೇರಿಗೆ ಅಧಿಕಾರಿ ಮತ್ತು ಸಿಬಂದಿ ನಿಯೋಜಿಸಬೇಕು. ಪೂರ್ಣಪ್ರಮಾಣದ ಅಧಿಕಾರಿ ಇಲ್ಲದಿದ್ದರೆ ಪ್ರಭಾರ ವ್ಯವಸ್ಥೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಅವರು ನಿರ್ದೇಶನ ನೀಡಿದ್ದಾರೆ.
ಶೀಘ್ರ ತಾ| ಮಟ್ಟದ ಕಚೇರಿ ತೆರೆಯಲು ನಿರ್ದೇಶನ
ಕಂದಾಯ ಇಲಾಖೆ, ಭೂಮಾಪನ ಇಲಾಖೆ, ಆಹಾರ ಇಲಾಖೆ, ಉಪ ನೋಂದಣಿ ಕಚೇರಿ, ಪತ್ರಾಂಕಿತ ಉಪ ಖಜಾನೆ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ತಾಲೂಕು ಪಂಚಾಯತ್, ಕೃಷಿ ಇಲಾಖೆ, ತೋಟಗಾರಿಕ ಇಲಾಖೆ, ಪಶು ಸಂಗೋಪನ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆ, ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ, ಅಬಕಾರಿ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಗ್ರಂಥಾಲಯ ಹಾಗೂ ಅಗ್ನಿಶಾಮಕ ದಳ ಇಲಾಖೆಯ ತಾಲೂಕುಮಟ್ಟದ ಕಚೇರಿಗಳು ಕಡಬದಲ್ಲಿ ತೆರೆಯಬೇಕಾಗಿದ್ದು, ಕೆಲವು ಇಲಾಖೆಗಳಿಗೆ ಕಟ್ಟಡಗಳನ್ನು ಗುರುತಿಸಲಾಗಿದ್ದು, ಇನ್ನು ಕೆಲವು ಇಲಾಖೆಗಳಿಗೆ ಕಟ್ಟಡದ ವ್ಯವಸ್ಥೆಯಾಗಬೇಕಿದೆ.