ಕೆ.ಆರ್.ನಗರ: ಪಟ್ಟಣದ ಪುರಸಭೆಯ ಆಡಳಿತ ಮಂಡಳಿಗೆ ಮೇ 29ರಂದು ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿದ್ದು, ಮೇ 9ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಗೊಳ್ಳಲಿದೆ.
ಮೇ.16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೇ 17ರಂದು ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಮೇ 20 ಕಡೆಯ ದಿನವಾಗಿದ್ದು, 31ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಂದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರ ಬೀಳಲಿದೆ.
ಮಾರ್ಚ್ 13 2019ಕ್ಕೆ ಆಡಳಿತ ಮಂಡಳಿಯ ಅಧಿಕಾರವಧಿ ಕೊನೆಗೊಂಡಿದ್ದು, ಹುಣಸೂರು ಉಪ-ಭಾಗಾಧಿಕಾರಿಗಳು ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದರು. ಪುರಸಭೆಯ 23 ವಾರ್ಡ್‌ಗಳಿಂದ 35,329 ಮಂದಿ ಮತದಾರರಿದ್ದು, ಒಟ್ಟು 31 ಮತಕೇಂದ್ರಗಳಲ್ಲಿ ಮತದಾನ ನಡೆಯಲಿದೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 12 ಮಂದಿ, ಜೆಡಿಎಸ್‌ನಿಂದ 11 ಮಂದಿ, ಓರ್ವ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. 2018ರಲ್ಲಿ ಮಾಜಿ ಸಂಸದ ಹೆಚ್.ವಿಶ್ವನಾಥ್ ಅವರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡಾಗ ಕಾಂಗ್ರೆಸ್‌ನಿಂದ ಚುನಾುತರಾಗಿದ್ದ 17ನೇ ವಾರ್ಡಿನ ಮಹಾಲಕ್ಷಿ, 8ನೇ ವಾರ್ಡಿನ ಕೆ.ಜಿ.ಸುಬ್ರಹ್ಮಣ್ಯ ಅವರನ್ನು ಹೊರತುಪಡಿಸಿ ಉಳಿದೆಲ್ಲಾ ಕಾಂಗ್ರೆಸ್ ಸದಸ್ಯರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದರು.
ಇದರಿಂದ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿದ್ದರೂ ಹರ್ಷಲತಾ ಶ್ರೀಕಾಂತ್ ಅವರು ಪುರಸಭಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತರು ಎಂದು ಘೋಷಿಸಿಕೊಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ 23 ವಾರ್ಡ್‌ಗಳಲ್ಲಿಯೂ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ಹೊಸಹಳ್ಳಿ ವೆಂಕಟೇಶ್ ಎಲ್ಲಾ ವಾರ್ಡ್‌ಗಳಿಗೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ.
ಕಳೆದ ಬಾರಿ ಸದಸ್ಯರಾಗಿದ್ದ ಉಮೇಶ್, ಸರೋಜಾ ಮಹದೇವ್, ಎನ್.ಶಿವಕುಮಾರ್, ನಂಜುಂಡ, ಮಹಾಲಕ್ಷಿ ¾, ನಟರಾಜು, ಗೀತಾಮಹೇಶ್, ಕೆ.ಎಲ್.ಜಗದೀಶ್, ಫರೀದಾಖಾನಂ ಇವರು ಸ್ಫರ್ಧೆ ಮಾಡಲು ಹಾಲಿ ಮೀಸಲಾತಿಯಲ್ಲಿ ಅವಕಾಶವಿದ್ದು, ಹರ್ಷಲತಾ, ಫಿರ್ದೋಸ್‌ಖಾನಂ, ಸಿ.ಬಿ.ಕತಾ ಅವರ ಪತಿ ಮತ್ತು ಹೆಚ್.ಸಿ.ರಾಜು, ಕೆ.ಪಿ.ಪ್ರಭುಶಂಕರ್, ಕೆ.ಬಿ.ಸುಬ್ರಹ್ಮಣ್ಯ ಅವರ ಪತ್ನಿಯರನ್ನು ಕಣಕ್ಕಿಳಿಸಲು ಅವಕಾಶವಿದೆ.