Advertisement

ರಾಜ್ಯದಲ್ಲಿ 25,000 ಕಂಪೆನಿಗಳಿಂದ ಉತ್ಪಾದನೆ ಆರಂಭ: ದೇಸಾಯಿ

11:04 AM May 14, 2020 | mahesh |

ಮುಂಬಯಿ: ಕೋವಿಡ್ ಆತಂಕದ ಸಂದರ್ಭದಲ್ಲಿಯೂ ರಾಜ್ಯದ ಆರ್ಥಿಕತೆಯನ್ನು ಸ್ಥಿರವಾಗಿಸುವ ಪ್ರಯತ್ನ ಸರಕಾರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಕೆಲವು ಭಾಗಗಳಲ್ಲಿ ಕಾರ್ಖಾನೆಗಳನ್ನೂ ಆರಂಭಿಸಲು ಅನುಮತಿಯನ್ನು ನೀಡಲಾಗಿದ್ದು, ಅದರಲ್ಲಿ 25 ಸಾವಿರ ಕಂಪೆನಿಗಳಲ್ಲಿ ಉತ್ಪಾದನೆ ಪ್ರಾರಂಭವಾಗಿದ್ದು, ಈ ಕಂಪೆನಿಗಳಲ್ಲಿ ಸುಮಾರು 6.5 ಲಕ್ಷ ಕಾರ್ಮಿಕರು ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಕೈಗಾರಿಕಾ ಸಚಿವ ಸುಭಾಷ್‌ ದೇಸಾಯಿ ಹೇಳಿದ್ದಾರೆ.

Advertisement

ಕೆಂಪು ವಲಯವನ್ನು ಹೊರತುಪಡಿಸಿ, ರಾಜ್ಯದಲ್ಲಿ ಈವರೆಗೆ 57,745 ಕೈಗಾರಿಕೆಗಳಿಗೆ ಪರವಾನಗಿ ನೀಡಲಾಗಿದ್ದು, ಅದರಲ್ಲಿ 25,000 ಕಂಪೆನಿಗಳು ಉತ್ಪಾದನೆಯನ್ನು ಪ್ರಾರಂಭಿಸಿವೆ. ಇದರಲ್ಲಿ ಸುಮಾರು ಆರೂವರೆ ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪಶ್ಚಿಮ ಮಹಾರಾಷ್ಟ್ರದ 9,147 ಕಾರ್ಖಾನೆಗಳಿಗೆ ಪರವಾನಗಿ ನೀಡಲಾಗಿದೆ. ಈ ಪೈಕಿ 5 ಸಾವಿರ 774 ಕಾರ್ಖಾನೆಗಳು ಉತ್ಪಾದನೆಯನ್ನು ಪ್ರಾರಂಭಿಸಿವೆ ಎಂದು ಕೈಗಾರಿಕಾ ಸಚಿವ ದೇಸಾಯಿ ಹೇಳಿದ್ದಾರೆ.

ಪುಣೆಯಲ್ಲಿ ಮರಾಠಾ ಚೇಂಬರ್ಸ್‌ ಆಫ್ ಕಾಮರ್ಸ್‌, ಇಂಡಸ್ಟ್ರಿ ಮತ್ತು ಅಗ್ರಿಕಲ್ಚರ್‌ ಆಯೋಜಿಸಿದ ವೆಬ್‌ನಾರ್‌ನಲ್ಲಿ ಸಚಿವ ಸುಭಾಷ್‌ ದೇಸಾಯಿ ಅವರು ಮಾತನಾಡಿ, ಮುಂಬಯಿ, ಥಾಣೆ, ಪುಣೆ, ಪಿಂಪ್ರಿ-ಚಿಂಚಾಡ್‌ ಕೆಂಪು ವಲಯಕ್ಕೆ ಸೇರಿವೆ. ಇಲ್ಲಿ ಉದ್ಯಮವನ್ನು ಪ್ರಾರಂಭಿಸಲು ಅನುಮತಿ ನೀಡಬೇಕೆಂದು ಬೇಡಿಕೆಯು ಮಾಡಲಾಗುತ್ತಿದೆ. ಆದರೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಮೇ ಅಂತ್ಯದ ವೇಳೆಗೆ ಮಹಾರಾಷ್ಟ್ರವನ್ನು ಹಸಿರು ವಲಯವನ್ನಾಗಿ ಮಾಡಲು ನಿರ್ಧರಿಸಿದ್ದಾರೆ. ಅಲ್ಲಿಯವರೆಗೆ ಎಲ್ಲರೂ ಸಹಕರಿಸಬೇಕೆಂದು ಹೇಳಿದ್ದಾರೆ.

ಸ್ಥಿರ ವಿದ್ಯುತ್‌ ಬಿಲ್‌ಗ‌ಳ ಕುರಿತು ಇಂಧನ ಸಚಿವರೊಂದಿಗೆ ಸಭೆ ನಡೆಸಿದ್ದೇವೆ ಮತ್ತು ಬಳಸಲಾಗುವಷ್ಟು ವಿದ್ಯುತ್‌ ಶುಲ್ಕ ವಿಧಿಸಲು ನಿರ್ಧರಿಸಿದ್ದೇವೆ. ಇದಲ್ಲದೆ ಸಾಲದ ಕಂತುಗಳನ್ನು ಮರುಪಾವತಿಸಲು ಸಹ ರಿಯಾಯಿತಿಗಳನ್ನು ಘೋಷಿಸಲಾಗಿದೆ ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ಸಣ್ಣ ಕೈಗಾರಿಕೆ ಉದ್ಯಮಕ್ಕೆ ಬೆಂಬಲಿಸಲು ಕೇಂದ್ರ ಸರಕಾರ ಶೀಘ್ರದಲ್ಲೇ ಹಣಕಾಸು ಪ್ಯಾಕೇಜ್‌ ಘೋಷಿಸಲಿದೆ. ಅದಕ್ಕೆ ಸಂಬಂಧಿಸಿದ ಕೆಲಸ ಅಂತಿಮ ಹಂತದಲ್ಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ, ಸದಾನಂದ ಗೌಡ ಮತ್ತು ಪೀಯೂಷ್‌ ಗೋಯಲ್‌ ಅವರೊಂದಿಗೆ ಚರ್ಚೆ ನಡೆಯುತ್ತಿದೆ. ಇದರ ಹೊರತಾಗಿ ರಾಜ್ಯ ಸರಕಾರ ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಇತರ ಸೌಲಭ್ಯಗಳನ್ನು ಒದಗಿಸುವ ನೀತಿಯನ್ನು ರೂಪಿಸುತ್ತಿದೆ ಎಂದರು.

ಗಮನಾರ್ಹ ವಿಷಯವೆಂದರೆ ಮಹಾ ರಾಷ್ಟ್ರದಲ್ಲಿ ವಿದೇಶಿ ಹೂಡಿಕೆ ಕುರಿತು ಮಾತುಕತೆ ನಡೆಯುತ್ತಿದೆ. ಯುನೈಟೆಡ್‌ ಸ್ಟೇಟ್ಸ್, ಇಂಗ್ಲೆಂಡ್, ಜರ್ಮನಿ, ಜಪಾನ್‌, ತೈವಾನ್‌ ಮತ್ತು ದಕ್ಷಿಣ ಕೊರಿಯಾದ ಪ್ರತಿನಿಧಿಗಳು ರಾಜ್ಯ ಕೈಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅನೇಕ ದೊಡ್ಡ ಯೋಜನೆಗಳು ಪ್ರಾರಂಭವಾಗುವುದರಿಂದ, ಸಣ್ಣ ಪ್ರಮಾಣದ ಕೈಗಾರಿಕೆ ಉದ್ಯಮಿಗಳು ಸೇವೆಗಳನ್ನು ಒದಗಿಸಲು ಸಿದ್ಧರಾಗಿರಬೇಕು ಎಂದು ಕೈಗಾರಿಕಾ ಸಚಿವ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next