ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣದಲ್ಲಿರುವ ಹಳೆಯ ವಿಮಾನ ನಿಲ್ದಾಣ ಕಟ್ಟಡವನ್ನು ಕಾರ್ಗೋ (ಸರಕು) ಟರ್ಮಿನಲ್ ಆಗಿ ನವೀಕರಿಸುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಾಗಣೆ ಸೇವೆಗೆ ಅಗತ್ಯ ಸಿಬ್ಬಂದಿ ನೇಮಕ ಮಾಡಿ ಹೊಸ ಕಟ್ಟಡ ಶೀಘ್ರ ಉದ್ಘಾಟಿಸಬೇಕೆಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಹುಬ್ಬಳ್ಳಿಯಿಂದ ಇನ್ನಿತರೆ ಬೇರೆ ಬೇರೆ ಸ್ಥಳಗಳಿಗೆ ಶೀಘ್ರವೇ ವಿಮಾನ ಸೇವೆ ಆರಂಭಿಸಬೇಕು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಸೇವೆ ಆರಂಭಕ್ಕೆ ನಾಗರಿಕ ವಾಯುಯಾನ ಭದ್ರತಾ ಮಂಡಳಿ (ಬಿಸಿಎಎಸ್)ಯಿಂದ ಅಂತಿಮ ಭದ್ರತೆಯ ಕ್ಲಿಯರೆನ್ಸ್ ದೊರೆತಿದೆ. ಭಾರತೀಯ ವಿಮಾನಯಾನ ಪ್ರಾಧಿಕಾರ ಕಾರ್ಗೋ ಲಾಜಿಸ್ಟಿಕ್ಸ್ ಆ್ಯಂಡ್ ಮೈತ್ರಿ ಸೇವೆಗಳ ಕಂಪನಿಯೊಂದಿಗೆ ಡೊಮೆಸ್ಟಿಕ್ ಏರ್ ಕಾರ್ಗೋ ಟರ್ಮಿನಲ್ ಕಟ್ಟಡದಿಂದ ಸರಕು ಸಾಗಣೆಗಾಗಿ ಬಿಸಿಎಎಸ್‌ನಿಂದ ಅನುಮತಿ ಪಡೆದ ಉತ್ತರ ಕರ್ನಾಟಕದ ಮೊದಲ ವಿಮಾನ ನಿಲ್ದಾಣದ ಟರ್ಮಿನಲ್ ಇದಾಗಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಕೃಷಿ, ಕೈಗಾರಿಕೆ ಸರಕು ಸಾಗಣೆಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.
ನಿಲ್ದಾಣದಲ್ಲಿ ಹೊಸ ಟರ್ಮಿನಲ್ ನಿರ್ಮಾಣವಾದ ಬಳಿಕ ಹಳೆ ಟರ್ಮಿನಲ್ ಕಟ್ಟಡವನ್ನು 60.6 ಲಕ್ಷ ರೂ. ವೆಚ್ಚದಲ್ಲಿ ಸರಕು ಟರ್ಮಿನಲ್ ಆಗಿ ಪರಿವರ್ತಿಸಲಾಗಿದೆ. ಕೋಲ್ಡ್ ಸ್ಟೋರೇಜ್, ಅಪಾಯಕಾರಿ ಸರಕುಗಳು, ಬೆಳೆಬಾಳುವ ವಸ್ತುಗಳನ್ನು ಶೇಖರಣೆ ಮಾಡಲು ಪ್ರತ್ಯೇಕ ವಿಭಾಗ ಮಾಡಲಾಗಿದೆ. ಏರ್ ಇಂಡಿಯಾ, ಇಂಡಿಗೋ, ಸ್ಟಾರ್ ಏರ್‌ಲೈನ್ ಮುಂತಾದ ವಿಮಾನಯಾನ ಸಂಸ್ಥೆಗಳು ವಿಮಾನ ನಿಲ್ದಾಣದಿಂದ ಪ್ರಯಾಣಿಕರ ಜೊತೆ ಸರಕುಗಳನ್ನು ಸಹ ಹೊತ್ತು ಸಾಗಲಿವೆ. ಬೆಂಗಳೂರು, ಚೆನ್ನೈ, ಮುಂಬಯಿ ಮುಂತಾದ ನಗರಗಳಿಗೆ ಸರಕುಗಳನ್ನು ಸಾಗಣೆ ಮಾಡಲಾಗುತ್ತದೆ. ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸಿ ಹೊಸ ಟರ್ಮಿನಲ್ ಬಳಕೆಗೆ ಬಂದ ಬಳಿಕ ಖಾಲಿ ಇತ್ತು. ಈ ಮೊದಲು ಇಲ್ಲಿ ಆಡಳಿತಾತ್ಮಕ ಕಚೇರಿ ತೆರೆಯಲು ಉದ್ದೇಶಿಸಲಾಗಿತ್ತು. ಆದರೆ ಬಳಿಕ ಕೈಬಿಟ್ಟು ಕಾರ್ಗೋ ಟರ್ಮಿನಲ್‌ಗೆ ಬಳಸಲು ನಿಶ್ಚಯಿಸಲಾಯಿತು. ಈ ಕುರಿತು ಪ್ರಯತ್ನಗಳು ನಡೆದಿದ್ದವು. ಇದೀಗ ಕಾಲ ಕೂಡಿ ಬಂದಿದೆ. ಕಾಮಗಾರಿ ಮುಕ್ತಾಯಗೊಂಡಿದ್ದು, ಬಿಸಿಎಎಸ್ ಅನುಮತಿ ದೊರೆತಿದೆ.
ಹೆಚ್ಚಿನ ಸರಕು ಸಾಗಣೆಗೆ ಹೊಸ ಟರ್ಮಿನಲ್ ನಲ್ಲಿ ಕೆಲ ತಾಂತ್ರಿಕ ಅಡೆತಡೆಯಿತ್ತು. ಮುಂದಿನ ದಿನಗಳಲ್ಲಿ ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್ ಕ್ಲಸ್ಟರ್ ಸೇರಿದಂತೆ ಟಾಟಾ ಮೋಟರ್ಸ್, ಮೈಕ್ರೋ ಫಿನಿಶ್ ಟ್ರೇಡಿಂಗ್ ಕಂಪನಿ ಸೇರಿ ಇತರೆ ಕಂಪನಿಗಳು ಬರಲಿವೆ. ಇವುಗಳಿಂದ ಏರ್ ಕಾರ್ಗೋಗೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆಗಳಿದ್ದು, ಕಾರ್ಗೋ ಸೇವೆ ಇನ್ನಷ್ಟು ಹೆಚ್ಚಿಸುವ ಅಗತ್ಯವಿತ್ತು. ಈ ದಿಸೆಯಲ್ಲಿ ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಮಾಡಿದ್ದಾಗಿ ಜೋಶಿ ತಿಳಿಸಿದ್ದಾರೆ.