ಚಿಕ್ಕಮಗಳೂರು: ನಗರದ ಇಂದಾವರದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ರೈತರ ಸಹಭಾಗಿತ್ವದಲ್ಲಿ ಸುಸಜ್ಜಿತವಾದ ಬಡಾವಣೆ ನಿರ್ಮಿಸಲು ಉದ್ದೇಶಿಸಿದ್ದು ಇದರ ಜೊತೆಗೆ ಆಟೋಮೊಬೈಲ್ ಪಾರ್ಕ್ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಶಾಸಕ ಸಿ.ಟಿ. ರವಿ ತಿಳಿಸಿದರು.
ಸೋಮವಾರ ನಗರದ ತೊಗರಿಹಂಕಲ್ ಸರ್ಕಲ್ ಮತ್ತು ಮೌಂಟೆನ್ ವ್ಯೂ ಶಾಲೆ ಎದುರು ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನಗರದ ಅಭಿವೃದ್ಧಿಗೆ 10 ಕೋಟಿ ರೂ. ವಿಶೇಷ ಅನುದಾನ ತರಲಾಗಿದೆ. 50 ಲಕ್ಷ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ನಗರದಲ್ಲಿ ಅಮೃತ್ ಹಾಗೂ ಯುಜಿಡಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವ ಸಂಬಂಧ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಲಾಗುವುದು. ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಒತ್ತಡ ತರಲಾಗುವುದು ಎಂದರು.
ನಗರಸಭೆ ಸದಸ್ಯೆ ರೂಪಾ ಕುಮಾರ್ ಮಾತನಾಡಿ, ತೊಗರಿ ಹಂಕಲ್ ಸರ್ಕಲ್ ನಿಂದ ಗುರುನಾಥ ಸರ್ಕಲ್‌ವರೆಗೆ 20 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣಕ್ಕೆ ಶಾಸಕರು ಚಾಲನೆ ನೀಡಿದ್ದು, ಗುಣಮಟ್ಟದ ಕಾಮಗಾರಿ ನಡೆಸುವುದಾಗಿ ತಿಳಿಸಿದರು.
ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಆನಂದ್, ನಗರಸಭೆ ಸದಸ್ಯರಾದ ಮಂಜುಳಾ, ಲಕ್ಷ್ಮಣ್, ಮಧುಕುಮಾರ್ ರಾಜ್‌ಅರಸ್, ವಿಫುಲ್ ಕುಮಾರ್ ಜೈನ್ ಇತರರು ಇದ್ದರು.