Advertisement

ಹೆಚ್ಚುವರಿ ಹಾಸ್ಟೆಲ್‌ ಸೇವೆ ಆರಂಭ

12:56 PM Mar 30, 2022 | Team Udayavani |

ಉಡುಪಿ: ಮೆಟ್ರಿಕ್‌ ಅನಂತರದ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಎರಡು ತಾತ್ಕಾಲಿಕ ಹಾಸ್ಟೆಲ್‌ ವ್ಯವಸ್ಥೆ ಮಾಡಿಕೊಳ್ಳಲು ಸರಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಮಣಿಪಾಲದಲ್ಲಿರುವ ಸರಕಾರಿ ಕಟ್ಟಡದಲ್ಲಿ ಒಂದು ಹಾಸ್ಟೆಲ್‌ ಸೇವೆ ಆರಂಭಗೊಂಡಿದೆ.

Advertisement

ಪ್ರಸಕ್ತ ಸಾಲಿನ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಸಹಿತವಾಗಿ ಮೆಟ್ರಿಕ್‌ ಅನಂತರ ಎಲ್ಲ ಕೋರ್ಸ್‌ ಗಳು ಆರಂಭವಾಗಿ ಸೆಮಿಸ್ಟರ್‌ ಪರೀಕ್ಷೆ ಸಮೀಪಿಸುತ್ತಿದೆ. ಹಾಸ್ಟೆಲ್‌ಗೆ ಅರ್ಜಿ ಸಲ್ಲಿಸಿಯೂ ಹಾಸ್ಟೆಲ್‌ ಲಭ್ಯವಾಗದ ಅರ್ಹ ಫ‌ಲಾನುಭವಿಗಳಿಗೆ ಮಣಿಪಾಲದ ಈ ಹಾಸ್ಟೆಲ್‌ ನಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವ್ಯವಸ್ಥೆ ಮಾಡಲಾಗುತ್ತಿದೆ.

ಅರ್ಜಿ ಸಲ್ಲಿಸಿದ ಒಟ್ಟಾರೆ ವಿದ್ಯಾರ್ಥಿನಿಯರಿಗೆ ಸೀಟ್‌ಲಭ್ಯವಾಗದ ಸುಮಾರು 125 ವಿದ್ಯಾರ್ಥಿನಿಯರಲ್ಲಿ ತೆಂಕನಿಡಿಯೂರಿನಲ್ಲಿರುವ ಸರಕಾರಿ ಕಟ್ಟಡದಲ್ಲಿ 50, ಮಣಿಪಾಲದಲ್ಲಿರುವ ಸರಕಾರಿ ಪಾಲಿಟೆಕ್ನಿಕ್‌ ಕಟ್ಟಡದಲ್ಲಿ 75 ವಿದ್ಯಾರ್ಥಿನಿಯರಿಗೆ ತಾತ್ಕಾಲಿಕವಾಗಿ ಹಾಸ್ಟೆಲ್‌ ವ್ಯವಸ್ಥೆ ಮಾಡಲು ಸರಕಾರ ಆದೇಶ ಹೊರಡಿಸಿತ್ತು. ಇದೀಗ 125 ವಿದ್ಯಾರ್ಥಿನಿಯರಿಗೂ ಮಣಿಪಾಲದಲ್ಲಿಯೇ ವ್ಯವಸ್ಥೆ ಮಾಡಲು ಇಲಾಖೆ ಕ್ರಮ ತೆಗೆದುಕೊಂಡಿದೆ.

75 ವಿದ್ಯಾರ್ಥಿನಿಯರಲ್ಲಿ ಈಗಾಗಲೇ 60 ಮಂದಿ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಾರೆ. ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರ ವಾಸಕ್ಕೆ ಅಗತ್ಯವಿರುವ ಸೌಲಭ್ಯಗಳಾದ ಸುಸಜ್ಜಿತ ಕೊಠಡಿ, ಬೆಡ್‌, ಹೊದಿಕೆ, ಮಂಚ, ಊಟ, ತಿಂಡಿ ಜತೆಗೆ ನಿತ್ಯೋಪಯೋಗಿ ವಸ್ತುಗಳ ಕಿಟ್‌ ಕೂಡ ನೀಡಲಾಗುತ್ತದೆ.

ಉಡುಪಿ ಜಿಲ್ಲಾ ಕೇಂದ್ರದಲ್ಲಿ ಹಲವು ಕಾಲೇಜುಗಳಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಸರಕಾರಿ ಹಾಸ್ಟೆಲ್‌ ಸಿಗಬಹುದು ಎಂಬ ಸದುದ್ದೇಶದಿಂದ ಇಲ್ಲಿ ದಾಖಲಾತಿ ಪಡೆದಿದ್ದಾರೆ. ಈ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ ಹಾಸ್ಟೆಲ್‌ ವ್ಯವಸ್ಥೆ ಮಾಡುವ ಬಗ್ಗೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಭರವಸೆ ನೀಡಿದ್ದರು. ಅದರಂತೆ ಸರಕಾರ ಆದೇಶಿಸಿದೆ. ಈಗ ಹೆಚ್ಚುವರಿ ಹಾಸ್ಟೆಲ್‌ ಕಾರ್ಯಾರಂಭವೂ ಮಾಡುತ್ತಿದೆ.

Advertisement

ಒಂದೇ ಕಡೆ ಸೌಲಭ್ಯ

ಸರಕಾರದ ಆದೇಶದಂತೆ ಎರಡು ಕಡೆಗಳಲ್ಲಿ ತಾತ್ಕಾಲಿಕ ಹಾಸ್ಟೆಲ್‌ ವ್ಯವಸ್ಥೆ ಮಾಡಿ, ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಯೋಜನೆ ಮಾಡಿಕೊಂಡಿದ್ದೆವು. ಈಗ ಮಣಿಪಾಲದ ಒಂದೇ ಹಾಸ್ಟೆಲ್‌ನಲ್ಲಿ 125 ವಿದ್ಯಾರ್ಥಿಗಳಿಗೆ ಬೇಕಾದ ವ್ಯವಸ್ಥೆ ಮಾಡಬಹುದಾಗಿದೆ. ಹೀಗಾಗಿ ಇಲ್ಲಿ ಪೂರ್ಣ ಪ್ರಮಾಣದ ಸೌಲಭ್ಯ ಕಲ್ಪಿಸಿದ ಅನಂತರ ತೆಂಕನಿಡಿಯೂರಿನಲ್ಲಿ ಹಾಸ್ಟೆಲ್‌ ಆರಂಭಿಸುವ ಬಗ್ಗೆ ಯೋಚಿಸಲಿದ್ದೇವೆ. ಈಗ 60 ವಿದ್ಯಾರ್ಥಿನಿಯರು ವಾಸವಾಗಿದ್ದು, ಉಳಿದವರಿಗೂ ಕರೆ ಮಾಡಿ, ದಾಖಲಾಗಲು ತಿಳಿಸುತ್ತಿದ್ದೇವೆ ಎಂದು ಇಲಾಖೆಯ ಜಿಲ್ಲಾ ಅಧಿಕಾರಿ ದೇವಿಂದ್ರ ಬಿರಾದಾರ ತಿಳಿಸಿದರು.

ಮೆಟ್ರಿಕ್‌ ಪೂರ್ವ ಖಾಲಿ

ಜಿಲ್ಲೆಯ ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ಗ‌ಳಲ್ಲಿ ಬಹುತೇಕ ಸೀಟು ಖಾಲಿಯಿದೆ. ಜಿಲ್ಲೆಯ ವಿದ್ಯಾರ್ಥಿಗಳಿಗಿಂತ ಹೊರ ಜಿಲ್ಲೆಯ ವಿದ್ಯಾರ್ಥಿಗಳು ಈ ಹಾಸ್ಟೆಲ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿರುವುದರಿಂದ ಕೊರೊನಾದಿಂದ ಊರಿಗೆ ಹೋದವರಲ್ಲಿ ಅನೇಕರು ವಾಪಸ್‌ ಬಂದಿಲ್ಲ. ಅಲ್ಲದೆ, ಈ ವರ್ಷ ದಾಖಲಾತಿ ಪ್ರಕ್ರಿಯೆಯಲ್ಲೂ ಲಭ್ಯವಿದ್ದ ಸೀಟ್‌ಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ. ಹೊರ ಜಿಲ್ಲೆಗಳ ವಿದ್ಯಾರ್ಥಿಗಳು ಅಲ್ಲಿಯೇ ಶಾಲೆಗೆ ಸೇರಿದ್ದರೆ, ಇಲ್ಲಿನ ಸೀಟ್‌ಗಳು ವರ್ಷ ಪೂರ್ತಿ ಹಾಗೇ ಉಳಿದು ಕೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next