ಕಾರವಾರ: ಸರ್ವಋತು ಬಂದರು ಎಂದೇ ಹೆಸರಾದ ಕಾರವಾರ ವಾಣಿಜ್ಯ ಬಂದರಿನ ಎರಡನೇ ಹಂತದ ನಿರ್ಮಾಣಕ್ಕೆ ಪ್ರಕ್ರಿಯೆ ಪ್ರಾರಂಭವಾಗಿವೆ. ಅವಶ್ಯವಾದ ಅಲೆ ತಡೆಗೋಡೆ (ಬ್ರೇಕ್ ವಾಟರ್) ನಿರ್ಮಾಣಕ್ಕೆ ಈಗಾಗಲೇ ರಾಜ್ಯ ಪರಿಸರ ಹಾನಿ ಅಂದಾಜೀಕರಣ ತಜ್ಞರ ಸಮಿತಿ ಪ್ರಾಥಮಿಕ ಹಂತದ ಒಪ್ಪಿಗೆ ನೀಡಿದೆ.
ಇಲ್ಲಿನ ವಾಣಿಜ್ಯ ಬಂದರಿನಲ್ಲಿ ಸರಕು ಸಾಗಾಣಿಕೆ ಹಡಗುಗಳ ಸಂಚಾರ ಹೆಚ್ಚುತ್ತಿದ್ದು ಆಮದು ಮತ್ತು ರಫ್ತು ಹೆಚ್ಚಿಸಲು ಸಾಕಷ್ಟು ಅವಕಾಶವಿದೆ. ಮುಂಬಯಿ, ಗೋವಾ ಮತ್ತು ನವಮಂಗಳೂರು ವಾಣಿಜ್ಯ ಬಂದರುಗಳ ವಹಿವಾಟು ವೇಗ ಹಾಗೂ ಇಲ್ಲಿನ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಕಾರವಾರ ಬಂದರು 5 ದಶಕಗಳಿಂದ ನನೆಗುದಿಗೆ ಬಿದ್ದಿದೆ. ಈಗ ಸರ್ಕಾರವೇ ಬಂದರು ವಿಸ್ತರಣೆಗೆ ಮುಂದಾಗಿದೆ. ಸಂಬಂಧಿ ಸಿದ ಅಧ್ಯಯನಗಳು ಮುಗಿದಿವೆ. ಬಜೆಟ್‌ನಲ್ಲಿ ಅನುದಾನವೂ ಸಿಕ್ಕಿದೆ. ಅನುಷ್ಠಾನ ಮಾತ್ರ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಬಂದರು ವಿಸ್ತರಣೆಗೆ ಒಳನಾಡು ಜಲಸಾರಿಗೆ ಮತ್ತು ಬಂದರು ಇಲಾಖೆಯು 1170 ಕೋಟಿ ರೂ. ಯೋಜನೆಯ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿತ್ತು.
ಆ ನಂತರ 2018ರ ಪ್ರಾರಂಭದಲ್ಲೇ ಫೆ.9 ರಂದು ಕಾರವಾರ ಬಂದರಿನಲ್ಲಿ ಸಾರ್ವಜನಿಕ ಅಹವಾಲು ಸಭೆ ಸಹ ನಡೆದುಹೋಗಿದೆ. ಆಗ ಕೆಲವರು ಬಂದರು ವಿಸ್ತರಣೆ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಕೆಲವರು ಪರಿಸರದ ಕಾರಣ ನೀಡಿದರೆ, ಕೆಲವರು ಉದ್ಯೋಗದ ಬೇಡಿಕೆ ಇಟ್ಟಿದ್ದರು. ಬೈತಖೋಲ ನಿವಾಸಿಗಳು ಈಗಿನ ಮಾರುಕಟ್ಟೆ ದರಕ್ಕೆ ಅನ್ವಯಿಸಿ ಹೊಸದಾಗಿ ಪರಿಹಾರ ನೀಡಬೇಕೆಂಬ ಬೇಡಿಕೆ ಸಹ ಸಲ್ಲಿಸಿದ್ದರು. ಆ ಬಳಿಕ ನಾಗಣ್ಣ ಅವರ ಅಧ್ಯಕ್ಷತೆಯ 13 ಸದಸ್ಯರ ಸಮಿತಿ ಡಿ.3 ರಂದು ಬೆಂಗಳೂರಿನಲ್ಲಿ ಸಭೆ ನಡೆಸಿದೆ. ಪರಿಸರ ಹಾನಿ ವರದಿ ಹಾಗೂ ಸಾರ್ವಜನಿಕ ಅಹವಾಲು ಸಭೆಯ ಅಂಶಗಳನ್ನು ಚರ್ಚಿಸಲಾಗಿದೆ.
ಬಂದರು ವಿಸ್ತರಣೆಯಿಂದ ಪರಿಸರದ ಮೇಲಾಗುವ ಪರಿಣಾಮದ ಬಗ್ಗೆ ಚೆನ್ನೈನ ಖಾಸಗಿ ಕಂಪನಿ ವರದಿ ಸಿದ್ಧಪಡಿಸಿದೆ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಯೋಜನೆಗೆ ಪ್ರಾಥಮಿಕ ಒಪ್ಪಿಗೆ ಸೂಚಿಸಲಾಗಿದೆ. ಆದರೆ, ಕೆಲವು ಸ್ಪಷ್ಟನೆಗಳನ್ನು ಸಮಿತಿ ಕೇಳಿದ್ದು, ಮಾಹಿತಿ ಪೂರೈಸುವಂತೆ ಬಂದರು ಇಲಾಖೆಗೆ ಕೇಳಲಾಗಿದೆ. ನಂತರ ಪರಿಸರ ಹಾನಿ ಅಂದಾಜೀಕರಣ ಪ್ರಾಧಿಕಾರಕ್ಕೆ ಕಡತಗಳು ರವಾನೆಯಾಗಲಿವೆ ಎಂದು ಬಂದರು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬಂದರು ವಿಸ್ತರಣೆ ನೀಲನಕ್ಷೆ: ಬೈತಖೋಲ್ ಬಂದರಿನ ವಿಸ್ತರಣೆಯಿಂದ ಏಕಕಾಲದಲ್ಲಿ ಐದು ಹಡಗುಗಳು ನಿಲ್ಲಲು ವ್ಯವಸ್ಥೆ ಮಾಡುವುದು, ಹೊಸದಾಗಿ ಗೋದಾಮುಗಳನ್ನು ನಿರ್ಮಿಸುವುದು ಹಾಗೂ 1,160 ಮೀಟರ್ ಉದ್ದದ ಹೊಸ ಅಲೆ ತಡೆಗೋಡೆ ನಿರ್ಮಾಣ ಕಾಮಗಾರಿಗಳು ಯೋಜನೆಯಲ್ಲಿ ಸೇರಿವೆ. 125 ಕೋಟಿ ರೂ. ವೆಚ್ಚದ 880 ಮೀಟರ್ ಜಟ್ಟಿ ವಿಸ್ತರಣೆಗೆ ಟೆಂಡರ್ ಮುಗಿದಿದೆ. ಮುಂಬೈನ ಡಿಟಿಇ ಕಂಪನಿ ಟೆಂಡರ್ ಪಡೆದುಕೊಂಡಿದೆ.
ವಾಕ್‌ಪಾಥ್: ಯೋಜನೆ ಪ್ರಕಾರ ಅಲೆ ತಡೆಗೋಡೆ ಇಲ್ಲಿನ ಟ್ಯಾಗೋರ್ ಬೀಚ್‌ನ ನಗರಸಭೆ ಉದ್ಯಾನದ ತುದಿಯಿಂದ ಪ್ರಾರಂಭವಾಗಲಿದೆ. ಉದ್ಯಾನದ ಪಕ್ಕದಿಂದ ಪೂರ್ವ ಭಾಗಕ್ಕೆ ಅಲೆ ತಡೆಗೋಡೆ ನಿರ್ಮಾಣವಾಗಲಿದೆ. ಅಲೆತಡೆಗೋಡೆ ಮೇಲೆ ವಾಕ್ ಮಾಡುವಂತೆ ಯೋಜನೆ ರೂಪಿಸಲಾಗಿದ್ದು, ಸಮುದ್ರದಲ್ಲಿ ವಾಕ್ ಪಾತ್ ಅಲೆ ತಡೆಯಗೋಡೆಯಲ್ಲೇ ಒಳಗೊಂಡಿದೆ. ಇದು ಪ್ರವಾಸಿಗರ ಮತ್ತೊಂದು ಆಕರ್ಷಣೆಯಾಗಲಿದೆ.
ಯೋಜನೆಗೆ ರಾಜ್ಯಮಟ್ಟದ ಪರಿಸರ ಹಾನಿ ಅಂದಾಜೀಕರಣ ಪ್ರಾಧಿಕಾರ ಹಾಗೂ ಕರಾವಳಿ ನಿಯಂತ್ರಣ ವಲಯದ ಜಿಲ್ಲಾ ಮಟ್ಟದ ಸಮಿತಿಯ ಅಂತಿಮ ಅನುಮೋದನೆ ಸಿಗಬೇಕಿದೆ. ನಂತರ ವಿಸ್ತರಣೆ ಪ್ರಕ್ರಿಯೆಗಳು ಆರಂಭವಾಗಲಿವೆ.
ಕ್ಯಾಪ್ಟನ್ ಸಿ.ಸ್ವಾಮಿ, ನಿರ್ದೇಶಕರು.
ಕಾರವಾರ ವಾಣಿಜ್ಯ ಬಂದರು.
ನಾಗರಾಜ ಹರಪನಹಳ್ಳಿ