ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾಯ್ದಿರಿಸಿದ್ದ ಶಾಸಕ ಸತೀಶ್ ಸೈಲ್ ಸೇರಿದಂತೆ ಇತರರ ಶಿಕ್ಷೆಯ ಪ್ರಮಾಣದ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶನಿವಾರ (ಅ.26) ಪ್ರಕಟಿಸಿದೆ.
ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಅವರಿಗೆ ಮೊದಲ ಕೇಸ್ ಅಂದರೆ ಒಳಸಂಚು ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆ, ವಂಚನೆ ಪ್ರಕರಣದಲ್ಲಿ ಏಳು ವರ್ಷ ಶಿಕ್ಷೆ ಪ್ರಕಟವಾಗಿದೆ. ಅಲ್ಲದೆ ಕಳ್ಳತನ ಪ್ರಕರಣದಲ್ಲಿ ಮೂರು ವರ್ಷ ಜೈಲುಶಿಕ್ಷೆ ನೀಡಿ ಕೋರ್ಟ್ ಆದೇಶಿಸಿದೆ.
ಒಟ್ಟು ಆರು ಪ್ರಕರಣಗಳಲ್ಲಿ ಈವರೆಗೆ ವಿಧಿಸಿದ ದಂಡದ ಮೊತ್ತ 44 ಕೋಟಿ ರೂಪಾಯಿ ದಾಟಿದೆ. ಈಗ ಕಳೆದಿರುವ ಶಿಕ್ಷೆ ಪ್ರಮಾಣ ಹೊರತುಪಡಿಸಿ ಉಳಿದ ಶಿಕ್ಷೆ ಅನುಭವಿಸಬೇಕಿದೆ. ಸತೀಶ್ ಸೈಲ್ ಜತೆ ಮಹೇಶ್ ಬಿಳಿಯೆ, ಲಕ್ಷ್ಮೀ ವೆಂಕಟೇಶ್ವರ ಮಿನರಲ್ಸ್ ಖಾರದಪುಡಿ ಮಹೇಶ್, ಮಲ್ಲಿಕಾರ್ಜುನ ಶಿಪ್ಪಿಂಗ್‌ಗೂ ಜೈಲು ಶಿಕ್ಷೆ ವಿಧಿಸಲಾಗಿದೆ.
ಸತೀಶ್ ಸೈಲ್ ಅವರಿಗೆ ಎರಡು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ಪ್ರಕಟವಾದ ಕಾರಣ ಅವರ ಶಾಸಕ ಸ್ಥಾನ ರದ್ದಾಗುವ ಸಾಧ್ಯತೆಯಿದೆ.
ಕಾರವಾರದ ಶಾಸಕ ಸತೀಶ್ ಸೈಲ್ ಮತ್ತು ಅಂದಿನ ಬಂದರು ಅಧಿಕಾರಿ ಮಹೇಶ್ ಬಿಳಿಯ ಸೇರಿ 7 ಮಂದಿ ದೋಷಿಗಳು ಎಂದು ನ್ಯಾ| ಸಂತೋಷ್ ಗಜಾನನ ಭಟ್ ಗುರುವಾರ ತೀರ್ಪು ಪ್ರಕಟಿಸಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಪ್ರಕಟಿಸುವುದಾಗಿ ನ್ಯಾಯಾಲಯವು ಹೇಳಿತ್ತು. ಶುಕ್ರವಾರ ಮತ್ತೆ ವಾದ-ಪ್ರತಿವಾದ ನಡೆದ ಹಿನ್ನೆಲೆಯಲ್ಲಿ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಶನಿವಾರಕ್ಕೆ ಕಾಯ್ದಿರಿಸಿತ್ತು.
ಸಿಬಿಐ ಪರ ಶುಕ್ರವಾರ ಹಿರಿಯ ಸರಕಾರಿ ಅಭಿಯೋಜಕಿ ಕೆ.ಎಸ್. ಹೇಮಾ ವಾದ ಮಂಡಿಸಿ, ಆರೋಪಿಗಳು 3,100 ಮೆಟ್ರಿಕ್ ಟನ್ ಅದಿರು ಕಳ್ಳ ಸಾಗಣೆಯಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಸರಕಾರಕ್ಕೆ ಸುಮಾರು 250 ಕೋಟಿ ರೂ.ನಷ್ಟವಾಗಿದೆ. ಪ್ರಕರಣದಲ್ಲಿ ಆರೋಪಿಗಳು ಆರ್ಥಿಕ ಅಪರಾಧ ಎಸಗಿದ್ದಾರೆ. ಹೀಗಾಗಿ ಗರಿಷ್ಠ ಜೈಲು ಶಿಕ್ಷೆಯ ಜತೆಗೆ ದಂಡ ವಿಧಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು.
ಬೇಲೆಕೇರಿ ಅದಿರು ನಾಪತ್ತೆ ಕೇಸ್‌ನಲ್ಲಿ ಶಾಸಕ ಸತೀಶ್ ಸೈಲ್ ಬೇಲೆಕೇರಿ ಬಂದರಿನ ಉಪ ಸಂರಕ್ಷಣಾಧಿಕಾರಿ (ಡೆಪ್ಯೂಟಿ ಪೋರ್ಟ್ ಕನ್ಸರ್‌ವೇಟರ್) ಮಹೇಶ್ ಬಿಳಿಯ, ಲಾಲ್‌ವುಹಲ್ ಕಂಪೆನಿಯ ಮಾಲಕ ಪ್ರೇಮ್ ಚಂದ್ ಗರ್ಗ್, ಶ್ರೀಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್ ಮಾಲಕ ಖಾರದಪುಡಿ ಮಹೇಶ್, ಸ್ವಸ್ತಿಕ್ ಕಂಪೆನಿ ಮಾಲಕ ಕೆ.ವಿ. ನಾಗರಾಜ್, ಗೋವಿಂದರಾಜು, ಆಶಾಪುರ ಕಂಪೆನಿ ಮಾಲಕ ಚೇತನ್ ಬಂಧನಕ್ಕೊಳಗಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿದ್ದವು. ಇದೀಗ ಎಲ್ಲ ಪ್ರಕರಣಗಳ ವಿಚಾರಣೆ ನಡೆಸಿರುವ ಕೋರ್ಟ್, ಶಾಸಕ ಸತೀಶ್ ಸೈಲ್ ಸೇರಿ ಎಲ್ಲ ಆರೋಪಿಗಳು ದೋಷಿ ಎಂದು ಹೇಳಿದೆ. ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಐಎಲ್‌ಸಿ ಕಂಪೆನಿಯ ಮಾಲಕ ಸೋಮಶೇಖರ್ ಈಗಾಗಲೇ ನಿಧನ ಹೊಂದಿದ್ದಾರೆ.