Advertisement

ಮನೆ ನಿರ್ಮಾಣ ಶೀಘ್ರ ಪ್ರಾರಂಭಿಸಿ

11:24 PM Dec 15, 2019 | Team Udayavani |

ಬೆಂಗಳೂರು: ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿದವರು ಎದೆಗುಂದುವ ಅಗತ್ಯವಿಲ್ಲ. ಅವರ ಬದುಕನ್ನು ಪುನಃ ಕಟ್ಟಿಕೊಡಲು ಸರ್ಕಾರ ಅವರೊಂದಿಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಭಯ ನೀಡಿದ್ದು, ಸಂತ್ರಸ್ತರು ತ್ವರಿತವಾಗಿ ಮನೆ ನಿರ್ಮಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

Advertisement

ರಾಜ್ಯದಲ್ಲಿ ಮುಂಗಾರಿನಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದ ಲಕ್ಷಾಂತರ ಕುಟುಂಬಗಳು ಮನೆ ಕಳೆದುಕೊಂಡಿವೆ. ಲಕ್ಷಾಂತರ ಹೆಕ್ಟೇರ್‌ ಪ್ರದೇಶದ ಬೆಳೆ ನಾಶವಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಯೂ ನಷ್ಟವಾಗಿದೆ. ಈ ವಿಕೋಪದ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ಸರ್ಕಾರ ಜನರ ನೆರವಿಗೆ ಧಾವಿಸಿ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಯಡಿಯೂರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವಾಹದಿಂದ ತೀವ್ರ ಹಾನಿಗೀಡಾದ “ಎ’ ಮತ್ತು “ಬಿ’ ವರ್ಗದ ಮನೆಗಳ ಪುನರ್‌ ನಿರ್ಮಾಣಕ್ಕೆ 5 ಲಕ್ಷ ರೂ.ನೆರವು ಘೋಷಿಸಲಾಗಿದೆ. ಈಗಾಗಲೇ ಮುಂಗಡವಾಗಿ 1 ಲಕ್ಷ ರೂ.ಗಳನ್ನು ಸಂತ್ರಸ್ತರ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ. ಉಳಿದ ನಾಲ್ಕು ಲಕ್ಷ ರೂ.ಗಳನ್ನು ನಿರ್ಮಾಣವಾಗುತ್ತಿರುವ ಮನೆಯ ಹಂತವಾರು, ಜಿ.ಪಿ.ಎಸ್‌.ಛಾಯಾಚಿತ್ರಗಳ ಆಧಾರದ ಮೇಲೆ ಬಿಡುಗಡೆ ಮಾಡಲಾಗುವುದು. ಆದ್ದರಿಂದ ಮನೆ ನಿರ್ಮಾಣ ಕಾರ್ಯವನ್ನು ಶೀಘ್ರವಾಗಿ ಪ್ರಾರಂಭಿಸಿ, ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿಶೇಷ ಪೂಜೆ-ಹೋಮ, ಹವನ
ಬೆಂಗಳೂರು: ಬಿ.ಎಸ್‌.ಯಡಿಯೂರಪ್ಪ ಅವರ ನಿವಾಸದಲ್ಲಿ ಭಾನುವಾರ ವಿಶೇಷ ಹೋಮ, ಪೂಜೆ-ಪುನಸ್ಕಾರ ನೆರವೇರಿಸಲಾಯಿತು. ಡಾಲರ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿ ಭಾನುವಾರ ಬೆಳಗ್ಗೆ ಸುದರ್ಶನ ಹೋಮ ಹಾಗೂ ನರಸಿಂಹ ಹೋಮಗಳನ್ನು ನೆರವೇರಿಸಲಾಯಿತು. ಯಡಿಯೂರಪ್ಪ ಅವರೊಂದಿಗೆ ಪುತ್ರ ವಿಜಯೇಂದ್ರ ಕುಟುಂಬ ಸಮೇತರಾಗಿ ಹೋಮ, ವಿಶೇಷ ಪೂಜೆಯಲ್ಲಿ ಪಾಲ್ಗೊಂ ಡಿದ್ದರು ಎಂದು ಮೂಲಗಳು ತಿಳಿಸಿವೆ.

ಸರ್ಕಾರ ರಚನೆಯಾದ ಸಂದರ್ಭದಲ್ಲೇ ಹೋಮ, ಪೂಜೆ ನಡೆಸಲು ಚಿಂತಿಸಲಾಗಿತ್ತು. ಉಪಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಪಡೆದು, ಸರ್ಕಾರ ಸುಭದ್ರವಾಗಿರುವ ಹಿನ್ನೆಲೆಯಲ್ಲಿ ಪೂರ್ವ ಸಂಕಲ್ಪದಂತೆ ಹೋಮ, ವಿಶೇಷ ಪೂಜೆ ನಡೆಸಲಾಗಿದೆ. ಜೊತೆಗೆ, ಶತ್ರು ಸಂಹಾರಕ್ಕಾಗಿ , ಮುಂಬರುವ ಸಂಪುಟ ವಿಸ್ತರಣೆ ಸುಗಮವಾಗಿ ನಡೆಯಲು, ಸರ್ಕಾರ ಮೂರೂವರೆ ವರ್ಷ ಪೂರೈಸಲು ಪ್ರಾರ್ಥಿಸಿ ಹೋಮ ನೆರವೇರಿಸಲಾಗಿದೆ ಎಂಬ ಮಾತು ಕೇಳಿ ಬಂದಿದೆ.

Advertisement

ರಾಹುಲ್‌ ಯಾವತ್ತೂ ಸಾವರ್ಕರ್‌ ಆಗಲ್ಲ: ಜೋಶಿ
ಹುಬ್ಬಳ್ಳಿ: ರಾಹುಲ್‌ ಗಾಂಧಿ ನಾನು ಸಾವರ್ಕರ್‌ ಅಲ್ಲ ಎಂಬ ಹೇಳಿಕೆ ನೀಡಿದ್ದು, ಅವರು ವೀರ ಸಾವರ್ಕರ್‌ ಆಗಲು ಸಾಧ್ಯವಿಲ್ಲ, ಬದಲಾಗಿ ಉದ್ಧವ ಠಾಕ್ರೆ ಆಗಬಹುದು. ಕಾಂಗ್ರೆಸ್‌ನ ಎಲ್ಲರೂ ಮತಿಭ್ರಮಣೆಯಾದಂತೆ ವರ್ತಿಸುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿ, ರಾಹುಲ್‌, ಸೋನಿಯಾ, ಪ್ರಿಯಾಂಕಾ ಗಾಂಧಿ, ರಾಬರ್ಟ್‌ ವಾದ್ರಾ ಇವರೆಲ್ಲ ನಕಲಿ ಗಾಂಧಿ ಗಳು. ಬೇರೆಯವರ ಬಗ್ಗೆ ಯಾವಾಗಲೂ ಇದೇ ರೀತಿ ಮಾತನಾಡುತ್ತಾರೆ. ಸಂಸತ್‌ ಚಳಿಗಾಲದ ಅಧಿವೇಶನದಲ್ಲಿ ಕೆಲವು ಐತಿಹಾಸಿಕ ಮಸೂದೆಗಳನ್ನು ಅಂಗೀಕರಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಯಾರ ಪೌರತ್ವವನ್ನೂ ಕಸಿದುಕೊಳ್ಳುವ ವಿಚಾರವಿಲ್ಲ. ದೇಶದ ಯಾವುದೇ ಮುಸ್ಲಿಮರನ್ನು ಹೊರಹಾಕುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯ ನಾಯಕರ ತೀರ್ಮಾನವೇ ಅಂತಿಮ
ತಿ.ನರಸೀಪುರ: ಸಚಿವ ಸಂಪುಟ ವಿಸ್ತರಣೆ ಸಂಬಂಧ ಬಿಜೆಪಿ ಹೈಕಮಾಂಡ್‌ನಿಂದ ಯಾವುದೇ ಸೂಚನೆ ಬಂದಿಲ್ಲ. ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಶಾಸಕರು ಹಾಗೂ ಸೋತವರಿಗೂ ಸಚಿವ ಸ್ಥಾನ ನೀಡುವ ಬಗ್ಗೆ ರಾಜ್ಯ ನಾಯಕರೇ ನಿರ್ಧರಿಸಲಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯ ದಲ್ಲಿ ಭಾನುವಾರ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ದರು. ಸಚಿವ ಸಂಪುಟ ವಿಸ್ತರಣೆ ಸಂಬಂಧ ರಾಜ್ಯ ಬಿಜೆಪಿ ನಾಯಕರೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಸಚಿವ ಸಂಪುಟ ಸಂಬಂಧ ಹೈಕಮಾಂಡ್‌ ಯಾವೊಂದು ಸಲಹೆ, ಸೂಚನೆ ನೀಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿ ಯವರು ಈ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next