Advertisement

ಅಮ್ಮಿನಬಾವಿ ಗ್ರಾಮದೇವಿ ಜಾತ್ರೆ ಶುರು

04:31 PM Jun 29, 2018 | Team Udayavani |

ಧಾರವಾಡ: ತಾಲೂಕಿನ ಅಮ್ಮಿನಬಾವಿ ಗ್ರಾಮದ ಗ್ರಾಮದೇವತೆಯರ 11 ದಿನಗಳ ಜಾತ್ರಾ ಮಹೋತ್ಸವ ಗುರುವಾರ ಪ್ರಾತಃಕಾಲ ಗ್ರಾಮದ ಪಂಚಗೃಹ ಹಿರೇಮಠದ ಆವರಣದಿಂದ ವಿದ್ಯುಕ್ತವಾಗಿ ಚಾಲನೆ ದೊರೆಯಿತು.

Advertisement

ಗ್ರಾಮದೇವತೆಯರಾದ ದ್ಯಾಮವ್ವ ಹಾಗೂ ದುರ್ಗಾಮಾತೆಯರ ನೂತನ ಕಾಷ್ಠ ಶಿಲ್ಪಗಳಿಗೆ (ಕಟ್ಟಿಗೆಯ ಮೂರ್ತಿಗಳಿಗೆ) ಮೂರ್ತಿಕಾರರು ನೇತ್ರೋನ್ಮಿಲನ (ದೃಷ್ಟಿ ಬರೆಯುವ) ಕಾರ್ಯಕ್ರಮ ನೆರವೇರಿಸುತ್ತಿದ್ದಂತೆ ಅಮ್ಮಿನಬಾವಿ ಪಂಚಗೃಹ ಹಿರೇಮಠದಿಂದ ಉಭಯ ಗ್ರಾಮದೇವಿಯರಿಗೆ ನೂತನಾಂಬರ ಧಾರಣೆ ಮಾಡಲಾಯಿತು. ಶ್ರೀಮಠದ ಹಿರಿಯಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಹಾಗೂ ಕಿರಿಯಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಸಾಂಪ್ರದಾಯಕ ಪ್ರಥಮ ಉಡಿ ತುಂಬಿದರು.

ಮಾಂಗಲ್ಯ ಧಾರಣೆ: ಪಂಚಗೃಹ ಹಿರೇಮಠದಿಂದ ಗ್ರಾಮದೇವಿ ದೇವಾಲಯದ ಪ್ರಾಂಗಣಕ್ಕೆ ಉತ್ಸವದ ಮೂಲಕ ಉಭಯ ಗ್ರಾಮದೇವಿಯರ ಮೂರ್ತಿಗಳನ್ನು ತರಲಾಯಿತು. ಜಾತ್ರೆಯ ಪರಂಪರೆಯ ನಿಯಮಗಳಂತೆ ಪಂಚಗೃಹ ಹಿರೇಮಠದ ಶ್ರೀಗಳ ಸಾನ್ನಿಧ್ಯದಲ್ಲಿ ದ್ಯಾಮವ್ವ ತಾಯಿಗೆ ವಿಜಯಾನಂದ ದೇಸಾಯಿ ಮಾಂಗಲ್ಯ ಧಾರಣೆ ಮಾಡಿದರು. ದುರ್ಗಾಮಾತೆಗೆ ಕೃಷ್ಣರಂಗರಾವ್‌ ದೇಶಪಾಂಡೆ ಮಾಂಗಲ್ಯ ಧಾರಣೆ ಮಾಡಿದರು. ಈ ಮಾಂಗಲ್ಯ ಧಾರಣೆ ಆಗುತ್ತಿದ್ದಂತೆ ಭಕ್ತ ಗಣದಿಂದ ಶಕ್ತಿ ಮಾತೆಯ ನಿರಂತರ ಜಯಘೋಷ ಮೊಳಗಿತು.

ಹೊನ್ನಾಟ ಆರಂಭ: ಅಮ್ಮಿನಬಾವಿ ಪಂಚಗೃಹ ಹಿರೇಮಠವು ಉಭಯ ಗ್ರಾಮದೇವಿಯರ ತವರುಮನೆ ಎಂದೇ ಬಿಂಬಿತವಾಗಿದ್ದು, ಮಾಂಗಲ್ಯ ಧಾರಣೆಯ ನಂತರ ತವರು ಮನೆಯ ಮೊದಲ ಉಡಿಯನ್ನು ಸ್ವೀಕರಿಸಲು ಉಭಯ ದೇವತೆಯರು ಮರಳಿ ಪಂಚಗೃಹ ಹಿರೇಮಠಕ್ಕೆ ಬರುವ ಸಂಪ್ರದಾಯವಿದೆ. ಶ್ರೀಮಠದ ಮುಖಮಂಟಪದಲ್ಲಿ ದ್ಯಾಮವ್ವತಾಯಿಗೆ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಹಾಗೂ ದುರ್ಗಾಮಾತೆಗೆ ಕಿರಿಯಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಉಡಿಗಳನ್ನು ತುಂಬಿದರು. ಸಂಪ್ರದಾಯದಂತೆ ಸರಕಾರದ ಪರವಾಗಿ ತಹಶೀಲ್ದಾರರು ಗ್ರಾಪಂ ಕಟ್ಟಡದಲ್ಲಿ ದೇವತೆಯರಿಗೆ ಉಡಿ ತುಂಬಿದರು. ನಂತರ ಕ್ರಮವಾಗಿ ಗ್ರಾಮದ ಭುಜಬಲಿ ದೇಸಾಯಿ ಅವರ ಮನೆಯಲ್ಲಿ ದೇಶಪಾಂಡೆ ಅವರ ವಾಡೆಯಲ್ಲಿ, ಕಟ್ಟಿಮನಿ ಮನೆತನದ ಕುಟುಂಬಗಳಾದ ಕಡ್ಲೆಪ್ಪನವರ ಹಾಗೂ ಮೇಟಿ ಮನೆತನಗಳ ವತಿಯಿಂದ ಉಡಿತುಂಬುವ ಕಾರ್ಯಕ್ರಮ ಜರುಗಿತು. ಇಲ್ಲಿಂದ ಆರಂಭಗೊಳ್ಳುವ ಹೊನ್ನಾಟವು ಇಡೀ ಗ್ರಾಮದ ಎಲ್ಲ ಬೀದಿ ಬಡಾವಣೆಗಳಲ್ಲಿ ನಿರಂತರ ನಡೆಯಿತು.

ಗ್ರಾಮವೆಲ್ಲ ಭಂಡಾರಮಯ: ಭಂಡಾರದಲ್ಲಿಯ ಅರಿಷಿಣ ಬಣ್ಣವು ಅಭಿವೃದ್ಧಿಯ ಸಂಕೇತ. ಭಂಡಾರವನ್ನೇ ಬಂಗಾರವೆಂದು ಭಾವಿಸಿ ಅದನ್ನು ಹೊನ್ನಾಟದ ಉದ್ದಕ್ಕೂ ಎಲ್ಲೆಡೆ ವ್ಯಾಪಕವಾಗಿ ಸಿಂಚನ ಮಾಡಲಾಗುತ್ತದೆ. ಈ ನಂಬಿಕೆಯಿಂದಾಗಿ ಅಖಂಡ ಭಂಡಾರದ ಸಿಂಚನದಿಂದಾಗಿ ಇಡೀ ಅಮ್ಮಿನಬಾವಿ ಗ್ರಾಮೆಲ್ಲವೂ ಭಂಡಾರಮಯವಾಗಿತ್ತು. ಎಲ್ಲಿ ನೋಡಿದಲ್ಲಿ ಜನವೋ ಜನ. ಗ್ರಾಮದೇವಿಯರ ಹೆಸರಿನೊಂದಿಗೆ ಉಧೋ….ಉಧೋ… ಎನ್ನುವ ಜಯಘೋದ ನಾಮಸ್ಮರಣೆ ಗ್ರಾಮದೆಲ್ಲೆಡೆ ಝೇಂಕರಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next