Advertisement

ಉಡುಪಿ ಜಿಲ್ಲೆಯಲ್ಲಿ ವಾಣಿಜ್ಯ ಚಟುವಟಿಕೆ ಶುರು

10:18 PM May 04, 2020 | Sriram |

ಉಡುಪಿ: ರಾಜ್ಯ ಸರಕಾರ ಹಸುರು ವಲಯ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಿರುವುದರಿಂದಾಗಿ ಉಡುಪಿ ಜಿಲ್ಲೆಯಲ್ಲಿ ವಾಣಿಜ್ಯ ಚಟುವಟಿಕೆಗಳು ಶೇ.70ರಷ್ಟು ಆರಂಭಗೊಂಡಿವೆ.ಅದರಂತೆ ಹೆಚ್ಚುವರಿಯಾಗಿ ಎಲೆಕ್ಟ್ರಾನಿಕ್ಸ್‌, ಚಿನ್ನದಂಗಡಿ, ಬಟ್ಟೆ ಮಳಿಗೆಗಳು, ಮದ್ಯದ ಅಂಗಡಿಗಳು ತೆರೆದುಕೊಂಡಿದ್ದವು. ಜಿಲ್ಲಾಡಳಿತ ನಿಯಮದಂತೆ ಅಂಗಡಿಗಳು ಕಾರ್ಯಾಚರಿಸಿವೆ.

Advertisement

ವ್ಯಾಪಾರ ಕಡಿಮೆ
ಚಿನ್ನದ ಅಂಗಡಿ, ಬಟ್ಟೆಬರೆಗಳು, ಚಪ್ಪಲಿ ಅಂಗಡಿಗಳು ತೆರೆದುಕೊಂಡಿತ್ತಾದರೂ ವ್ಯಾಪಾರ ಕಡಿಮೆಯಿತ್ತು. ನಿಗದಿತ ಅವಧಿಯ ವ್ಯಾಪಾರವಾದ್ದರಿಂದ ಜನರು ಅಗತ್ಯ ವಸ್ತುಗಳತ್ತಲೇ ಧಾವಿಸುತ್ತಿದ್ದರು. ಪೂರ್ಣ ಪ್ರಮಾಣದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಿದರಷ್ಟೇ ವಹಿವಾಟು ಚೇತರಿಕೆ ಕಾಣಲು ಸಾಧ್ಯ ಎನ್ನುತ್ತಾರೆ ವ್ಯಾಪಾರಿಗಳು.

ಟ್ರಾಫಿಕ್‌, ಬ್ಲಾಕ್‌
ನಗರದಲ್ಲಿ ಜನಸಂದಣಿ ಹೆಚ್ಚಿತ್ತು. ಬಹುತೇಕ ಅಂಗಡಿ, ಕಚೇರಿಗಳು ತೆರೆದಿದ್ದವು. ಕಲ್ಸಂಕ, ಕೆ.ಎಂ.ಮಾರ್ಗ ಸಹಿತ ಎಲ್ಲ ರಸ್ತೆಗಳಲ್ಲಿಯೂ ವಾಹನ ದಟ್ಟನೆಯಿಂದಾಗಿ ಟ್ರಾಫಿಕ್‌ ದಟ್ಟನೆ ಉಂಟಾಯಿತು. ಕಾರುಗಳು, ರಿಕ್ಷಾ, ದ್ವಿಚಕ್ರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಇಳಿದಿದ್ದವು. ಬಸ್‌ಗಳ ಸಂಚಾರ, ಮಾಲ್‌ಗ‌ಳು, ಸೆಲೂನ್‌ಗಳು, ಬ್ಯೂಟಿ ಪಾರ್ಲರ್‌ಗಳು, ಹೊಟೇಲ್‌ಗ‌ಳು ಬಂದ್‌ ಆಗಿದ್ದವು.

ಕುಂದಾಪುರ
ಜಿಲ್ಲಾಡಳಿತ ನಿಯಮದಂತೆ ಅಂಗಡಿಗಳು ತೆರೆದಿದ್ದವು. ಶೋರೂಂ ಒಳಗೆ ಕೇವಲ 10 ಮಂದಿ ಗ್ರಾಹಕರನ್ನಷ್ಟೇ ಬಿಟ್ಟು, ಹೊರಗಡೆ ಸಾಮಾಜಿಕ ಅಂತರ ಕಾಪಾಡಿ ಸರದಿಯಲ್ಲಿ ಗ್ರಾಹಕರು ನಿಂತಿದ್ದರು. ಜನರ ಓಡಾಟ ಲಾಕ್‌ಡೌನ್‌ಗಿಂತ ಹಿಂದಿನ ಮಾದರಿಯಲ್ಲೇ ಇತ್ತು.

ಬ್ರಹ್ಮಾವರ
ಬ್ರಹ್ಮಾವರ: ಮಧ್ಯಾಹ್ನ ವರೆಗೆ ಉತ್ತಮ ವಹಿವಾಟು ನಡೆದಿದೆ. ಅಂಗಡಿಗಳಲ್ಲಿ ಜನ ಹೆಚ್ಚಿದ್ದರು. ಬ್ಯಾಂಕ್‌, ಸಹಕಾರಿ ಸಂಘಗಳಲ್ಲೂ ಜನ ಹೆಚ್ಚಿದ್ದರು. ಖಾಸಗಿ ಕಚೇರಿಗಳು ತೆರೆದಿದ್ದವು. ಕುಂಜಾಲು ಜಂಕ್ಷನ್‌ನ ಸರ್ಕಲ್‌ನಿಂದ ತಾಲೂಕು ಕಚೇರಿ, ರಥಬೀದಿಯಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ತಲೆದೋರಿತ್ತು.

Advertisement

ಕೋಟ
ಕೋಟ: ಗ್ರಾಮಾಂತರ ಪ್ರದೇಶದ ಹೆಚ್ಚಿನ ಜನ ಪೇಟೆಗೆ ಬಂದಿದ್ದರು. ವಾಹನ ಸಂಚಾರ ಏರಿಕೆಯಾಗಿತ್ತು. ವಸ್ತುಗಳ ಖರೀದಿಯಲ್ಲಿ ಮೈಮರೆತ ಜನರು ಸಾಮಾಜಿಕ ಅಂತರ, ಮಾಸ್ಕ್ ಗಳ ಬಳಕೆ ಮರೆತಂತೆ ಕಂಡು ಬಂತು.

ಅಜೆಕಾರು
ಅಜೆಕಾರು: ಹೆಚ್ಚಿನ ಸಂಖ್ಯೆಯಲ್ಲಿ ಜನ ಸಾಮಗ್ರಿಗಳ ಖರೀದಿ ಮಾಡಿದರು. ಖಾಸಗಿ ವಾಹನ, ಆಟೋ ಓಡಾಟ ಇತ್ತು. ಜನ ವಿವಿಧ ಕೆಲಸಗಳಲ್ಲಿ ತೊಡಗಿಸಿ ಕೊಂಡಿದ್ದರು. ಜಿಲ್ಲಾ ಗಡಿ ಭಾಗದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದರೂ ಅಜೆಕಾರು, ಅಂಡಾರು, ಶಿರ್ಲಾಲ್‌ ಗ್ರಾಮಗಳಿಗೆ ಮಂಗಳೂರು, ಪುತ್ತೂರು, ಮಡಿಕೇರಿ, ಮುಂಬಯಿಯಿಂದ ಪೊಲೀಸರ ಗಮನಕ್ಕೆ ಬಾರದೆ ಜನ ಬರುತ್ತಿರುವುದು ಸ್ಥಳೀಯರ ನೆಮ್ಮದಿ ಕೆಡುವಂತೆ ಮಾಡಿದೆ.

ಮಲ್ಪೆ
ಮಲ್ಪೆ: ಬಿಕೋ ಎನ್ನುತ್ತಿದ್ದ ಮಲ್ಪೆ ನಗರದ ಕೆಲವು ರಸ್ತೆಗಳಲ್ಲಿ ಸೋಮವಾರ ವಾಹನ ಮತ್ತು ಜನ ಸಂಚಾರ ಕಂಡು ಬಂತು. ಮೀನು ಮಾರಾಟ, ದಿನಸಿ ಅಂಗಡಿಗಳು ಎಂದಿನಂತೆ ಕಾರ್ಯಾಚರಣೆ ನಡೆಸಿವೆ. ವಿವಿಧ ಅಂಗಡಿಗಳು ತೆರೆದುಕೊಂಡಿದ್ದವು.

ಪ್ರಯೋಜನ
ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲಿಕೆ ಯನ್ನು ಹೆಚ್ಚುವರಿ ಯಾಗಿ ವಿಸ್ತರಿಸಿರು ವುದರಿಂದಾಗಿ ಜನರಿಗೆ ಸಹಕಾರವಾಗಿದೆ. ಈ ಹಿಂದೆ 11 ಗಂಟೆಯವರೆಗೆ ಬಹಳಷ್ಟು ರಶ್‌ ಆಗುತ್ತಿತ್ತು. ಸಡಿಲಿಕೆಯಿಂದ ಆ ಪ್ರಮಾಣ ತಕ್ಕ ಮಟ್ಟಿಗೆ ಕಡಿಮೆಯಾಗಿದೆ.
-ಗಣೇಶ್‌ ಶೆಟ್ಟಿ, ಕೀಳಿಂಜೆ

ಸಮಯ ಸಾಲದು
ಸಮಯ ಸಡಿಲಿಕೆ ಮತ್ತಷ್ಟು ವಿಸ್ತರಣೆ ಆಗಬೇಕು. ಈಗಿನ ಸಮಯಾವಕಾಶ ಸಾಲದು. ಚಟು ವಟಿಕೆಗಳನ್ನು ನಡೆಸಲು ಕಷ್ಟವಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಎಲ್ಲ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬೇಕು.
-ರಾಘವೇಂದ್ರ ಪೈ, ಬನ್ನಂಜೆ

ಕ್ಷೌರದಂಗಡಿ ಇರಲಿ
ಮದ್ಯದಂಗಡಿ ಗಳಿಗೆ ಅನುಮತಿ ಕಲ್ಪಿಸಿದಂತೆ ಕ್ಷೌರದಂಗಡಿ ಗಳಿಗೂ ಅನುಮತಿ ನೀಡಬೇಕಿತ್ತು. ಇದಕ್ಕೆ ಬೇಕಿರುವಂತಹ ನಿಯಮಾವಳಿಗಳನ್ನು ಜಿಲ್ಲಾಡಳಿತ ಆದಷ್ಟು ಬೇಗನೆ ಸಿದ್ಧಪಡಿಸಿದರೆ ಒಳ್ಳೆಯದಿತ್ತು.
-ಜನಾರ್ದನ ಕೆಂಬಾವಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next