Advertisement

ಕೊಪ್ಪಳದಲ್ಲಿ ಟೂರಿಸಂ ಅಧ್ಯಯನ ಸಂಸ್ಥೆ  ಆರಂಭಿಸಿ

05:18 PM Aug 04, 2018 | Team Udayavani |

ಕೊಪ್ಪಳ: ನೂರಾರು ಪ್ರವಾಸಿ ತಾಣ, ಐತಿಹಾಸಿಕ, ಪೌರಾಣಿಕ ಸ್ಥಳಗಳನ್ನು ಹೊಂದಿರುವ ಕೊಪ್ಪಳ ಜಿಲ್ಲೆಯು ಎಲ್ಲ ದೃಷ್ಟಿಯಿಂದ ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ ಕೊಪ್ಪಳ ನಗರದಲ್ಲಿ ಭಾರತೀಯ ಪ್ರವಾಸೋದ್ಯಮ ಮತ್ತು ಪ್ರವಾಸಿ ಅಧ್ಯಯನ ಸಂಸ್ಥೆ ಆರಂಭಿಸುವಂತೆ ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಕೆ.ಜೆ. ಅಲ್ಫೋನ್ಸ್‌ ಅವರಿಗೆ ಸಂಸದ ಸಂಗಣ್ಣ ಕರಡಿ ಅವರು ಮನವಿ ಸಲ್ಲಿಸಿದ್ದಾರೆ.

Advertisement

ನವದೆಹಲಿಯಲ್ಲಿ ಮನವಿಪತ್ರ ಸಲ್ಲಿರುವ ಸಂಸದರು, ರಾಮಾಯಣ ಕಾಲದಲ್ಲಿ ಹನುಮಂತ ಜನಿಸಿದ ಎನ್ನಲಾದ ಅಂಜನಾದ್ರಿ ಪರ್ವತ, ವಿಜಯನಗರ ಅರಸರ ಕಾಲದ ಆನೆಗೊಂದಿ, ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ದೇಶದ 27 ಐತಿಹಾಸಿಕ ಸ್ಥಳಗಳು ಸೇರಿದ್ದು, ಆ ಪೈಕಿ ಕರ್ನಾಟಕದ ಹಂಪಿಯೂ ಸಹ ಪಕ್ಕದಲ್ಲೇ ಇದೆ. ಪಕ್ಕದ ಐಹೊಳೆ, ಬಾದಾಮಿ, ಪಟ್ಟದಕಲ್ಲು, ತುಂಗಭದ್ರಾ ಜಲಾಶಯ, ಪೌರಾಣಿಕ ಪ್ರಸಿದ್ಧ ಹುಲಿಗೆಮ್ಮದೇವಿ ದೇವಸ್ಥಾನ, ಇಟಗಿ ಭೀಮಾಂಬಿಕಾ ದೇವಾಲಯ, ಕನಕಗಿರಿಯ ಕನಕಾಚಲಪತಿ ದೇವಸ್ಥಾನ, ವಾಲಿ ಪರ್ವತ, ಶಬರಿ ನಾಡು, ಪಂಪಾ ಸರೋವರ ಸೇರಿದಂತೆ ನೂರಾರು ಐತಿಹಾಸಿಕ, ಪೌರಾಣಿಕ ಪ್ರಸಿದ್ಧವಾದ ಪ್ರವಾಸಿ ತಾಣಗಳು ಜಿಲ್ಲೆಯ ಸುತ್ತಮುತ್ತಲೂ ಇವೆ.

ಈ ಸ್ಥಳಗಳಿಗೆ ಮಹತ್ವ ಬರುವ ಉದ್ದೇಶದಿಂದ ಕೊಪ್ಪಳ ನಗರದಲ್ಲಿ ಕೇಂದ್ರ ಸರ್ಕಾರದಿಂದ ಪ್ರವಾಸೋದ್ಯಮ  ಅಧ್ಯಯನ ಸಂಸ್ಥೆ ಆರಂಭಿಸಬೇಕು. ಇದರಿಂದ ಇಲ್ಲಿ ಪ್ರವಾಸೋದ್ಯಮ ಇನ್ನೂ ಬೆಳೆಯುತ್ತದೆ. ಅಲ್ಲದೆ ಪ್ರವಾಸೋದ್ಯಮ ಕೋರ್ಸ್‌ ಕಲಿಯುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ನೌಕರಿ, ತರಬೇತಿ ಸಿಗುತ್ತದೆ ಎಂದು ಮನವಿ ಮಾಡಿದ್ದಾರೆ.

ಕೊಪ್ಪಳ, ಹೊಸಪೇಟೆ, ಹಂಪೆ ಸೇರಿದಂತೆ ಸುತ್ತಮುತ್ತಲಿನ ಸ್ಥಳಗಳ ಬಗ್ಗೆ ತಿಳಿಯಲು ಹಾಗೂ ಅಧ್ಯಯನ ಮಾಡಲು ಈ ಭಾಗದಲ್ಲಿ ಪ್ರವಾಸೋದ್ಯಮ ಅಧ್ಯಯನ ಸಂಸ್ಥೆಗಳಿಲ್ಲ. ನಮ್ಮ ಭಾಗದ ಐತಿಹಾಸಿಕ ಸ್ಥಳಗಳಿಗೆ ದೇಶ, ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಇದನ್ನು ಸರಿಯಾಗಿ ನಿರ್ವಹಣೆ ಮಾಡುವ ದೃಷ್ಟಿಯಿಂದ ನಮ್ಮ ಭಾಗದಲ್ಲಿ ಯಾವುದೇ ಟೂರಿಸಂ ಮ್ಯಾನೆಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ ಇಲ್ಲ. ಕೇಂದ್ರ ಸರ್ಕಾರ ಈ ಎಲ್ಲಾ ಅಂಶಗಳನ್ನು ಅರಿತು ಕೊಪ್ಪಳದಲ್ಲಿ ಮ್ಯಾನೆಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ ಆರಂಭಿಸಿದರೆ ನಮ್ಮ ಭಾಗದ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿದಂತಾಗುತ್ತದೆ. ಹೀಗಾಗಿ ಕೂಡಲೇ ಸಂಸ್ಥೆ ಆರಂಭಿಸಲು ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.

ಮನವಿ ಸ್ವೀಕರಿಸಿರುವ ಕೇಂದ್ರ ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಕೆ.ಜೆ. ಅಲ್ಫೋನ್ಸ್‌ ಅವರು, ಈ ಕುರಿತು ಸಾಧಕ, ಬಾಧಕ ಪರಿಶೀಲಿಸಿ ಶೀಘ್ರದಲ್ಲೇ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next