ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಹಿಬ್ರೂ, ಪೊಲೀಶ್, ಡಚ್ ಮತ್ತು ಥಾಯ್ ಭಾಷೆಗಳ ಕೋರ್ಸ್‌ಗಳು ಆರಂಭಗೊಳ್ಳಲಿವೆ. ಎರಡು ತಿಂಗಳ ಅವಧಿಯ ಈ ಎಲ್ಲ ಕೋರ್ಸ್‌ಗಳು ಮೂಲ ಕಲಿಕಾ ಹಂತದ ಕೋರ್ಸ್‌ಗಳಾಗಿವೆ.
ಈ ಭಾಷಿಕರೊಂದಿಗೆ ಮಾತನಾಡಲು ಅವಶ್ಯವಿರುವ ಕಲಿಕೆಯನ್ನು ಹೇಳಿಕೊಡಲಾಗುವುದು. ಪ್ರತಿ ಕೋರ್ಸ್‌ಗಳನ್ನು ಆರಂಭಿಸಲು ಕನಿಷ್ಠ ಹತ್ತು ವಿದ್ಯಾರ್ಥಿಗಳು ದಾಖಲಾಗಬೇಕು ಎಂದು ವಿವಿಯ ಜಾಗತಿಕ ಭಾಷೆಗಳ ಕೇಂದ್ರದ ಮುಖ್ಯಸ್ಥೆ ಜ್ಯೋತಿ ವೆಂಕಟೇಶ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಾಥಮಿಕ ಕಲಿಕಾ ಅವಧಿಯ ಕೋರ್ಸ್‌ಗಳಾದ ಪ್ರಮಾಣ ಪತ್ರ 1 ಮತ್ತು 2, ಡಿಪ್ಲೊಮಾ 1 ಮತ್ತು 2ರ ಕಲಿಕಾ ಭಾಷೆ ಕೋರ್ಸ್‌ಗಳಾದ ಜರ್ಮನ್, ಸ್ಪ್ಯಾನಿಷ್, ಕೋರಿಯನ್, ರಷ್ಯನ್, ಚೈನೀಸ್, ಇಟಾಲಿಯನ್ ಮತ್ತು ಅರೇಬಿಕ್ ತರಗತಿಗಳ ಕಲಿಕಾ ಅವಧಿಯನ್ನು ಎಂಟು ತಿಂಗಳಿನಿಂದ ನಾಲ್ಕು ತಿಂಗಳಿಗೆ ಕಡಿತಗೊಳಿಸಲಾಗಿದೆ.
ಉನ್ನತ ಕಲಿಕಾ ಕೋರ್ಸ್‌ಗಳಾದ ಹೈಯರ್ ಡಿಪ್ಲೊಮ ಮತ್ತು ಅಡ್ವಾನ್ಸ್ ಡಿಪ್ಲೊಮಾ ತರಗತಿಗಳು ಎಂದಿನಂತೆ ಎಂಟು ತಿಂಗಳಿನಲ್ಲಿಯೇ ಮುಂದುವರಿಯಲಿವೆ ಎಂದು ಹೇಳಿದರು. ಅಲ್ಲದೆ, ಪ್ರಸಕ್ತ ಸಾಲಿನಿಂದ ಫ್ರೆಂಚ್, ಸ್ಪ್ಯಾನಿಷ್ ಮತ್ತು ಜರ್ಮನ್ ಭಾಷೆಗಳ ಎಂಎ ಸಂಯೋಜಿತ ಕೋರ್ಸ್‌ಗಳನ್ನು ಆರಂಭಿಸುವ ಚಿಂತನೆ ಇದೆ. ಇವು ಎರಡು ವರ್ಷದ ಅವಧಿಯ ಕೋರ್ಸ್‌ಗಳಾಗಿವೆ ಎಂದರು.
ಇಂದು ಪುಸ್ತಕ ಬಿಡುಗಡೆ: ಹೋಟೆಲ್ ಮ್ಯಾನೇಜ್‌ಮೆಂಟ್‌ನ ಫ್ರೆಂಚ್ ಕೋರ್ಸ್‌ಗಳಿಗೆ ಸಹಕಾರಿಯಾಗುವ “ಬೆನ್ ಸೆಜೋರ್’ ಪಠ್ಯಪುಸ್ತಕ ಶನಿವಾರ ಸಂಜೆ 4ಕ್ಕೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬಿಡುಗಡೆ ಆಗಲಿದೆ. ಬೆಂಗಳೂರು ಕೇಂದ್ರ ವಿವಿ ಕುಲಪತಿ ಪ್ರೊ. ಎಸ್. ಜಾಫೆಟ್ ಬಿಡುಗಡೆ ಮಾಡಲಿದ್ದಾರೆ.
ಬೆಂಗಳೂರು ವಿವಿ ಕುಲಪತಿ ಪ್ರೊ.ಐ.ಎಸ್. ಶಿವಕುಮಾರ್, ಫ್ರೆಂಚ್ ರಾಯಭಾರ ಕಚೇರಿಯ ಡಾ.ಜೆರೋಮ್ ಬೋವೆ, ಕುಲಸಚಿವರಾದ ಪ್ರೊ.ಬಿ.ಕೆ. ರವಿ, ಪ್ರೊ.ಎಂ. ರಾಮಚಂದ್ರಗೌಡ ಭಾಗವಹಿಸಲಿದ್ದಾರೆ. ಲೇಖಕರಾದ ಡಾ.ಸುಮನ್ ವೆಂಕಟೇಶ್ ಮತ್ತು ಸಂತಾನ ಕೃಷ್ಣನ್ ಸಹಯೋಗದಲ್ಲಿ ಈ ಪುಸ್ತಕ ರಚನೆ ಆಗಿದೆ.