ಆಳಂದ: ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಕಾಮಗಾರಿ ಆರಂಭಿಸಿ ವಾರದಲ್ಲೇ ಕಾಮಗಾರಿ ಸ್ಥಗಿತಗೊಳಿಸಿದ ಚಿಂಚನಸೂರ ಗ್ರಾಪಂ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿ ನಡೆ ಖಂಡಿಸಿ ಕೂಲಿ ಕಾರ್ಮಿಕರು ಗ್ರಾಪಂ ಕಚೇರಿ ಎದುರು ಸೋಮವಾರ ದಿಢೀರ್ ಪ್ರತಿಭಟನಾ ಧರಣಿ ನಡೆಸಿದರು.
ದಲಿತ ಹಕ್ಕುಗಳ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಪಾಂಡುರಂಗ ಮಾವೀನಕರ್ ಅವರ ನೇತೃತ್ವದಲ್ಲಿ ಗ್ರಾಮದ ನೂರಾರು ಕೂಲಿ ಕಾರ್ಮಿಕರು ಸೇರಿ ಗ್ರಾಪಂ ಕಚೇರಿ ಎದುರು ಧರಣಿ ನಡೆಸಿ ಬೇಡಿಕೆ ಈಡೇರಿಸಲು ಒತ್ತಾಯಿಸಿದರು.
ಕೊರೊನಾ ವೈರಸ್ ಹಾಗೂ ಅತಿವೃಷ್ಟಿ ಅನಾವೃಷ್ಟಿಯಿಂದಾಗಿ ಕಾರ್ಮಿಕರಿಗೆ ಕೆಲಸವಿಲ್ಲದೆ ಹೊಟ್ಟೆ ತುಂಬಿಸಿಕೊಳ್ಳಲಾಗದ ಪರಿಸ್ಥಿತಿ ಉಂಟಾಗಿದ್ದು, ಉದ್ಯೋಗ ಖಾತ್ರಿ ಕಾಮಗಾರಿ ಆರಂಭಿಸಬೇಕು. ಕಾಟಾಚಾರ ಎನ್ನುವಂತೆ ಒಂದೇ ವಾರ ಕಾಮಗಾರಿ ನೀಡಿ ಈಗ ಕಾಮಗಾರಿ ಸ್ಥಗಿತಗೊಳಿಸಿ ಕೆಲಸವಿಲ್ಲವೆಂದು ಹೇಳಿ ಕಾರ್ಮಿಕ ವಿರೋಧಿ ನೀತಿ ಅನುಸರಿಸಲಾಗಿದೆ. ಸರ್ಕಾರ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಉದ್ಯೋಗ ಖಾತ್ರಿಯಡಿ ಕಾರ್ಮಿಕರಿಗೆ ನೂರುದಿನ ಕೆಲಸ ಕೊಡಬೇಕು ಎಂದು ಕಾಯ್ದೆ ಮೂಲಕ ಯೋಜನೆ ಜಾರಿಗೆ ತಂದಿದೆ. ಆದರೆ ಗ್ರಾಪಂ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಅವರು ಕಾಮಗಾರಿ ಸ್ಥಗಿತಗೊಳಿಸಿ ಬಡವರ ಹೊಟ್ಟೆಮೇಲೆ ಹೊಡೆಯುತ್ತಿದ್ದಾರೆ. ಕೂಡಲೇ ಕಾಮಗಾರಿ ನೀಡದೆ ಹೋದಲ್ಲಿ ಜಿಲ್ಲಾ ಹಾಗೂ ತಾಲೂಕು ಮುಖಂಡರೊಂದಿಗೆ ಹಾಗೂ ವ್ಯಾಪ್ತಿಯ ಕಾರ್ಮಿಕರು ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಸರ್ಕಾರಿ ಶಾಲೆಗೆ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳುತ್ತಿಲ್ಲ. ಹಿಂದೆ ಎನ್‌ಎಂಆರ್ ತೆಗೆದಂತೆ ಕೆಲಸ ಆರಂಭಿಸಬೇಕು. ಉದ್ಯೋಗಖಾತ್ರಿ ಕಾಮಗಾರಿ ಬಯಸಿ ಫಾರಂ 6 ನೀಡುವ ಎಲ್ಲ ಕಾರ್ಮಿಕರಿಗೆ ಕೆಲಸ ಒದಗಿಸಬೇಕು. ಗ್ರಾಪಂನಲ್ಲಿ ಕಂಪ್ಯೂಟರ್ ನಿರ್ವಹಕರಿಲ್ಲ. ಕೂಡಲೇ ಗ್ರಾಪಂಗೆ ಅಗತ್ಯ ಸಿಬ್ಬಂದಿ ಒದಗಿಸಿ ಕಾರ್ಮಿಕರಿಗೆ ಕಾಮಗಾರಿ ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಪಿಡಿಒ ದಶರಥ ಪಾತ್ರೆ ಅವರು, ನಾಲ್ಕು ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಿ ಇನ್ನೂಳಿದ ಬೇಡಿಕೆ ಈಡೇರಿಸಲಾಗುವುದು. ಧರಣಿ ವಾಪಸ ಪಡೆಯಬೇಕು ಎಂದು ಮನವಿ ಮಾಡಿದ ಮೇಲೆ ಧರಣಿ ಹಿಂಪಡೆಯಲಾಯಿತು. ಜಟ್ಟೆಪ್ಪ ಮಾವೀನಕರ್, ಕೃಷ್ಣಪ್ಪ ಧನ್ನಿ, ಶಿಶುಪಾಲ ಧನ್ನಿ, ಕಸ್ತುರಾಬಾಯಿ ವಡೆಯರಾಜ, ರೇಖಾ ಜಮಾದಾರ, ಗಂಗಮ್ಮ ಕರ್, ಶ್ರೀದೇವಿ ಬಾಳಿ, ಶಶಿಕಲಾ ಮಗಿ, ಮಹಾದೇವ ಸುತಾರ, ಹಣಮಂತ ಮಗಿ, ಬಾಬು ಮಗಿ ಅನೇಕರು ಪಾಲ್ಗೊಂಡಿದ್ದರು.