ಲಾಲ್‌ಬಾಗ್: ದೇಶಾದ್ಯಂತ ನಗರ ಸ್ವಚ್ಛತೆ ಪರಿಕಲ್ಪನೆಯಲ್ಲಿ ನಡೆಯಲಿರುವ ‘ಸ್ವಚ್ಛ ಸರ್ವೇಕ್ಷಣೆ- 2022′ ರ ಮುಂದುವರಿದ ಭಾಗವಾಗಿ ‘ಗಾರ್ಬೆಜ್ ಫ್ರೀ ಸಿಟಿ ಸ್ಟಾರ್ ರೇಟಿಂಗ್’ ಬಗ್ಗೆ ಅವಲೋಕಿಸಲು ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಸರ್ವೇ ತಂಡ ಕೆಲವೇ ದಿನಗಳಲ್ಲಿ ಮಂಗಳೂರಿಗೆ ಆಗಮಿಸಲಿದೆ.
ಸ್ವಚ್ಛ ಸರ್ವೇಕ್ಷಣೆಗೆ ಸಂಬಂಧಿಸಿ 3 ಹಂತದ ಸರ್ವೇಯನ್ನು ಕೇಂದ್ರ ತಂಡ ನಗರಕ್ಕೆ ಆಗಮಿಸಿ ನಡೆಸುತ್ತದೆ. ಈ ಪೈಕಿ ಓಡಿಎಫ್++ ಸರ್ವೇಕ್ಷಣೆ ಗಾರ್ಬೆಜ್’ ಸಮೀಕ್ಷೆಯನ್ನು ಫೆ. 18, 19ರಂದು ಮಂಗಳೂರಿನಲ್ಲಿ ನಡೆಸಲಾಗಿದೆ. ಬಳಿಕ ಸ್ವಚ್ಛ ಸರ್ವೇಕ್ಷಣೆಯ ಎರಡನೇ ಸರ್ವೇ ತಂಡ ಎ. 1ರಿಂದ 7ರ ವರೆಗೆ ನಗರದಲ್ಲಿ ಸರ್ವೇ ನಡೆಸಿದೆ. ಮುಂದೆ ಕೆಲವೇ ದಿನಗಳಲ್ಲಿ ಮೂರನೇ ತಂಡ ಆಗಮಿಸಿ ಪರಿಶೀಲಿಸಲಿದೆ.
ಎರಡು ವರ್ಷಗಳ ಹಿಂದೆ ‘ಗಾರ್ಬೆಜ್ ಫ್ರೀ ಸಿಟಿ ಸ್ಟಾರ್ ರೇಟಿಂಗ್’ ಸ್ಪರ್ಧೆ ಆರಂಭವಾಗಿದ್ದು, ಇದರಲ್ಲಿ ಮಂಗಳೂರು ಇಲ್ಲಿಯವರೆಗೆ ಸ್ಪರ್ಧಿಸಿರಲಿಲ್ಲ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ನಗರ ಹಲವು ಅರ್ಹತೆಗಳನ್ನು ಒಳಗೊಂಡಿರಬೇಕು. ನಗರದಲ್ಲಿ ಸಿಎನ್‌ಜಿ ಬಳಕೆ, ತ್ಯಾಜ್ಯ ನಿರ್ವಹಣೆ, ವಾಹನದಲ್ಲಿ ಜಿಪಿಎಸ್ ಬಳಕೆ, ಮಂದಾರದಲ್ಲಿ ತ್ಯಾಜ್ಯ ತೆರವು, ಬ್ಲಾಕ್ ಸ್ಪಾಟ್, ರಾಜಕಾಲುವೆ ಸ್ವಚ್ಛತೆ ಸಹಿತ ನಗರವು ಮಾಡಿರುವ ಹಲವು ಹೊಸತನಗಳ ಬಗ್ಗೆ ಪೂರ್ಣ ದಾಖಲೆ ಸಲ್ಲಿಸಿದರೆ ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಟಾರ್ 1, 3, 5, 7 ನೇ ಸ್ಥಾನ ಇರಲಿದೆ.
ಈ ಪೈಕಿ ಮಂಗಳೂರು 5ನೇ ಸ್ಟಾರ್‌ಗೆ ಸ್ಪರ್ಧೆಯಲ್ಲಿದೆ. ಮಂಗಳೂರು ಪಾಲಿಕೆ ಇದಕ್ಕಾಗಿ 5,000 ದಾಖಲೆಗಳನ್ನು ಸಲ್ಲಿ ಸಿದೆ. ಈ ದಾಖಲೆಯ ಪರಿಶೀಲನೆಯನ್ನು ಕೆಲವೇ ದಿನದಲ್ಲಿ ಬರುವ ಸರ್ವೇ ತಂಡ ನಡೆಸಲಿದೆ. ಮುಂದಿನ ದಿನದಲ್ಲಿ ಸ್ವಚ್ಛ ಸರ್ವೇಕ್ಷಣೆ ಸ್ಥಾನದ ಫಲಿತಾಂಶ ಘೋಷಿಸುವ ಸಂದರ್ಭ “ಸ್ಟಾರ್ ರೇಟಿಂಗ್’’ ಕೂಡ ಒಳಗೊಂಡಿರುತ್ತದೆ
.
ಅಭಿಪ್ರಾಯ ಸಲ್ಲಿಕೆ ದಿನಾಂಕ ವಿಸ್ತರಣೆ
ಸ್ವಚ್ಛ ಸರ್ವೇಕ್ಷಣೆ ಸ್ಪರ್ಧೆಯ ‘ಸಿಟಿಜನ್ಸ್ ಫೀಡ್‌ಬ್ಯಾಕ್’ ಮೂಲಕ ಸಾರ್ವಜನಿಕರು ಅಭಿಪ್ರಾಯ ದಾಖಲಿಸಲು ಎ. 12 ಕೊನೆಯ ದಿನಾಂಕವಾಗಿತ್ತು. ಆದರೆ ಆನ್‌ಲೈನ್ ಕೆಲವು ಸಮಸ್ಯೆ ಇರುವ ಕಾರಣದಿಂದ ಈ ದಿನಾಂಕವನ್ನು ಎ. 15ರ ವರೆಗೆ ವಿಸ್ತರಿಸಲಾಗಿದೆ. ಅಲ್ಲಿಯವರೆಗೆ ಮಂಗಳೂರಿನ ನಾಗರಿಕರು ನಗರದ ಸ್ವಚ್ಛತೆಗೆ ಅನುಗುಣವಾದ ಪ್ರಶ್ನೆಗಳಿಗೆ ಉತ್ತರಿಸಿ ನಗರ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.