ಆಕೆ ಶ್ರೀಮಂತ ಬಿಝಿನೆಸ್‌ಮ್ಯಾನ್‌ವೊಬ್ಬನ ಪತ್ನಿ. ಮೊದಲ ಪತ್ನಿಯನ್ನು ಕಳೆದುಕೊಂಡು ಒಂಟಿತನದಲ್ಲಿದ್ದ ಆ ಬಿಝಿನೆಸ್ ಮ್ಯಾನ್‌ಗೆ ಮೋಡಿ ಮಾಡಿ, ಆತನ ಪತ್ನಿಯಾದವಳಾಕೆ. ಆಕೆಯ ಲೆಕ್ಕಾಚಾರವೇ ಬೇರೆ. ಆ ಲೆಕ್ಕಾಚಾರದ ಹಿಂದೆ ಒಬ್ಬ ಮಾಸ್ಟರ್‌ಮೈಂಡ್. ಅಷ್ಟಕ್ಕೂ ಆಕೆಯ ಲೆಕ್ಕಾಚಾರವೇನು, ಅದರ ಹಿಂದೆ ಇರುವವರು ಯಾರು ಎಂಬ ಕುತೂಹಲವಿದ್ದರೆ “ಆಪರೇಷನ್ ನಕ್ಷತ್ರ’ ಚಿತ್ರ ನೋಡಬಹುದು.
ಹೆಸರಿಗೆ ತಕ್ಕಂತೆ ಇದು ಸಸ್ಪೆನ್ ಥ್ರಿಲ್ಲರ್ ಸಿನಿಮಾ. ಒಂದಷ್ಟು ಸಹಜ ಹಾಗೂ ಅಸಹಜ ಸಾವುಗಳ ಸುತ್ತ ಸಾಗುವ ಸಿನಿಮಾ ಪ್ರೇಕ್ಷಕರ ಕುತೂಹಲವನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಸಿನಿಮಾದ ಇಂಟರ್‌ವಲ್‌ವರೆಗೆ ಪ್ರೇಕ್ಷಕನಿಗೆ ಇದೊಂದು ಫ್ಯಾಮಿಲಿ ಡ್ರಾಮಾದಂತೆ ಕಂಡುಬಂದರೂ, ಚಿತ್ರದ ದ್ವಿತೀಯಾರ್ಧ ಸಿನಿಮಾದ ಟ್ವಿಸ್ಟ್‌ಗಳು ತೆರೆದುಕೊಳ್ಳುತ್ತಾ ಹೋಗುತ್ತದೆ.
ಹಾಗಾಗಿ, ಸೆಕೆಂಡ್‌ಹಾಫ್ ತುಂಬಾ ಟ್ವಿಸ್ಟ್‌ಗಳು ಆವರಿಸಿವೆ. ನೀವು ಇನ್ನೇನೋ ಲೆಕ್ಕಾಚಾರ ಹಾಕಿದರೆ, ಅಲ್ಲಿ ನಡೆಯೋದು ಮತ್ತೂಂದು. ಯಾರ ಹಿಂದೆ ಯಾರಿದ್ದಾರೆ, ಅವರ ಗೇಮ್‌ಪ್ಲ್ರಾನ್ ಏನು ಎಂಬುದನ್ನು ಇಲ್ಲಿ ಊಹಿಸೋದು ಕಷ್ಟ. ಆ ಮಟ್ಟಿಗೆ ನಿರ್ದೇಶಕರು ಥ್ರಿಲ್ಲರ್ ಅಂಶಗಳನ್ನು ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಗಂತ ಕಥೆಯ ವಿಚಾರಕ್ಕೆ ಬರುವುದಾದರೆ ತೀರಾ ಹೊಸದೇನಲ್ಲ. ಈಗಾಗಲೇ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ತರಹದ ರಿವೆಂಜ್ ಸ್ಟೋರಿಗಳು ಬಂದಿವೆ. ಆದರೆ, ಇಲ್ಲಿ ಸಂದರ್ಭ, ಸನ್ನಿವೇಶ ಹೊಸದಾಗಿದೆ. ಒಂದು ಹೊಸಬರ ತಂಡವಾಗಿ ಪ್ರಯತ್ನವನ್ನು ಮೆಚ್ಚಬಹುದು. ಸಹಜವಾಗಿಯೇ ಚಿತ್ರದಲ್ಲಿ ಒಂದಷ್ಟು ತಪ್ಪುಗಳು ಕೂಡಾ ಇವೆ.
ಮುಖ್ಯವಾಗಿ ಕೆಲವು ಸನ್ನಿವೇಶಗಳಿಗೆ ಲಾಜಿಕ್ ಹುಡುಕದೇ, ಸಿನಿಮಾ ದೃಷ್ಟಿಯಿಂದಲೇ ನೋಡಬೇಕು. ಮೊದಲೇ ಹೇಳಿದಂತೆ ಚಿತ್ರದ ಹೈಲೈಟ್ ದ್ವಿತೀಯಾರ್ಧ. ಅದೇ ಧಮ್ ಆರಂಭದಿಂದಲೂ ಇದ್ದಿದ್ದರೆ ಚಿತ್ರದ ತೂಕ ಹೆಚ್ಚುತ್ತಿತ್ತು.
ಇಡೀ ಚಿತ್ರದ ಹೈಲೈಟ್ ಎಂದರೆ ಯಜ್ಞಾ ಶೆಟ್ಟಿ ಹಾಗೂ ಅದಿತಿ. ಇಬ್ಬರಿಗೂ ಹೊಸ ಬಗೆಯ ಪಾತ್ರ ಸಿಕ್ಕಿದ್ದು, ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ನಿರಂಜನ್, ಲಿಖಿತ್, ದೀಪಕ್ ಸೇರಿದಂತೆ ಇತರರು ನಟಿಸಿದ್ದಾರೆ. ವೀರ್‌ಸಮರ್ಥ್ ಅವರ ಸಂಗೀತ, ಹಿನ್ನೆಲೆ ಸಂಗೀತ, ವಿಜಯ್ ಸಾಹಿತ್ಯ ಕಥೆಯ ಆಶಯಕ್ಕೆ ತಕ್ಕುದಾಗಿದೆ.
ಚಿತ್ರ: ಆಪರೇಷನ್ ನಕ್ಷತ್ರ
ನಿರ್ಮಾಣ: 5 ಸ್ಟಾರ್ ಫಿಲಂಸ್
ನಿರ್ದೇಶನ: ಮಧುಸೂದನ್
ತಾರಾಗಣ: ನಿರಂಜನ್ ಒಡೆಯರ್, ಅದಿತಿ, ಯಜ್ಞಾ ಶೆಟ್ಟಿ, ಲಿಖಿತ್, ದೀಪಕ್ ರಾಜ್ ಮತ್ತಿತರರು.
* ರವಿಪ್ರಕಾಶ್ ರೈ