ಬೆಳಗಾವಿ: ತಿರುಪತಿಯಿಂದ ಬೆಳಗಾವಿಗೆ ಸೋಮವಾರ ಬರಬೇಕಿದ್ದ ಸ್ಟಾರ್ ಏರ್ ಲೈನ್ಸ್ ವಿಮಾನ ರದ್ದಾಗಿದ್ದರಿಂದ ಪ್ರಯಾಣಿಕರು ಪರದಾಡಿದರು.
ಮುಂಚೆಯೇ ತಿತುಪತಿಯಿಂದ ಬೆಳಗಾವಿಗೆ ಟಿಕೆಟ್ ಬುಕ್ಕಿಂಗ್ ಮಾಡಿದ್ದ ಪ್ರಯಾಣಿಕರು ಸೋಮವಾರ ನಿಲ್ದಾಣಕ್ಕೆ ಬಂದು ವಿಮಾನ ಏರಬೇಕು ಎನ್ನುವಷ್ಟರಲ್ಲಿ ರದ್ದಾಗಿರುವ ಮಾಹಿತಿ ಸ್ಟಾರ್ ಏರ್‌ಲೈನ್ಸ್ ಸಿಬ್ಬಂದಿ ತಿಳಿಸಿದ್ದಾರೆ. ಇದರಿಂದ ಆತಂಕಗೊಂಡ ಪ್ರಯಾಣಿಕರು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಏಕಾಏಕಿ ವಿಮಾನ ರದ್ದಾಗಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಸೋಮವಾರ ಸಂಜೆ 7:30ಕ್ಕೆ ವಿಮಾನ ತಿರುಪತಿಯಿಂದ ಬಿಡಬೇಕಿತ್ತು. ಆದರೆ ವಿಮಾನ ರದ್ದಾಗಿರುವ ಬಗ್ಗೆ ಮಧ್ಯಾಹ್ನ 3:25ಕ್ಕೆ ಸಂದೇಶ ಬಂದಿದೆ. ಹೀಗಾಗಿ ಸರಿಯಾದ ಮಾಹಿತಿ ಸಿಗದೇ ಅಥಣಿ, ರಾಯಬಾಗ ಸೇರಿದಂತೆ ವಿವಿಧ ತಾಲೂಕುಗಳ ಪ್ರಯಾಣಿಕರು ಪರದಾಡಿದರು. ಸ್ಟಾರ್ ಏರ್‌ಲೈನ್ಸ್ ವಿಮಾನ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಥಣಿ ತಾಲೂಕಿನ ಶೇಗುಣಸಿಯ ಮಹಾಂತೇಶ ಎಂಬವರ ಸಂಬಂಧಿಕರು ನಿಧನ ಹೊಂದಿದ್ದಾರೆ. ಹೀಗಾಗಿ ಬೇಗ ಬೆಳಗಾವಿಗೆ ಬಂದು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಏಕಾಏಕಿ ವಿಮಾನ ರದ್ದಾಗಿರುವುದರಿಂದ ತೊಂದರೆ ಅನುಭವಿಸುವಂತಾಗಿದೆ. ಎರಡು ತಿಂಗಳ ಮುಂಚೆಯೇ ವಿಮಾನ ಬುಕ್ಕಿಂಗ್ ಮಾಡಿದ್ದೇವೆ. ದಿಢೀರ್ ವಿಮಾನ ಸಂಚಾರ ಬಂದ್ ಮಾಡಿರುವುದು ಸಮಸ್ಯೆ ಆಗಿದೆ. ಕೂಡಲೇ ಎಲ್ಲ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ವಕೀಲ ಸುಭಾಷ ನಾಯಕ ಆಗ್ರಹಿಸಿದ್ದಾರೆ.
ಅಥಣಿಯ ಸದಾಶಿವ ನಾಯಕ, ಬಸಯ್ಯ ಅವರವಾಡ, ಅಪ್ಪಾಸಾಬ ಬಡ್ನಾಡ, ವಿಜಯ ಮುಗಳಖೋಡ, ಮಲ್ಲಪ್ಪ ಯಡಹಳ್ಳಿ, ಸಂತೋಷ ಧರಿಗೌಡ ಸೇರಿದಂತೆ ರಾಯಬಾಗ ತಾಲೂಕಿನ ಮುಗಳಖೋಡ ಹಾಗೂ ಪಾಲಬಾಂವಿ ಗ್ರಾಮದ 17 ಜನ ಪ್ರಯಾಣಿಕರು ಪರದಾಡಿದರು. ಅನಿವಾರ್ಯವಾಗಿ ತಿರುಪತಿಯಿಂದ ಬಸ್‌ನಲ್ಲಿ ಪ್ರಯಾಣಿಸುತ್ತ ಬೆಂಗಳೂರಿಗೆ ಆಗಮಿಸುತ್ತಿದ್ದು, ಅಲ್ಲಿಂದ ಬೆಳಗಾವಿಗೆ ಬಸ್‌ನಲ್ಲಿ ಆಗಮಿಸಲಿದ್ದಾರೆ.