Advertisement

ಸ್ಮಾರ್ಟ್‌ಸಿಟಿಯಲ್ಲೀಗ ರಾರಾಜಿಸುತ್ತಿವೆ ಸ್ಟನ್‌ಪೋಲ್ಸ್‌

05:09 PM Nov 16, 2018 | Team Udayavani |

ದಾವಣಗೆರೆ: ಸ್ಮಾರ್ಟ್‌ಸಿಟಿ ದಾವಣಗೆರೆಗೆ ನಿರಂತರ ವಿದ್ಯುತ್‌ ಪೂರೈಸಲು ಬೆಸ್ಕಾಂ ಕಾರ್ಯೋನ್ಮುಖವಾಗಿದ್ದು, ಇದೀಗ
ಭೂಗತ ಕೇಬಲ್‌ ಜತೆಗೆ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಅಳವಡಿಸಲು ಸ್ಟನ್‌ಪೋಲ್ಸ್‌ ಬಳಸಲಾಗುತ್ತಿದ್ದು, ಬೃಹತ್‌ ಪೋಲ್‌ಗ‌ಳು ಈಗ ರಸ್ತೆಪಕ್ಕದಲ್ಲಿ ರಾರಾಜಿಸುತ್ತಿವೆ.

Advertisement

ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವ ದಾವಣಗೆರೆಯಲ್ಲಿ ಈಗ ಹೈಟೆಕ್‌ ಮಾದರಿ ಕಟ್ಟಡಗಳು, ಶಾಪಿಂಗ್‌ ಮಾಲ್‌ಗ‌ಳು ತಲೆ ಎತ್ತುತ್ತಿವೆ. ಬೆಳೆಯುತ್ತಿರುವ ನಗರಕ್ಕೆ ನಿರಂತರ ವಿದ್ಯುತ್‌ ಸರಬರಾಜು ನಿಟ್ಟಿನಲ್ಲಿ ಬೆಸ್ಕಾಂ ಮುಂದಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಇಂಟಿಗ್ರೇಟೆಡ್‌ ಪವರ್‌ ಡೆವಲಪ್‌ಮೆಂಟ್‌ ಸ್ಕೀಮ್‌ನಡಿ ಒಟ್ಟು 95 ಕೋಟಿ ರೂ. ವೆಚ್ಚದಲ್ಲಿ ದಾವಣಗೆರೆ ನಗರದಲ್ಲಿ ಯುಜಿ ಕೇಬಲ್‌ ಅಳವಡಿಸಲಾಗುತ್ತಿದೆ. ಹಳೇ ಪಿ.ಬಿ ರಸ್ತೆ, ಹದಡಿ ರಸ್ತೆ, ಡೆಂಟಲ್‌ ಕಾಲೇಜ್‌ ರಸ್ತೆ, ಶಾಮನೂರು ರಸ್ತೆ, ಬಾಪೂಜಿ ಆಸ್ಪತ್ರೆ, ಪಿ.ಜೆ. ಬಡಾವಣೆ ಸೇರಿ ನಗರದ ಹೊಸ ಭಾಗದ ಬಹುತೇಕ ಎಲ್ಲಾ ಕಡೆ ಈ ಸ್ಟನ್‌ಪೋಲ್ಸ್‌ ಅಳವಡಿಕೆ ಕಂಡು ಬರುತ್ತಿದೆ.

ನಗರದಲ್ಲಿ ಸ್ಟನ್‌ಪೋಲ್ಸ್‌ ಅಳವಡಿಕೆ ಗುತ್ತಿಗೆ ಎಲ್‌ ಆ್ಯಂಡ್‌ ಟಿ ಮಲ್ಟಿ ನ್ಯಾಷನಲ್‌ ಕಂಪನಿ ಪಡೆದಿದೆ. ಕಂಪನಿ ಅವಧಿಯೊಳಗೆ ಕಾಮಗಾರಿ ಮುಗಿಸುವ ನಿಟ್ಟಿನಲ್ಲಿ ಕಾರ್ಯ ಭರದಿಂದ ಕೈಗೊಂಡಿದೆ. ಸ್ಟನ್‌ಪೋಲ್‌ ಮಾಮೂಲಿ ಕಂಬಕ್ಕಿಂತ ಭಾರ, ಉದ್ದ ಹಾಗೂ ಎತ್ತರವಿದೆ. ಈ ಕಂಬಗಳಲ್ಲಿ ಯುಜಿ ಕೇಬಲ್‌ಗೆ ಜಿಒಎಸ್‌ನ 3 ಸ್ವಿಚ್‌ಗಳನ್ನು ಅಳವಡಿಸಲಾಗುತ್ತಿದೆ. ಈಗಾಗಲೇ ನಗರದಲ್ಲಿ ಸುಮಾರು 230ಕ್ಕೂ ಹೆಚ್ಚು ಸ್ಟನ್‌ ಪೋಲ್ಸ್‌ ಅಳವಡಿಸಿದ್ದು, ಶೇ. 80 ರಷ್ಟು ಕೆಲಸ ಆಗಿದೆ. ಬಾಕಿ ಇರುವ ಕಾಮಗಾರಿ ಐದಾರು ತಿಂಗಳಲ್ಲಿ ಮುಗಿಯಲಿದ್ದು, ಮುಂಬರುವ ಮಾರ್ಚ್‌ ವೇಳೆಗೆ ದಾವಣಗೆರೆ ವಿದ್ಯುತ್‌ ತಂತಿಮುಕ್ತ ನಗರ ಆಗಲಿದೆ. ಈ ಮೊದಲು ಟ್ರಾನ್ಸ್‌
ಫಾರ್ಮರ್‌ ಅಳವಡಿಸಲು ಸಾಮಾನ್ಯ ಕಂಬಗಳನ್ನು ಬಳಸಲಾಗುತ್ತಿತ್ತು. ಈಗ ಭಾರದ ಸ್ಟನ್‌ಪೋಲ್‌ ತರಿಸಲಾಗಿದೆ.

ಮಾಮೂಲಿ ಕಂಬದ ಬೆಲೆ ನಾಲ್ಕರಿಂದ ಐದು ಸಾವಿರ ರೂ. ಗಳಾದರೆ, ಸ್ಟನ್‌ಪೋಲ್‌ ಒಂದರ ಬೆಲೆ 16 ರಿಂದ 17 ಸಾವಿರ
ರೂ. ಇದೆ. ಶಾರ್ಟ್‌ಸರ್ಕಿಟ್‌ನಿಂದ ಕೆಲವು ಸಂದರ್ಭದಲ್ಲಿ ಟ್ರಾನ್ಸ್‌ಫಾರ್ಮರ್‌ ಇಲ್ಲವೇ ಲೈನ್‌ನಲ್ಲಿ ಬೆಂಕಿ ಕಾಣಿಸಿಕೊಂಡು
ಅಪಾರ ಹಾನಿಯಾದ ಆದ ಉದಾಹರಣೆಗಳು ಸಾಕಷ್ಟಿವೆ. ಸ್ಟನ್‌ಪೋಲ್‌ ಬಳಕೆಯಿಂದ ಇಂತಹ ಅವಘಡ ತಪ್ಪಲಿದೆ ಎನ್ನುತ್ತಾರೆ ಬೆಸ್ಕಾಂ ಅಧಿಕಾರಿಗಳು. ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ರಭಸದ ಗಾಳಿ, ಮಳೆಗೆ ಸಾಧಾರಣ ವಿದ್ಯುತ್‌ ಕಂಬಗಳು ವಾಲುವುದು, ಮುರಿದು ಬೀಳುತ್ತಿದ್ದವು. ಆಗ ವಿದ್ಯುತ್‌ ಸಂಪರ್ಕ ಕಡಿತಗೊಳ್ಳುವುದು ಸರ್ವೆ ಸಾಮಾನ್ಯವಾಗಿತ್ತು. ಇದೀಗ ಭೂಗತ ವಿದ್ಯುತ್‌ ಕೇಬಲ್‌ ಅಳವಡಿಕೆಯಿಂದ ಈ ಹಿಂದಿದ್ದ ಕಂಬಗಳನ್ನು ಸಂಪೂರ್ಣ ತಗೆಯುವ ಉದ್ದೇಶವಿದೆ.

Advertisement

ತಪ್ಪಲಿದೆ ವಿದ್ಯುತ್‌ ಸಮಸ್ಯೆ ಸ್ಮಾರ್ಟ್‌ಸಿಟಿಗೆ ತಕ್ಕಂತೆ ನಗರದ 6 ಕಡೆ 11 ಕೆ.ವಿ. ಯು.ಜಿ. ಕೇಬಲ್‌ ಲೈನ್‌ ಅಳವಡಿಸಲಾಗಿದೆ. ಜತೆಗೆ 50 ಕೆ.ವಿ. ಸಾಮರ್ಥ್ಯದ 260 ಹೊಸ ಟ್ರಾನ್ಸಫಾರ್ಮರ್‌ಗಳನ್ನು ಹೆಚ್ಚುವರಿಯಾಗಿ ಅಳವಡಿಸಿದ್ದೇವೆ. ದಾವಣಗೆರೆಯಲ್ಲಿ ಇನ್ನೂ 30 ವರ್ಷ ಎಷ್ಟೇ ಫ್ಯಾಕ್ಟರಿ, ಮನೆ, ಶಾಪಿಂಗ್‌ ಮಾಲ್‌ಗ‌ಳು, ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿದರೂ ಕೂಡ ಯಾವುದೇ ರೀತಿಯಲ್ಲೂ ಸಾರ್ವಜನಿಕರಿಗೆ ತೊಂದರೆ ಆಗಲ್ಲ. ನಿರಂತರ ವಿದ್ಯುತ್‌ ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದೆ.
 ಎ.ಕೆ. ತಿಪ್ಪೇಸ್ವಾಮಿ, ಬೆಸ್ಕಾಂ ನಗರ ಉಪವಿಭಾಗದ 1ರ ಎಇಇ.

ವಿಜಯ ಕೆಂಗಲಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next