Advertisement
ಇದೀಗ ಜನವರಿ 4ರಿಂದ ಮೂರು ದಿನಗಳ ಕಾಲ ನಡೆಯುವ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನನ್ನೂರು ಧಾರವಾಡ ಸಜ್ಜಾಗುತ್ತಿದೆ. ನಾಡಿನ ಮೂಲೆಮೂಲೆಗಳಿಂದ ಧಾರವಾಡಕ್ಕೆ ಅಗಮಿಸುವ ಸಾಹಿತ್ಯಾಸಕ್ತರು, ಅಭಿಮಾನಿಗಳು ತಪ್ಪದೇ ಭೇಟಿಮಾಡುವ ಸ್ಥಳಗಳೆಂದರೆ ಒಂದು ಕಾಲಕ್ಕೆ ಮೂಡಲ ಮನೆಗೆ ಮುತ್ತಿನ ನೀರಿನ ಎರಕ ಹೊಯ್ಯುತ್ತಿದ್ದ ಸಾಧನಕೇರಿ, ಬಣ್ಣ ಕಳೆದುಕೊಂಡು ನಿಂತ ಬೇಂದ್ರೆ ಭವನ. ಅದರ ಪಕ್ಕದಲ್ಲಿ ಹಸಿರು ತುಂಬಿಕೊಂಡ ಬೇಂದ್ರೆ ಮನೆಯಲ್ಲಿ ಅವರ ಮೊಮ್ಮಗಳು ಪುನರ್ವಸು ಮುಗುಳ್ನಗುವಿನಲ್ಲಿ ಸ್ವಾಗತಿಸುತ್ತಾರೆ, ಟೇಬಲ್ ಮೇಲಿಟ್ಟ ಸ್ಟೀಲ್ ಡಬ್ಬದಿಂದ ಚಮಚ ಸಕ್ಕರೆಯನ್ನಿತ್ತು ಬಾಯಿಸಿಹಿ ಮಾಡಿ ಬೀಳ್ಕೊಡುತ್ತಾರೆ.
Related Articles
Advertisement
ಒಂದು ದಶಕದ ಹಿಂದೆ ಅಂದರೆ 2008 ರಲ್ಲಿ ಯಡಿಯೂರಪ್ಪನವರ ಕಾಲದಲ್ಲಿ ಸಾಂಸ್ಕೃತಿಕ ಮಹತ್ವದ ಮೇರುಗಾಯಕಿ ಗಂಗೂಬಾಯಿ ಅವರ ಜನ್ಮನಿವಾಸವನ್ನು ವಸ್ತುಸಂಗ್ರಹಾಲಯವನ್ನಾಗಿಸುವ ಮಹದುದ್ದೇಶದಿಂದ 25 ಲಕ್ಷ ರೂ. ಗಳನ್ನು ಪುನರ್ ನಿರ್ಮಾಣ ಕಾರ್ಯಕ್ಕಾಗಿ ಒದಗಿಸಿದ್ದೆಂದು ಹೇಳುವ ಅನಾಥ ಫಲಕ ಇಂದು ಇತಿಹಾಸವಾಗಿದೆ. ಇಂಟ್ಯಾಕ್ ಸಂಸ್ಥೆ ಮಾರ್ಗದರ್ಶನದಲ್ಲಿ ಗಂಗಜ್ಜಿಯ ಮನೆ ನವೀಕರಣಗೊಂಡಿತ್ತು, ವಸ್ತುಸಂಗ್ರಹಾಲಯವಿತ್ತು, ಅಲ್ಲಿ ಸಂಗೀತಾಸಕ್ತರು ಆಗಮಿಸುತ್ತಿದ್ದರೆನ್ನುವುದೇ ಹುಸಿಯೆಂಬಂತೆ ಮನೆ ಹಾಳುಕೊಂಪೆಯಾಗಿದೆ. ಸೂರು ಕುಸಿದಿದೆ. ದುರ್ಬೀನು ಹಾಕಿ ಹುಡುಕಿದರೂ ಪುನರ್ ನಿರ್ಮಾಣ ಕಾರ್ಯದ ಒಂದಂಗುಲವೂ ಸಿಕ್ಕಲಿಕ್ಕಿಲ್ಲ. ಪಾಳುಬಿದ್ದ ಮನೆ ಜೀರ್ಣೋದ್ಧಾರಗೊಳಿಸಿ ಸಂರಕ್ಷಿಸುವ ಸರಕಾರದ ಇಪ್ಪತ್ತೈದು ಲಕ್ಷದ ಕಥೆಯನ್ನು ಸಾರುತ್ತದೆ. ಒಂದು ದಶಕದಲ್ಲಿ ಯಾರೂ ಇತ್ತ ಹೊರಳಿ ನೋಡಲೇ ಇಲ್ಲವೇ?
ಕನ್ನಡ ಸಾಹಿತ್ಯದ ಅನೇಕ ದಿಗ್ಗಜರ ಕರ್ಮಭೂಮಿ ಧಾರವಾಡ. ಕನ್ನಡ ಸಾಹಿತ್ಯಕ್ಕೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರ. ಈ ನೆಲದಲ್ಲಿ ಜನಿಸಿ ನೆಲೆಸಿದವರನ್ನು ನೆನೆಯುವುದೇ ಒಂದು ಅನಿರ್ವಚನೀಯ ಸಂತಸ. ಬೇಂದ್ರೆ ಭವನವನ್ನು ಬಿಟ್ಟರೆ ಬೇರೆ ಸಾಹಿತಿಗಳ ಸ್ವಗ್ರಹಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಕಟುವಾಸ್ತವ ! ಆನಂದಕಂದರ ಮನೆಯನ್ನೊಮ್ಮೆ ನೋಡಿ ಗಕ್ಕನೆ ನಿಂತುಬಿಟ್ಟಿದ್ದೆ ಪರಿವೆಯಿರದೆ. ಈಗ್ಯಾವ ಸ್ಥಿತಿಯಲ್ಲಿದೆಯೋ ಏನೊ. ಪೇಡಾ ನಗರಿ, ವಾಣಿಜ್ಯ ನಗರಿ, ವಿದ್ಯಾ ನಗರಿ ಎಂದೆಲ್ಲ ಅಗ್ಗಳಿಕೆಗೆ ಪಾತ್ರವಾಗಿರುವ ಧಾರವಾಡದ ಬೆಡಗಿ ಹೊರಗಿನಿಂದ ಬರುವ ಅತಿಥಿಗಳನ್ನು ಹೇಗೆಲ್ಲ ಸಂಭಾಳಿಸುತ್ತಾಳ್ಳೋ ಗೊತ್ತಿಲ್ಲ. ಊರ ತುಂಬ ಅಗೆದು ಬಿಟ್ಟ ರಸ್ತೆಗಳ ದುರಸ್ತಿ ನಿಧಾನಗತಿಯಲ್ಲಿ ಸಾಗುತ್ತಿದೆ. 2011ರಿಂದ ಆಮೆಗತಿಯಲ್ಲಿ ಸಾಗಿದ ಹುಬ್ಬಳ್ಳಿ-ಧಾರವಾಡ BRT ಸಂಚಾರಮಾರ್ಗ ಈಗ ಆರಂಭಗೊಂಡರೂ ಕಾರ್ಯಪೂರ್ತಿ ಆಗಿಲ್ಲ. ಅರ್ಧಂಬರ್ಧಗೊಂಡ ಸೇತುವೆಯ ಕಾರ್ಯ, ಸುಗಮ ವಾಹನ ಸಂಚಾರವನ್ನೇ ಅಸ್ತವ್ಯಸ್ತಗೊಳಿಸುವ ರಸ್ತೆಗಳು ಯಾವಾಗ ದುಸ್ತಿರಗೊಳ್ಳುತ್ತವೋ ನೋಡಬೇಕು.
ಜಿಲ್ಲಾಡಳಿತದ ಕಾರ್ಯವೈಖರಿಯನ್ನೊಮ್ಮೆ ನೋಡಿದರೆ- ಮನೆಯೊಳಗೆ ಮನೆಯೊಡೆಯನಿ¨ದ್ದಾನೊ ಇಲ್ಲವೊ ಎಂದು ಮತ್ತೆ ಯೋಚಿಸುವಂತಾಗಿದೆ.
ರೇಣುಕಾ ನಿಡಗುಂದಿ