ಮೈಸೂರು: ಮಹಾ ನಗರಪಾಲಿಕೆಯಲ್ಲಿ ದೋಸ್ತಿ ಮುಂದುವರಿಸಿರುವ ಜೆಡಿಎಸ್- ಬಿಜೆಪಿ ಪಾಲಿಕೆಯ ಸ್ಥಾಯಿ ಸಮಿತಿಗಳ ಚುನಾವಣೆಯಲ್ಲಿಯೂ ಗೆಲುವು ಸಾಧಿಸುವ ಮೂಲಕ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ತಮ್ಮದಾಗಿಸಿಕೊಂಡಿವೆ.
ನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಜ.24ರಂದು ನಡೆದ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯೊಂದಿಗೆ ಮೇಯರ್ ಆಗಿ ಬಿ.ಭಾಗ್ಯವತಿ ಹಾಗೂ ಉಪ ಮೇಯರ್ ಆಗಿ ಎಂ.ಇಂದಿರಾ ಅವಿರೋಧ ಆಯ್ಕೆಯಾಗಿದ್ದರು. ಇದೇ ವೇಳೆ ನಾಲ್ಕು ಸ್ಥಾಯಿ ಸಮಿತಿಗಳಿಗೆ ಕೇವಲ ಏಳು ಮಂದಿ ಪಾಲಿಕೆ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ನಗರ ಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಪಾಲಿಕೆ ಆಯುಕ್ತ ಜಿ.ಜಗದೀಶ್ ನೇತೃತ್ವದಲ್ಲಿ ಗುರುವಾರ ನಡೆದ ಸ್ಥಾಯಿ ಸಮಿತಿಗಳ ಚುನಾವಣೆಯಲ್ಲಿ ಮೂರು ಸ್ಥಾಯಿ ಸಮಿತಿ ಜೆಡಿಎಸ್ ಹಾಗೂ ಒಂದು ಸ್ಥಾಯಿ ಸಮಿತಿ ಬಿಜೆಪಿ ಪಾಲಾಯಿತು. ಆದರೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನ ಪಡೆಯಲು ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರೂ ಆಯ್ಕೆಯಾಗಲು ಸಾಧ್ಯವಾಗದೆ, ಮತ್ತೂಮ್ಮೆ ಮುಖಭಂಗ ಅನುಭವಿಸಿತು.
ಸಮಿತಿಗಳ ಆಯ್ಕೆ: ತೆರಿಗೆ ಹಣಕಾಸು, ಅಪೀಲು ಸ್ಥಾಯಿ ಸಮಿತಿಗೆ ಜೆಡಿಎಸ್‌ನ ಕೆ.ಪಿ.ಅಶ್ವಿನಿ ಅಧ್ಯಕ್ಷರಾಗಿ ಆಯ್ಕೆಗೊಂಡರು. ಈ ಸಮಿತಿಗೆ ಡಿ.ನಾಗಭೂಷಣ್, ರಾಜಲಕ್ಷ್ಮೀ, ಶಿವಕುಮಾರ್, ಪೈರೋಜ್ ಖಾನ್, ಎಂ.ಕೆ.ಶಂಕರ್, ಉಮಾಮಣಿ ಸದಸ್ಯರಾಗಿದ್ದಾರೆ.
ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಜೆಡಿಎಸ್‌ನ ಕೆ.ಟಿ.ಚೆಲುವೇಗೌಡ ಅಧ್ಯಕ್ಷರಾಗಿ ಆಯ್ಕೆಯಾದರು. ಸದಸ್ಯರಾಗಿ ಸಿ.ಎಸ್.ರಜನಿ, ಎಂ.ರಮೇಶ್, ಬಿ.ವಿ.ಮಂಜುನಾಥ್, ಟಿ.ರಾಮು, ಪುರುಷೋತ್ತಮ್, ಆರ್.ರವೀಂದ್ರ ಆಯ್ಕೆಯಾಗಿದ್ದಾರೆ.
ನಗರ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿಗೆ ಬಿಜೆಪಿಯ ಎಸ್.ಬಾಲಸುಬ್ರಹ್ಮಣ್ಯ (ಸ್ನೇಕ್ ಶ್ಯಾಮ್) ಅಧ್ಯಕ್ಷರಾಗಿ ಆಯ್ಕೆಯಾದರು. ಸಿ.ರಮೇಶ್, ಎಂ.ಶಿವಣ್ಣ, ಕೆಂಪಣ್ಣ, ಸುನೀಲ್‌ಕುಮಾರ್, ಅಯಾಜ್‌ಪಾಷಾ, ರತ್ನಮ್ಮ ಸಮಿತಿ ಸದಸ್ಯರಾಗಿದ್ದಾರೆ.
ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಜೆಡಿಎಸ್‌ನ ಎಸ್‌ಬಿಎಂ ಮಂಜು ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಬಿ.ಕೆ.ಪುಷ್ಪಾವತಿ, ಜಿ.ಎಚ್.ವನಿತಾ, ಅಯೂಬ್ ಖಾನ್, ಆರ್.ಲಿಂಗಪ್ಪ, ಪುಷ್ಪಲತಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರ ಅಧಿಕಾರಾವಧಿ 2018ರ ಸೆಪ್ಟಂಬರ್ 4ರವರೆಗೆ ಇರಲಿದೆ.