ಬೆಂಗಳೂರು: ಮಿಲಿಯನ್ ಓಟರ್ ರೈಸಿಂಗ್ ವತಿಯಿಂದ ಮಹದೇವಪುರದ ಅಪಾರ್ಟ್‌ಮೆಂಟ್ ಒಂದರಲ್ಲಿ ಭಾನುವಾರ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಮತದಾರರ ನಡುವೆ ನೇರ ಸಂವಾದ ನಡೆಯಿತು.
ಈ ವೇಳೆ ಸುತ್ತಮುತ್ತಲ ಅಪಾರ್ಟ್‌ಮೆಂಟ್‌ಗಳ ಮತದಾರರ ಪ್ರಶ್ನೆಗಳಿಗೆ ಉತ್ತರಿಸಿದ ಅಭ್ಯರ್ಥಿಗಳು, ತಮ್ಮ ಕಾರ್ಯ ಸೂಚಿ ಕುರಿತು ಮಾಹಿತಿ ನೀಡಿದರು. ಗೆದ್ದರೆ ಜನಪರ ಕಾಳಜಿಯಿಂದ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್, ಕೇಂದ್ರ ಸರ್ಕಾರದ ಯೋಜನೆಗಳಿಂದ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ. ಎರಡು ಬಾರಿ ಸಂಸದನಾಗಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಹೀಗಾಗಿ, ಜನರು ನನ್ನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮಾತನಾಡಿ, ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ವಿದೇಶದ ನಗರಗಳ ಜತೆ ಸ್ಪರ್ಧೆಗೆ ಪೂರಕವಾಗಿ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತ ಮಾಡುತ್ತೇನೆ.
ಸಂಸತ್ತಿನಲ್ಲಿ ನಗರದ ಸಮಸ್ಯೆಗಳ ಬಗ್ಗೆ ಗಟ್ಟಿ ಧ್ವನಿ ಎತ್ತುತ್ತೇನೆ. ಇನ್ನು ಆಡಳಿತದಲ್ಲಿ ಪಾರದರ್ಶಕತೆಗಾಗಿ ಯುಪಿಎ ಸರ್ಕಾರ ಮಾಹಿತಿ ಹಕ್ಕು ಕಾಯ್ದೆ ರೂಪಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಕಾಯ್ದೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಿದೆ ಎಂದರು.
ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಮಾತನಾಡಿ, ಮತದಾರರು ಯಾವುದೇ ಪಕ್ಷಕ್ಕೆ ಮಣೆ ಹಾಕದೇ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಸರ್ಕಾರಕ್ಕೆ ಗುರಿ ಮತ್ತು ದೂರದೃಷ್ಟಿ ಇಲ್ಲದಿದ್ದರೆ ಜನರಿಗೆ ಮೂಲ ಸೌಕರ್ಯಗಳ ಸಮಸ್ಯೆ ತಲೆದೋರುತ್ತದೆ.
ಈ ಬಾರಿ ಯಾವುದೇ ಪಕ್ಷದ ಮುಖಂಡರ ಹಿಡಿತದಲ್ಲಿ ಇರಬಾರದು ಎಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ ಎಂದರು. ಈ ವೇಳೆ ಅಪಾರ್ಟ್‌ಮೆಂಟ್‌ಗಳ ಮತದಾರರು ನಮ್ಮ ಕುಂದು ಕೊರತೆ, ಬೇಡಿಕೆಗಳನ್ನು ಹೇಳಿಕೊಂಡರು. ಜತೆಗೆ ತಮ್ಮ ಬೇಡಿಕೆಗಳನ್ನು ಅಭ್ಯರ್ಥಿಗಳು ಪ್ರನಾಳಿಕೆಯಲ್ಲಿ ಸೇರಿಸಿಕೊಳ್ಳಲು ಮನವಿ ಮಾಡಿದರು.