ಬೆಂಗಳೂರು: ಹಿಂದೂ ಸಂಘಟನೆಗಳ ಪ್ರತಿಭಟನೆಯ ನಂತರ ಗುರುವಾರ ಇಲ್ಲಿ ನಡೆಯಬೇಕಿದ್ದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ವೀರ್ ದಾಸ್ ಅವರ ಕಾರ್ಯಕ್ರಮವನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ.
ಈ ಕಾರ್ಯಕ್ರಮದಿಂದ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಆರೋಪಿಸಿ ಸಂಘಟನೆಗಳು ಪ್ರತಿಭಟನೆಯನ್ನು ನಡೆಸಿದ್ದವು.ಮಾಹಿತಿ ಪ್ರಕಾರ ಮಲ್ಲೇಶ್ವರಂನ ಚೌಡಯ್ಯ ಸ್ಮಾರಕ ಭವನದಲ್ಲಿ ಸಂಜೆ 5.30ಕ್ಕೆ ಕಾರ್ಯಕ್ರಮ ನಡೆಯಬೇಕಿತ್ತು.ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತ, ಮಹಿಳೆಯರು ಮತ್ತು ಹಿಂದೂ ಧರ್ಮವನ್ನು ಅವಮಾನಿಸಿದ್ದ ಹಾಸ್ಯನಟನ ಕಾರ್ಯಕ್ರಮ ರದ್ದತಿ ಸ್ವಾಗತಾರ್ಹ ಎಂದು ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಮೋಹನ್ ಗೌಡ ಹೇಳಿದ್ದಾರೆ.
“ನಾವು ಕಾರ್ಯಕ್ರಮದ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು. . ಹಿಂದೂ ಸಂಘಟನೆಗಳ ಆಂದೋಲನದಿಂದಾಗಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಹಾಸ್ಯದ ಹೆಸರಿನಲ್ಲಿ ಹಿಂದೂ ಧರ್ಮವನ್ನು ಅವಹೇಳನ ಮಾಡುವವರನ್ನು ಎಲ್ಲೆಂದರಲ್ಲಿ ಬಹಿಷ್ಕರಿಸಬೇಕು ಎಂದು ಗೌಡ ಹೇಳಿಕೆ ನೀಡಿದ್ದಾರೆ.
ಒಂದು ವರ್ಷದ ಹಿಂದೆ ವೀರ್ ದಾಸ್ ಭಾರತವನ್ನು ಟೀಕಿಸಿದಾಗ ದೇಶದಲ್ಲಿ ಸಾಕಷ್ಟು ಗದ್ದಲ ಎದ್ದಿತ್ತು.